ದಾವಣಗೆರೆ.
ಕಾಂಗ್ರೆಸ್ ನಾಯಕರ ಮಕ್ಕಳು, ಮೊಮ್ಮಕ್ಕಳ ಆಸ್ತಿ ಕೂಡ ವಕ್ಫ್ಗೆ ಹೋಗಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಜಿಎಂಐಟಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನ ಆದೇಶವೊಂದರಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲದೇ ಇದ್ದರೆ ದಾಖಲು ಮಾಡಿದ್ದನ್ನು ರದ್ದುಪಡಿಸಲು ಅವಕಾಶ ಇದೆ. ವಕ್ಫ್ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಮಂತ್ರಿಗಳು ಬಿಜೆಪಿ ಪಾಲಿಟಿಕ್ಸ್ ಮಾಡುತ್ತಿದೆ ಎನ್ನುತ್ತಿದ್ದಾರೆ. ನಾಳೆ ನಿಮ್ಮ ಮಕ್ಕಳು, ಮೊಮ್ಮಕ್ಕಳ ಆಸ್ತಿಯೇ ಹೋಗಬಹುದು ಎಂಬುದನ್ನು ಅಂತಹ ಕಾಂಗ್ರೆಸ್ಸಿನ ಸಚಿವರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯದ ರೈತರು, ಜನ ಸಾಮಾನ್ಯರು, ಮಠ, ಮಂದಿರಗಳ ಆಸ್ತಿ ವಕ್ಫ್ಗೆ ಸೇರಿದ್ದೆಂದು ನೋಟೀಸ್ ನೀಡಿ, ಮುಟೇಷನ್ ಪ್ರಕ್ರಿಯೆ ಹಿಂಪಡೆಯುವAತೆ ಆದೇಶ ಹೊರಡಿಸುವ ಮೂಲಕ ಕಣ್ಣೊರೆಸುವ ತಂತ್ರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈಗ ಮುಟೇಷನ್ ಆದೇಶ ಹಿಂಪಡೆಯುವAತೆ ಆದೇಶ ಹೊರಡಿಸಿದ ಕಾಂಗ್ರೆಸ್ ಸರ್ಕಾರ ಮುಂದೆ ನೋಟೀಸ್ ನೀಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು ಎಂದು ಪ್ರಶ್ನಿಸಿದರು.
ವಿಧಾನ ಸಭಾ ವಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಲಿಕ್ಕರ್ ಲಾಬಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಕ್ಕೆ ಇದೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ಸಿಗರು ಸಾಕ್ಷಿ ಕೇಳುತ್ತಿದ್ದಾರೆ. ಹಣಕಾಸು ಕಾರ್ಯದರ್ಶಿಯು ಲಿಕ್ಕರ್ ದೂರಿನ ಬಗ್ಗೆ ಸಭೆ ಮಾಡಿದ್ದಕ್ಕಿಂತ ಸಾಕ್ಷಿ ಬೇಕೆ? ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 16 ತಿಂಗಳಲ್ಲೇ 16 ದೊಡ್ಡ ದೊಡ್ಡ ಭ್ರಷ್ಟಾಚಾರ ಮಾಡಿದೆ. ಕಳೆದ ಅಧಿವೇಶನದಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಹಗರಣವೊಂದೇ ಇತ್ತು. ಈಗ ಬರುವ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಪೂರ್ತಿ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರದ ಒಬ್ಬೊಬ್ಬರ ಬ್ರಹ್ಮಾಂಡ ಭ್ರಷ್ಟಾಚಾರವನ್ನೂ ಮುಂದಿಡಬೇಕಾಗುತ್ತದೆ. ಇದೀಗ ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಸಿಎಂಗೆ ಬುದ್ಧಿಯೆಂಬುದೇ ಒಂದು ತರಹ ಆಗಿ ಹೋಗಿದೆ. ಮೂಡಾ ಸೈಟ್ ಹಗರಣ, ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ನಂತರ ಸಿದ್ದರಾಮಯ್ಯನವರಿಗೆ ದೇವರು ನೆನಪಾಗುತ್ತಿದ್ದಾರೆ. ಈ ಸರ್ಕಾರವಂತೂ ಬಹಳ ದಿನ ಉಳಿಯಲ್ಲ. ಮುಂದಿನ ಅಧಿವೇಶನದೊಳಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬಹುದು ಎಂದು ಅವರು ಭವಿಷ್ಯ ನುಡಿದರು.
ನಂತರ ಆರ್.ಅಶೋಕ ನಗರದ ಪಿಜೆ ಬಡಾವಣೆಗೆ ಭೇಟಿ ನೀಡಿ ವಕ್ಫ್ಗೆ ಸೇರಿದೆ ಎಂದು ದಾಖಲೆಗಳಿರುವ ಬಡಾವಣಗೆ ಭೇಟಿ ನೀಡಿ ಸ್ಥಳಿಯರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ವಿಪ ಸದಸ್ಯ ಎನ್.ರವಿಕುಮಾರ, ಕೆ.ಎಸ್.ನವೀನ, ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಜಿ.ಎಸ್.ಅನಿತಕುಮಾರ, ಟಿ.ಶ್ರೀನಿವಾಸ ದಾಸಕರಿಯಪ್ಪ ಇತರರು ಇದ್ದರು