ದಾವಣಗೆರೆ :ರಾಜ್ಯ 28 ಲೋಕಸಭಾ ಕ್ಷೇತ್ರಗಳಲ್ಲಿ ಸರಿ ಸುಮಾರು 22 ಕ್ಷೇತ್ರಗಳಲ್ಲಿ ಜಿದ್ದಾ ಜಿದ್ದಿ ಏರ್ಪಟ್ಟಿದೆ. ಆದ್ರೆ ಇನ್ನುಳಿದ 6 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿಲ್ಲ. ಮಾಧ್ಯಮಗಳು ಕೂಡ ಆ ಕ್ಷೇತ್ರಗಳನ್ನ ಹೆಚ್ಚು ಫೋಕಸ್ ಮಾಡಲ್ಲ. ಅಂತ ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಧಾರವಾಡ.. ಈ ಕ್ಷೇತ್ರದಲ್ಲಿ ಹಾಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಿಜೆಪಿ ಅಭ್ಯರ್ಥಿಯಾಗಿ ಸತತ 4ನೇ ಸಲ ಗೆದ್ದು ಬೀಗೋ ಆತ್ಮವಿಶ್ವಾಸದಲ್ಲಿದ್ದಾರೆ. ಯಾಕಂದ್ರೆ ಕಾಂಗ್ರೆಸ್ ಪಾರ್ಟಿ ಈಗಾಗಲೇ ಇಲ್ಲಿಂದ ಯುವಕ ವಿನೋದ್ ಅಸೂಟಿಗೆ ಟಿಕೆಟ್ ಕೊಟ್ಟಿದೆ.. ಇವರ ವಿರುದ್ಧ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಗೆಲ್ಲೋದು ಗ್ಯಾರಂಟಿ ಅನ್ನೋ ಮಾತುಗಳು ಕೇಳಿ ಬರ್ತಾಯಿದ್ವು. ಆದ್ರೀಗ ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೆ, ದಿಂಗಾಲೇಶ್ವರ ಸ್ವಾಮೀಜಿ ಅಖಾಡಕ್ಕಿಳಿದೋ ಫಿಕ್ಸ್ ಆಗಿದೆ. ಇದ್ರಿಂದ ಇಷ್ಟು ದಿನ ತಾವು ಸೇಫ್ ಅಂತದ್ಕೊಂಡಿದ್ದ ಪ್ರಹ್ಲಾದ್ ಜೋಶಿ ಅವರಿಗೆ ಈಗ ಪುಕಪುಕ ಶುರುವಾಗಿದೆ. ಹಾಗಾದ್ರೆ ದಿಂಗಾಲೇಶ್ವರ ಸ್ವಾಮೀಜಿ ದಿಢೀರ್ ಧಾರವಾಡ ಅಖಾಡಕ್ಕೆ ಎಂಟ್ರಿಕೊಡ್ತಾಯಿರೋದ್ಯಾಕೆ.? ಏನಿದು ಧಾರವಾಡದಲ್ಲಿ ಲಿಂಗಾಯತ ಅಸ್ಮಿತೆಯ ಅಸ್ತ್ರ ಅಂದ್ರಾ.?
ಧಾರವಾಡ ಲೋಕಸಭಾ ಕ್ಷೇತ್ರ.. ಲಿಂಗಾಯತರೇ ಸೋಲು ಗೆಲುವನ್ನ ನಿರ್ಧರಿಸೋ ಕ್ಷೇತ್ರ.. ಆದ್ರೆ ಇಲ್ಲಿಂದ ಸತತ 4 ಸಲ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಷಿ ಗೆದ್ದು ಹೋಗಿದ್ರು. ಈ ಸಲವೂ ಗೆದ್ರೆ 5ನೇ ಸಲ ನಿರಂತರವಾಗಿ ಇಲ್ಲಿಂದ ಗೆದ್ದು ಹೋದ ಬಿಜೆಪಿ ನಾಯಕರಾಗ್ತಾರೆ. .ನಿಮಗೆ ಗೊತ್ತಿರ್ಲಿ, ಕಾಂಗ್ರೆಸ್ ಬಿಟ್ಟು ಇತ್ತೀಚೆಗಷ್ಠೇ ಬಿಜೆಪಿಗೆ ಹೋಗಿದ್ದ ಜಗದೀಶ್ ಶೆಟ್ಟರ್ ಅವರು, ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಶೆಟ್ಟರ್ ಅವರಿಗೆ ಧಾರವಾಡ ಕ್ಷೇತ್ರದ ಟಿಕೆಟ್ ಕೈ ತಪ್ಪಿಸಿದ್ದರ ಹಿಂದೆ ಜೋಷಿ ಕೈವಾಡ ಇದೆ ಅನ್ನೋ ಮಾತುಗಳಿವೆ. ಅಂದ್ರೆ ಧಾರವಾಡದಲ್ಲಿ ಲಿಂಗಾಯತ ನಾಯಕರು ಎಂಟ್ರಿಕೊಟ್ರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಕುತ್ತು ಬರುತ್ತೆ ಅನ್ನೋ ಭಯ, ಆತಂಕ ಪ್ರಹ್ಲಾದ್ ಜೋಷಿಯವರಿಗೆ ಇದ್ದಂತಿದೆ. ಹೀಗಾಗಿನೇ ಧಾರವಾಡದಲ್ಲಿ ಲಿಂಗಾಯತರನ್ನ ಸೈಡ್ಲೈನ್ ಮಾಡಿ ಜೋಷಿ ತಮ್ಮ ಬೇಳೆ ಬೇಯಿಸಿಕೊಳ್ತಾಯಿದ್ದಾರೆ ಅನ್ನೋ ರಾಜಕೀಯ ವಿಶ್ಲೇಷಣೆಗಳಿವೆ. ಪರಿಸ್ಥಿತಿ ಹೀಗಿರೋವಾಗ್ಲೇ, ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ, ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇದು ಧಾರವಾಡ ಆಖಾಡ ಈಗ ರಂಗೇರುವಂತೆ ಮಾಡಿದೆ. ಜೋಷಿಗೆ ಈಗ ಬೆವರು ಕಿತ್ಕೊಳ್ಳುವಂತೆ ಮಾಡಿದೆ. ಆದರೆ, ದಿಂಗಾಲೇಶ್ವರ ಸ್ವಾಮೀಜಿಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಾರಾ ಅಥವಾ ರಾಷ್ಟ್ರೀಯ ಪಕ್ಷದ ಟಿಕೆಟ್ನಿಂದ ಕಣಕ್ಕಿಳಿಯುತ್ತಾರಾ ಅನ್ನೋ ಕುತೂಹಲ ಗರಿಗೆದರಿದೆ.
ನಿಮಗೆ ಗೊತ್ತಿರ್ಲಿ, ಧಾರವಾಡದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ BJP ಟಿಕೆಟ್ ಕೊಡಬಾರ್ದು ಅಂತೇಳಿ ದಿಂಗಾಲೇಶ್ವರ ಶ್ರೀಗಳು ಪಟ್ಟು ಹಿಡಿದಿದ್ರು. ಆದ್ರೂ ಜೋಷಿಯವರಿಗೆ ಬಿಜೆಪಿ ಇಲ್ಲಿಂದ ಟಿಕೆಟ್ ಕೊಟ್ಟಿದೆ. ಈ ನಡುವೆ ಜೋಶಿ ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿಯಬೇಕು ಎನ್ನುವ ಗಡುವನ್ನು ದಿಂಗಾಲೇಶ್ವರ ಶ್ರೀಗಳು ನೀಡಿದ್ದರು. ಆದರೆ, ಜೋಶಿಯೇ ನಮ್ಮ ಅಭ್ಯರ್ಥಿ. ಇದರಲ್ಲಿ ಬದಲಾವಣೆಯಿಲ್ಲ ಅಂತೇಳಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಡ್ಡಿ ತುಂಡಾದಂಗೆ ಹೇಳಿಕೆಯನ್ನು ನೀಡಿದ್ದರು. ಇದಾದ ನಂತರ, ದಿಂಗಾಲೇಶ್ವರ ಶ್ರೀಗಳು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈಗ, ಅವರು ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುತ್ತಾರೆ ಅನ್ನೋ ಮಾತು ಕ್ಷೇತ್ರದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಪಾರ್ಟಿಯು ಈಗಾಗಲೇ ಯುವಕ ವಿನೋದ್ ಅಸೂಟಿಗೆ ಟಿಕೆಟ್ ಘೋಷಿಸಿಯಾಗಿದೆ. ಇಲ್ಲಿ ಪ್ರಹ್ಲಾದ್ ಜೋಷಿಯವರು ಮ್ಯಾಚ್ ಫಿಕ್ಸ್ ಮಾಡ್ಕೊಂಡಿದ್ದಾರೆ. ಬೇಕು ಅಂತ್ಲೇ ಕಾಂಗ್ರೆಸ್ನಿಂದ ವೀಕ್ ಕ್ಯಾಂಡಿಡೇಟ್ಅನ್ನ ಜೋಷಿ ಹಾಕಿಸಿಕೊಂಡಿದ್ದಾರೆ ಅನ್ನೋ ಆರೋಪಗಳು ಕೇಳಿ ಬರ್ತಾಯಿವೆ. ಹೀಗಾಗಿ ಬಿಜೆಪಿಯ ಭದ್ರಕೋಟೆಯಾಗಿರೋ ಧಾರವಾಡ ಲೋಕಸಭಾ ಕ್ಷೇತ್ರ ಶಾಂತವಾಗಿಯೇ ಇತ್ತು. ಆದರೆ, ಶ್ರೀಗಳ ಎಂಟ್ರಿಯ ನಂತರ ಲಿಂಗಾಯತ ವರ್ಸಸ್ ಬ್ರಾಹ್ಮಣ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಅಪಸ್ವರವೂ ಕೇಳಿ ಬರುತ್ತಿದೆ. ಪ್ರಲ್ಹಾದ್ ಜೋಶಿ, ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ಸ್ವಾಮೀಜಿಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಹಲವು ಲಿಂಗಾಯತ ನಾಯಕರನ್ನು ತುಳಿದಿದ್ದಾರೆ ಎಂಬ ಆರೋಪವನ್ನು ದಿಂಗಾಲೇಶ್ವರ ಶ್ರೀಗಳು ಮಾಡಿದ್ದಾರೆ. ಆದ್ರೆ ಸ್ವಾಮೀಜಿ ವಿರುದ್ಧ ಈಗ ಸೊಲ್ಲೆತ್ತಿದ್ರೆ ಧಾರವಾಡದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರೋ ಲಿಂಗಾಯತರ ಮತದಾರರ ವಿರೋಧ ಎದುರಿಸಬೇಕಾಗುತ್ತೆ ಅಂತ ಭಾವಿಸಿರೋ ಪ್ರಹ್ಲಾದ್ ಜೋಷಿ, ದಿಂಗಾಲೇಶ್ವರ ಸ್ವಾಮೀಜಿಗಳ ಯಾವುದೇ ಟೀಕೆಗಳಿಗೆ ನಾನು ಉತ್ತರ ನೀಡುವುದಿಲ್ಲ. ಶ್ರೀಗಳ ಪ್ರತಿಯೊಂದು ಆರೋಪವನ್ನು ಆಶೀರ್ವಾದ ಅಂತೆ ಭಾವಿಸ್ತೀನಿ ಅಂತೇಳಿ ಜಾಣ ಉತ್ತರ ಕೊಟ್ಟು ಜಾರಿಕೊಂಡಿದ್ದಾರೆ. ಅಷ್ಟೇ ಅಲ್ಲ, ನನ್ನಿಂದ ಏನಾದರೂ ತಪ್ಪಾಗಿದ್ದರೆ ಶ್ರೀಗಳಲ್ಲಿ ಕ್ಷಮೆಯಾಚಿಸಲು ನಾನು ಸಿದ್ದ ಎಂದು ಜೋಶಿ ಹಲವು ಬಾರಿ ಹೇಳಿದ್ದಾಗಿದೆ. ಈಗ, ದಿಂಗಾಲೇಶ್ವರ ಶ್ರೀಗಳಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಈ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಿಯಾಕ್ಟ್ ಮಾಡಿದ್ದು, ಸದ್ಯ ನಮ್ಮ ಅಭ್ಯರ್ಥಿಗೆ ಬಿ-ಫಾರಂ ಕೊಟ್ಟು ಕಳುಹಿಸಿದ್ದೇವೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತೇಳಿದ್ದಾರೆ.. ಡಿಕೆಶಿಯ ಈ ಮಾತು ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಬದಲಾವಣೆಯಾದರೆ ಅಚ್ಚರಿ ಪಡಬೇಕಾಗಿಲ್ಲ ಎನ್ನುವ ಮಾತೂ ಜೋರಾಗಿದೆ.
ನಿಮಗೆ ಗೊತ್ತಿರ್ಲಿ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮತಗಳಿವೆ. ಇದನ್ನು ನಂಬಿಕೊಂಡೇ ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆಗೆ ಇಳಿದಿರೋದು. ಇನ್ನು ಬ್ರಾಹ್ಮಣ ಸಮುದಾಯದ 75 ಸಾವಿರ ಮತಗಳಿವೆ. ಹೀಗಾಗಿ, ಎರಡು ಜಾತಿಯ ನಡುವೆ ಹೋರಾಟ ಎನ್ನುವ ಮಾತುಗಳು ಸಂಖ್ಯಾಧಾರದಲ್ಲಿ ತುಲನೆಯೇ ಆಗುವುದಿಲ್ಲ. ಇವನ್ನ ಪಕ್ಕಕ್ಕಿಟ್ರು, ಕಾಂಗ್ರೆಸ್ ಬೆನ್ನಿಗಿರೋ 3 ಲಕ್ಷದಷ್ಟು ಮುಸ್ಲಿಮರು, 2 ಲಕ್ಷದಷ್ಟು ಪರಿಶಿಷ್ಟ ಜಾತಿ, 1.60 ಲಕ್ಷದಷ್ಟು ಕುರುಬರ ಮತಗಳೂ ಇವೆ. ಇಂಥ ಟೈಮಲ್ಲಿ ದಿಂಗಾಲೇಶ್ವರ ಶ್ರೀಗಳು ಅಖಾಡಕ್ಕೆ ಎಂಟ್ರಿಕೊಟ್ರೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಆಟಕ್ಕೆ ಫುಲ್ಸ್ಟಾಪ್ ಇಡಬಹುದು. ಚುನಾವಣೆಯಲ್ಲಿ 5ನೇ ಸಲ ಗೆಲ್ಲದಂತೆ ತಡೆಯಬಹುದು ಅನ್ನೋ ಲೆಕ್ಕಾಚಾರಗಳು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿವೆ.
ಇನ್ನ ವೀರಶೈವ ಮಹಾಸಭಾವು ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆಗೆ ತಮ್ಮ ಬೆಂಬಲವನ್ನು ಸೂಚಿಸಿದೆ. ಆದರೆ, ಸಮುದಾಯದ ಹಲವು ಮಠಗಳು ವಿರೋಧವನ್ನೂ ವ್ಯಕ್ತ ಪಡಿಸಿವೆ. ದಿಂಗಾಲೇಶ್ವರ ಶ್ರೀಗಳಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಡ ನನಗೆ ಸಾಕಷ್ಟು ಇದೆ ಎಂದು ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಗದ ಕಾಂಗ್ರೆಸ್ ಮುಖಂಡರ ಒತ್ತಡವಿದೆ, ಜೋಶಿಯವರನ್ನು ಸೋಲಿಸಲು ಅದೇ ಸರಿಯಾದ ರಣತಂತ್ರ ಎಂದು ಡಿಕೆಶಿಯವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.
ಹಾಗಾದ್ರೆ ನಿಮ್ಮ ಪ್ರಕಾರ ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಾಲೇಶ್ವರ ಶ್ರೀಗಳಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕಾ., ಬೇಡ್ವಾ? ದಿಂಗಾಲೇಶ್ವರ ಶ್ರೀಗಳು ಅಖಾಡಕ್ಕಿಳಿದ್ರೆ ಪ್ರಹ್ಲಾದ್ ಜೋಷಿಗೆ ಟಫ್ ಫೈಟ್ ಕೊಡಬಹುದಾ?