ಭದ್ರಾವತಿ/ದಾವಣಗೆರೆ

ನಗರ ಸೇರಿದಂತೆ ಹೊಳೆಹೊನ್ನೂರು ಭಾಗದಲ್ಲಿ ಗುರುವಾರ ಸಂಜೆ ಸುಮಾರು 1 ತಾಸು ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ಕಾದ ಬಾಣಲಿಯಂತಾಗಿದ್ದ ಧರೆ ತಂಪಾಗಿದೆ.

ಕಳೆದ ಕೆಲವು ದಿನಗಳಿಂದ ಸುಡು ಬಿಸಿಲು ವ್ಯಾಪಕವಾಗಿದ್ದು, ಬಿಸಿಲಿನ ತಾಪದಿಂದ ಜನರು ಕಂಗೆಟ್ಟಿದ್ದರು. ಸುಮಾರು 1 ತಾಸು ಸುರಿದ ಮಳೆಯಿಂದಾಗಿ ಬಿಸಿಲಿನಿಂದ ಬೇಯುತ್ತಿದ್ದ ಜನರು ಖುಷಿಯಾದರು. ಮಕ್ಕಳು ಮಳೆಯಲ್ಲಿ ಮಿಂದೆದ್ದರು. ಹಳ್ಳಕೊಳ್ಳಗಳಲ್ಲಿ ಸ್ವಲ್ಪ ನೀರು ತುಂಬಿಕೊಂಡಿದ್ದು, ಜನರು ನಿಟ್ಟುಸಿರು ಬಿಟ್ಟರು. ಇನ್ನು ಗಾಳಿ ಬಂದ ಕಾರಣ ಮಳೆ ವೇಗ ಸ್ವಲ್ಪದರಲ್ಲಿಯೇ ಕಡಿಮೆ ಆಯಿತು. ಸಂಜೆ ಮೇಲೆ ಶೀತವಾತಾವರಣವಿತ್ತು. ಎಂದಿನಂತೆ ವಿಐಎಎಸ್ ಎಲ್ ರಸ್ತೆ, ಕ್ವಾರ್ಟಸ್ ಗಳಲ್ಲಿ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದವು. ಮಳೆ ನೋಡಿದ ಜನರು ಒಂದು ರೌಂಡ್ ಹಾಕಿ ಮಣ್ಣಿನ ಮಕರಂದ ಸವಿದರು.

ಯುಗಾದಿ ನಂತರದ ಮೊದಲ ಮಳೆಯಾಗಿದ್ದು, ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಬೀಳುವ ನಿರೀಕ್ಷೆ ಇದೆ. ಈಗಾಗಲೇ ಕೆಲವು ಕೆರೆ ಹಾಗು ಹಳ್ಳಕೊಳ್ಳಗಳು, ಜಲ ಮೂಲಗಳು ಸಂಪೂರ್ಣವಾಗಿ ಬರಿದಾಗಿವೆ. ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಭದ್ರಾ ಜಲಾಶಯ ಸಮೀಪದಲ್ಲಿದ್ದರೂ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಮಳೆ ಒಂದಿಷ್ಟು ನಿರೀಕ್ಷೆ ಹುಟ್ಟಿಸಿದೆ.

ಅಡಕೆಗೆ ಜೀವ

ಕೆಲ ಕಾಲ ಮಳೆ ಬಂದ ಕಾರಣ ಅಡಕೆಗೆ ಜೀವ ಬಂದಿತು. ಇದರಿಂದ ರೈತರು ನಿಟ್ಟುಸಿರುಬಿಟ್ಟರು. ಭೂಮಿ ಹಸಿಯಾಗಿದ್ದ ಕಾರಣ ಒಂದೆರಡು ದಿನ ಅಡಕೆ ತೋಟಕ್ಕೆ ನೀರು ಬಿಡುವ ಅವಶ್ಯಕತೆಯಿಲ್ಲ

ದಾವಣಗೆರೆ ; ದಾವಣಗೆರೆ ನಗರದಲ್ಲಿ ಮಳೆಯಾಗದೇ ಹೋದರೂ, ಗಾಳಿ, ಸಿಡಿಲು ಜೋರಾಗಿತ್ತು. ಇಂದು ಚುನಾವಣಾ ನಾಮಪತ್ರ ಸಲ್ಲಿಕೆಗೆ ಸಾಕಷ್ಟು ಜನರು ಒಂದಿಷ್ಟು ತೊಂದರೆ ಅನುಭವಿಸಿದರು. ಆದರೆ ತಂಪಿನ ವಾತಾವರಣ ಮುಂದುವರೆದಿತ್ತು.

ಕೃಷಿ ಚಟುವಟಿಕೆ ಚುರುಕು: ಮಳೆ ಆರಂಭವಾಗುತ್ತಿದ್ದಂತೆ ರೈತರು ಕೃಷಿ ಚಟುವಟಿಕೆಯಲ್ಲಿ ಬಿರುಸಿನಿಂದ ತೊಡಗಿಕೊಂಡಿದ್ದಾರೆ. ಭೂಮಿ ಹದ ಮಾಡುವುದು, ಉಳುವುದು, ಬಿತ್ತನೆ ಮತ್ತಿತರ ಕೆಲಸಗಳಲ್ಲಿ ಮಗ್ನರಾಗಿದ್ದರು. ರಸಗೊಬ್ಬರಗಳನ್ನು ಖರೀದಿಸಲು ಸಜ್ಜಾಗಿದ್ದರು. ಅಲ್ಲದೇ ಕೃಷಿ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಲು ರೆಡಿಯಾದರು. ಮಳೆ ಬಂದ ಲಾರಣ ಈಗ ಹೊಲ ಗದ್ದೆಗಳಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿರುವ ರೈತರು ಕಂಡುಬರುತ್ತಿದ್ದಾರೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಕೆ. ಈ ಬಾರಿ ಬೇಸಿಗೆಯಲ್ಲಿ ನೀರಿನ ಬರದಿಂದ ಅಡಕೆ ತೋಟಕ್ಕೆ ನೀರುಣಿಸಲಾರದೆ ಕೃಷಿಕರು ಚಿಂತಿತರಾಗಿದ್ದರು. ಈಗ ಮಳೆ ಆರಂಭವಾಗಿರುವುದರಿಂದ ಅಡಕೆ ಹಾಗೂ ತೆಂಗಿನ ತೋಟಗಳು ಮತ್ತೆ ಹಸಿರು ಬಣ್ಣಕ್ಕೆ ತಿರುಗಿವೆ.

Share.
Leave A Reply

Exit mobile version