ಹರಿಹರ: ಮಿತಿ ಮೀರಿದ ಮಣ್ಣು ಸಾಗಣೆಗೆ ಬ್ರೇಕ್ ಹಾಕದ ತಾಲೂಕು ಆಡಳಿತದಿಂದ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿದೆ. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಹನಗವಾಡಿ ಕ್ರಾಸ್ ಬಳಿಯ ಉಡುಪಿ ಹೋಟೆಲ್ ಬಳಿ ಈ ಅಪಘಾತ ನಡೆದಿದೆ.
ಮMಣ್ಣು ಸಾಗಣೆಯ ಟಿಪ್ಪರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ದವಣಗೆರೆ ತಾಲ್ಲೂಕಿನ ಹಳೆಬಾತಿ ಗುಡ್ಡದ ಕ್ಯಾಂಪ್ ನಿವಾಸಿ ತರಗಾರ ಮೇಸ್ತ್ರಿ ಆಕಾಶ್ (22) ಹಾಗೂ ಅದೇ ಗ್ರಾಮದ ರಾಕೇಶ್ (22) ಮೃತರು.
ಹರಿಹರ ತಾಲ್ಲೂಕಿನ ಹಲಸಬಾಳು ಗ್ರಾಮಕ್ಕೆ ಕೆಲಸದ ನಿಮಿತ್ತ ಹೋಗಿ ಬರುವುದಾಗಿ ಹೇಳಿ ಇಬ್ಬರು ಬೈಕಿನಲ್ಲಿ ಹೊರಟಿದ್ದರು. ಹೆದ್ದಾರಿಯಲ್ಲಿ ಸಾಗುವಾಗ ಹಿಂಬದಿಯಿಂದ ಟಿಪ್ಪರ್ ಗುದ್ದಿ ಇವರ ಮೇಲೆ ಹರಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮರಣ ಹೊಂದಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಹಳೆಬಾತಿ ಗುಡ್ಡದ ಕ್ಯಾಂಪ್ನಲ್ಲಿ ಶೋಕ ಮನೆಮಾಡಿತ್ತು. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಾದರೂ ತಾಲೂಕು ಆಡಳಿತ ಮಣ್ಣಿನ ಹೆಸರಿನಲ್ಲಿ ಹಣ ಮಾಡುತ್ತಿರುವ ದಂಧೆಗೆ ಕಡಿವಾಣ ಹಾಕುತ್ತಾ ಎಂದು ಕಾದು ನೋಡಬೇಕಿದೆ.