ದಾವಣಗೆರೆ :  ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ನ ದುರಸ್ತಿ ಕಾರ್ಯ ಯಶಸ್ವಿಯಾಗಿದ್ದು, ಡ್ಯಾಮ್ ತಜ್ಞ ಕನ್ನಯ್ಯ ಅವರು ಕಲ್ಯಾಣ ಕರ್ನಾಟಕಕ್ಕೆ ಭಗೀರಥರಾಗಿದ್ದಾರೆ. ಆದ್ದರಿಂದ ಇವರಿಗೆ ರಾಜ್ಯ ಸರ್ಕಾರ *”ಕರ್ನಾಟಕ ರತ್ನ”* ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಜಿಲ್ಲಾ ಬಿಜೆಪಿ, ರೈತ ಹೋರಾಟಗಾರ ಬಿ.ಎಂ.ಸತೀಶ್  ಆಗ್ರಹಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿ, ತುಂಗ ಭದ್ರಾ ಡ್ಯಾಂ ನ 5 ಸ್ಟಾಪ್ ಲಾಗ್ ಅಳವಡಿಕೆಯ ಕಾರ್ಯ ಯಶಸ್ವಿಯಾಗಿರುವುದು ಇಡೀ ಕಲ್ಯಾಣ ಕರ್ನಾಟಕಕ್ಕೆ ಖುಷಿಯಾದ ಸಂಗತಿ. ಸತತ ಮೂರು ದಿನಗಳ ಭಗೀರಥ ಪ್ರಯತ್ನಕ್ಕೆ ಕೊನೆಗೂ ಫಲಸಿಕ್ಕಿದೆ. ಪೋಲಾಗಿ ಹರಿದು ಹೋಗ್ತಿದ್ದ ತುಂಗಭದ್ರೆಯನ್ನ ಕೊನೆಗೂ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ತುಂಗಭದ್ರೆಯನ್ನ ಅವಲಂಭಿಸಿರೋ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. 

ಕನ್ನಯ್ಯ ನಾಯ್ಡು ನೇತೃತ್ವದ ತಂಡದ ಕಾರ್ಯಕ್ಕೆ ಕೋಟ್ಯಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಕಳೆದ ಒಂದು ವಾರದಿಂದ ವ್ಯರ್ಥವಾಗಿ ಹರಿದು ಪೋಲಾಗುತ್ತಿದ್ದ ನೀರನ್ನು 3 ದಿನ ಹಗಲು ರಾತ್ರಿ ಎನ್ನದೆ ಜಿಂದಾಲ್, ನಾರಾಯಣ ಮತ್ತು ಹಿಂದುಸ್ತಾನ್ ಇಂಜಿನಿಯರ್ ಗಳು ಸೇರಿದಂತೆ 50ಕ್ಕೂ ಕಾರ್ಮಿಕರ ಕೆಲಸ ಶ್ಲಾಘನೀಯವಾದದ್ದು. 

ಭೋರ್ಗರೆವ ನೀರಿನಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರಣ ರೋಚಕ ರೀತಿಯಲ್ಲಿ ಕೆಲಸ ಮಾಡಿದ್ದು ನೋಡಿದ್ರೆ ಎಂತಹವರ ಎದೆ ಝಲ್ ಎನ್ನುವಂತಿತ್ತು. ಇಂತಹ ಸಾಹಸಮಯ ಕೆಲಸ ಮಾಡಿದವರನ್ನು ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಪ್ರಂಶಿಸಬೇಕು ಎಂದು ಹೇಳಿದ್ದಾರೆ. 

ಹೊಸಪೇಟೆಯ ಕ್ರೇನ್ ಕೆಲಸಗಾರ ರಘು ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕ್ರೇನ್ ಗೆ ಹಗ್ಗ ಕಟ್ಟಿಕೊಂಡು ನೀರಿನಲ್ಲಿ ಇಳಿದು ಕೆಲಸ ಮಾಡುತ್ತಿದ್ದ ಸನ್ನಿವೇಶ ಮೈ ಜುಂಮ್ಮೆನ್ನುವಂತ್ತಿತ್ತು. ಇಂತಹವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದವರು ಹೇಳಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿ ನಡೆದ ಅವಘಡದಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಇತರೆ ಜಲಾಶಯಗಳ ಸಂರಕ್ಷಣೆಗೆ ಕ್ರಮವಹಿಸಬೇಕು. ಪ್ರತಿ ವರ್ಷ ಜಲಾಶಯಗಳ ಗೇಟುಗಳನ್ನು ಪರಿಶೀಲನೆ ಮಾಡಿ, ಗ್ರೀಸ್ ಬಣ್ಣ ಹಚ್ಚಿ ನಿರ್ವಹಣೆ ಮಾಡಬೇಕು. ಇದು ಕ್ರಮಬದ್ಧವಾಗಿ ನಡೆಯುತ್ತಿಲ್ಲ. ಇದು ರಾಜ್ಯ ಸರ್ಕಾರದ ಲೋಪವಾಗಿದೆ. ತುಂಗಭದ್ರಾ ಜಲಾಶಯದ ಅವಘಡ ಒಂದು ಪಾಠ ಎಂದು ಭಾವಿಸಿ, ಡ್ಯಾಂಗಳ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಜಲಾಶಯಗಳು ನಾಡಿನ ಜನರ ಜೀವನಾಡಿ. ಕೃಷಿಗೆ ಮತ್ತು ಕುಡಿಯುವ ನೀರಿಗೆ ಮೂಲಾಧಾರ. ಸಂರಕ್ಷಣೆ ವಿಷಯದಲ್ಲಿ ಸಣ್ಣ ಲೋಪವಾದರೂ ಭಾರಿ ಬೆಲೆ ತೆರಬೇಕಾಗುತ್ತದೆ. ಜಲಾಶಯಗಳ ನಿರ್ವಹಣೆ ಮಾಡುವ ಕೇಂದ್ರ ಜಲ ಆಯೋಗ ನೀಡುವ ಶಿಫಾರಸ್ಸುಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯ. ಅಣೆಕಟ್ಟು ಮತ್ತು ಜನರ ಸುರಕ್ಷತೆಗಾಗಿ ಗಮನಹರಿಸಬೇಕು ಎಂದಿದ್ದಾರೆ.

ಭದ್ರಾ ಡ್ಯಾಂ: ರೈತರ ಪ್ರಮುಖ ಆಗ್ರಹ

*1962ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಸಹಜವಾಗಿ ಡ್ಯಾಂನ ತಳಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. (1)ಈ ಸೋರಿಕೆ ತಡೆಗಟ್ಟಬೇಕು. (2)ಹಳೆಯಾದಾಗಿರುವ ಡ್ಯಾಂ ಗೇಟ್ ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು. (3) ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್ ಗಳನ್ನು ರೀ ಕಂಡೀಷನ್ ಮಾಡಿಸಬೇಕು. (4) ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು. (5) ಡ್ಯಾಂನ ಸುತ್ತಲೂ ಬೇಲಿ ನಿರ್ಮಿಸಿ ಸುಭದ್ರತೆ ಕಾಪಾಡಬೇಕು. (6) ಡ್ಯಾಂನ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗ ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆ (DRIP: Dam Rehabilitation and Improvement Project) ಅಡಿಯಲ್ಲಿ ಡ್ಯಾಂನ ಸುರಕ್ಷತೆಗೆ ₹100 ಕೋಟಿಗಳ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಈ ₹100 ಕೋಟಿನ್ನು ಬಿಡುಗಡೆ ಮಾಡಲಾರದೆ, ಕರ್ನಾಟಕ ನೀರಾವರಿ ನಿಗಮದ ಮೂಲಕ ಕೇಂದ್ರ ಸರ್ಕಾರಕ್ಕೆ ಮೋರೆ ಹೋಗಿ ಸುಮ್ಮನೆ ಕೈಕಟ್ಟಿ ಕುಳಿತಿದೆ. ಇದು ಸರಿಯಲ್ಲ. ಡ್ಯಾಂನ ಉಳಿವಿಗಾಗಿ ₹100 ಕೋಟಿ ಬಿಡುಗಡೆ ಮಾಡಲಾರದಷ್ಟು ಬಡತನ ರಾಜ್ಯ ಸರ್ಕಾರಕ್ಕೆ ಬಂದಿಲ್ಲ. ಆದ್ದರಿಂದ ಈ ₹100 ಕೋಟಿಯನ್ನು ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿ, ಡ್ಯಾಂನ ಸುರಕ್ಷತೆ ಕಾಪಾಡಬೇಕು ಎಂದು ಬಿ.ಎಂ.ಸತೀಶ್ ಆಗ್ರಹಿಸಿದ್ದಾರೆ

Share.
Leave A Reply

Exit mobile version