ಜಗಳೂರು:  ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಬಳಿ ಸೋಮವಾರ ಮಣ್ಣುತುಂಬಿದ ಟಿಪ್ಪರ್ ಲಾರಿ ಟ್ರ್ಯಾಕ್ಟರ್‍ಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ಮುಗುಚಿಬಿದ್ದಿದ್ದು ಟ್ರ್ಯಾಕ್ಟರ್ ಚಾಲಕ ಮತ್ತು ಮತ್ತೊಬ್ಬ ವ್ಯಕ್ತಿಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೌರಮ್ಮನಹಳ್ಳಿ ಗ್ರಾಮದ ಮಧು ಎಂಬ ರೈತನಿಗೆ ಸೇರಿದ ಟ್ರ್ಯಾಕ್ಟರ್ ಪಲ್ಲಾಗಟ್ಟೆಗೆ ಹೊರಟಿತ್ತು. ಅದೇ ಮಾರ್ಗವಾಗಿ ಜಮ್ಮಾಪುರ ಕೆರೆಯಿಂದ ಮಣ್ಣುತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ ಓವರ್ ಟೆಕ್ ಮಾಡಲು ಹೋಗಿ ಹಿಂಬದಿಯಿಂದ ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಪವನ್ ಕುಮಾರ್ ಮತ್ತು ಅವರ ಜೊತೆ ಕುಳಿತಿದ್ದ ಚಿದಾನಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಟ್ರ್ಯಾಕ್ಟರ್ ನುಜ್ಜುಗುಜ್ಜಾಗಿದ್ದು ಟಿಪ್ಪರ್ ಲಾರಿ ಬಂಗಾರಿಗುಡ್ಡ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಅಪಘಾತವಾದ ತಕ್ಷಣ ಚಾಲಕ ಪರಾರಿಯಾಗಿದ್ದು ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಲಾರಿಗಳ ಹಾವಳಿ

ಪರ್ಮಿಟ್ ಇಲ್ಲದೇ ವೇಗವಾಗಿ ಬರುವ ಮಣ್ಣು ತುಂಬುವ ಲಾರಿಗಳ ಓಡಾಟ ನಿತ್ಯ ಜನರನ್ನು ಹೈರಾಣುಗೊಳಿಸಿದೆ. ಕಿರಿದಾದ ರಸ್ತೆಯಲ್ಲಿ ಎದುರು ಬರುವ ವಾಹನಗಳನ್ನು ಲೆಕ್ಕಿಸದೇ ಹಣದ ಆಸೆಗೆ ವೇಗವಾಗಿ ಚಲಾಯಿಸುವ ಕಾರಣ ಅಪಘಾತವಾಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಟ್ಟಿಗೆಹಳ್ಳಿ, ತೋರಣಗಟ್ಟೆ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಿತ್ತುಹೋದ ರಸ್ತೆಗಳು

25 ರಿಂದ 30 ಟನ್ ಮಣ್ಣು ತುಂಬಿಕೊಂಡು ಹೋಗುವ ಲಾರಿಗಳಿಂದ ಗ್ರಾಮೀಣ ರಸ್ತೆಗಳ ಟಾರ್ ಕಿತ್ತು ಹೋಗಿವೆ. ಸಂಬಂಧ ಪಟ್ಟ ತಹಶೀಲ್ದಾರ್ ಆಗಲೀ, ಲೋಕೋಪಯೋಗಿ ಇಲಾಖೆ ಎಇಇಗಳಾಗಲಿ ಇತ್ತಕಡೆ ಗಮನಹರಿಸಿಲ್ಲ. ರೈತರು, ಬೈಕ್ ಸವಾರರು ಬೃಹತ್ ಲಾರಿಗಳ ಹಾವಳಿಯಿಂದ ಸಂಚರಿಸುವುದೇ ಕಷ್ಟವಾಗಿದೆ ಎಂದು ಸಾರ್ವಜನಿಕರು ವ್ಯವಸ್ಥೆ ವಿರುದ್ಧ ಬೇಸರ ವ್ಯಕ್ತಪಡಿಸಿದರು.

 

Share.
Leave A Reply

Exit mobile version