
ದಾವಣಗೆರೆ: ಪ್ರತಿನಿತ್ಯ ಸ್ವಚ್ಛತೆ ಕಾರ್ಯ ಮಾಡುವ ಪೌರಕಾರ್ಮಿಕರ ಸೇವೆ ಅನನ್ಯ. ಬಣ್ಣಿಸಲು ಆಗದು. ಎಂದಿಗೂ ಮರೆಯಲಾಗದಂಥ ಸೇವೆ. ಅವರನ್ನು ಗುರುತಿಸಿ ಕೈಯಲ್ಲಾದಷ್ಟು ಸಹಾಯ ಮಾಡುವುದು ಪುಣ್ಯದ ಕೆಲಸ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಹೇಳಿದರು.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಪೌರಕಾರ್ಮಿಕರಿಗೆ ವಿಶೇಷ ಉಡುಗೊರೆ ನೀಡಿ ಸನ್ಮಾನಿಸಿ ಮಾತನಾಡಿದ ಅವರು, ದಾವಣಗೆರೆ ನಗರದಲ್ಲಿ ಪೌರಕಾರ್ಮಿಕರು ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಆಗದು. ಎಂಥ ಪರಿಸ್ಥಿತಿ ಇರಲಿ. ನಗರದ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸುವವರು. ಮಳೆ, ಗಾಳಿ, ಬಿಸಿಲು ಎನ್ನದೇ ಸ್ವಚ್ಛತಾ ಕಾರ್ಯ ಮಾಡಿ ನಗರವನ್ನು ಸುಂದರವಾಗಿಸುತ್ತಾರೆ ಎಂದು ಬಣ್ಣಿಸಿದರು.
ಕೊರೊನಾದಂಥ ಸಂಕಷ್ಟದ ವೇಳೆಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಜೊತೆಗೆ ನಗರದ ಸ್ವಚ್ಛತೆ ಮಾಡಿದ್ದಾರೆ. ಭಯವಿಲ್ಲದೇ ಜನರ ಆರೋಗ್ಯದ ದೃಷ್ಟಿಯಿಂದ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹಾಗಾಗಿ, ಪೌರಕಾರ್ಮಿಕರ ಕೆಲಸ ಬಣ್ಣಿಸಲು ಆಗದು. ಅವರಿದ್ದರೆ ಸ್ವಚ್ಛತೆ. ಅವರನ್ನು ಗುರುತಿಸಿ ಗೌರವಿಸಿದ್ದು ಸಂತೋಷ ತಂದಿದೆ. ಅವರಿಗೂ ಖುಷಿ ಆಗಿದೆ ಎಂದು ತಿಳಿಸಿದರು.

ಪೌರಕಾರ್ಮಿಕರ ಬದುಕು ನಮ್ಮಂತೆ ನಿಮ್ಮಂತೆ ಅಲ್ಲ.ಏನೇ ಕಷ್ಟ ಇದ್ದರೂ, ಸಂಕಷ್ಟ ಎದುರಾದರೂ ತಮ್ಮ ಕರ್ತವ್ಯ ನಿರ್ವಹಿಸಿ ಎಲ್ಲಾ ವಾರ್ಡ್ ಗಳ ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಇಂಥವರಿಗೆ ಹೆಚ್ಚಿನ ನೆರವು ನೀಡಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಪೌರಕಾರ್ಮಿಕರಿಗೆ ಎಲ್ಲಾ ರೀತಿಯ ನೆರವು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ನಮಗೂ ಮಾರ್ಗದರ್ಶನ ನೀಡಿದ್ದಾರೆ. ಪೌರ ಕಾರ್ಮಿಕರಿಗೆ ವಸತಿ, ಚಿಕಿತ್ಸಾ ಸೌಲಭ್ಯ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಸೂಚನೆ ನೀಡಿ ನೆರವಾಗಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.
ಎಂಸಿಸಿ ಬಿ ಬ್ಲಾಕ್ ಇಷ್ಟೊಂದು ಸುಂದರವಾಗಿ ಕಾಣಲು, ಇರುವಂತೆ ಮಾಡಿರುವುದು ಪೌರಕಾರ್ಮಿಕರು. ಬೆಳಿಗ್ಗೆಯೇ ಚಳಿ ಇದ್ದರೂ, ಮಳೆ ಬಂದರೂ ಲೆಕ್ಕಿಸದೇ ಸ್ವಚ್ಥತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ರಸ್ತೆಗಳು ಸುಂದರವಾಗಿಸಲು ಶ್ರಮಿಸುತ್ತಾರೆ. ಇವರ ಬಗ್ಗೆ ಅನುಕಂಪ ಇದ್ದರೆ ಸಾಲದು, ಗೌರವಿಸುವ ಕೆಲಸವೂ ಹೆಚ್ಚಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಡಾ. ಕರಿಬಸಪ್ಪ ಮತ್ತು ನಿರ್ಮಲಾ ದಂಪತಿಯ ಪುತ್ರಿ ಡಾ. ಚೇತನಾ ಬಳ್ಳಾರಿ ಹಾಗೂ ಡಾ. ಷಡಾಕ್ಷರಿ ಅವರ 25ನೇ ವಿವಾಹ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಪೌರ ಕಾರ್ಮಿಕರಿಗೆ ಕೊಡುಗೆ ನೀಡಿದರು. ಅದೇ ರೀತಿಯಲ್ಲಿ ಗಡಿಗುಡಾಳ್ ಮಂಜುನಾಥ್ ಅವರು ತಮ್ಮ ಕೈಯಲ್ಲಾದ ಸಹಾಯ ಮಾಡಿದರು.
ಈ ವೇಳೆ ಮಾತನಾಡಿದ ಪೌರ ಕಾರ್ಮಿಕರು, ನಾವು ಈ ವಾರ್ಡ್ ನಲ್ಲಿ ಕೆಲಸ ಮಾಡುತ್ತಿರುವುದು ಪುಣ್ಯ ಎನಿಸಿದೆ. ಪಾಲಿಕೆ ಸದಸ್ಯರಾಗಿದ್ದ ಐದು ವರ್ಷಗಳ ಅವಧಿಯಲ್ಲಿಯೂ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡುವ ಮಾದರಿ ಕಾರ್ಪೊರೇಟರ್ ಆಗಿ ಮಂಜುನಾಥ್ ಅಣ್ಣನವರು ನಿಂತಿದ್ದಾರೆ. ಅವರಂಥ ಜನಪ್ರತಿನಿಧಿ ಬೇಕು. ಜನರು ಇಂಥ ಜನಸೇವಕ ಮತ್ತು ಜನಪರ ಕಾಳಜಿಯುಳ್ಳ, ಮಾನವೀಯ ಗುಣವುಳ್ಳ ಜನಪ್ರತಿನಿಧಿಗಳನ್ನು ಮರೆಯಬಾರದು. ಸೇವೆಯನ್ನು ಗುರುತಿಸಿ, ಅವರನ್ನೂ ಗೌರವಿಸುವಂತಾಗಬೇಕು ಎಂದು ಹೇಳಿದರು. ಪೌರಕಾರ್ಮಿಕರು ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.