ನಂದೀಶ್ ಭದ್ರಾವತಿ, ದಾವಣಗೆರೆ
ಬಿಜೆಪಿ ತನ್ನ ಪಟ್ಟಿಯನ್ನು ಬಿಡುಗಡೆಗೊಳಿಸಿದ ಬೆನ್ನೇಲೆ ಕಾಂಗ್ರೆಸ್ ತನ್ನ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಇನ್ನು ಈ ಪಟ್ಟಿಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಧರ್ಮಪತ್ನಿ ಪ್ರಭಾ ಮಲ್ಲಿಕಾರ್ಜುನ್ ಗೆ ಬಹುತೇಕ ಟಿಕೆಟ್ ಫಿಕ್ಸ್ ಆಗಿದೆ. ಆದರೆ ಅಹಿಂದ ನಾಯಕ ವಿನಯ್ ನಡೆ ಎತ್ತ ಕಡೆ ಎಂಬುದು ಪ್ರಶ್ನೆಯಾಗಿದೆ.
ಈಗಾಗಲೇ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ಮುಗಿದಿದ್ದು, ಈ ಸಭೆಯಲ್ಲಿ ರಾಜ್ಯವಾರು ಅಭ್ಯರ್ಥಿಗಳ ಹೆಸರನ್ನು ಬಹುತೇಕವಾಗಿ ಅಂತಿಮಗೊಳಿಸಲಾಗಿದೆ. ಸದ್ಯ ಬಿಡುಗಡೆ ಮಾಡಿರುವ ಕರ್ನಾಟಕದ ಸಂಭಾವ್ಯ ಅಭ್ಯರ್ಥಿಗಳ ಹೆಸರು ಬಹುತೇಕ ಹೊರಬಿದ್ದಿದೆ.
ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಕೆಸಿ ವೇಣುಗೋಪಾಲ್, ಅಂಬಿಕಾ ಸೋನಿ, ಸಲ್ಮಾನ್ ಖುರ್ಷಿದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು.
ದೇವನಗರಿಯಲ್ಲಿ ಮಹಿಳೆಯರ ಕದನ
ಹಲವು ವರ್ಷಗಳ ನಂತರ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗಾಗಿ ಮಹಿಳೆಯರ ಕದನ ಶುರುವಾಗಲಿದೆ. ಶಾಸಕ ಶಾಮನೂರು ಹಾಗೂ ಸಂಸದ ಜಿಎಂ ಸಿದ್ದೇಶ್ವರ ಮಾವ-ಅಳಿಯರಾಗಿದ್ದು, ಮೊದಲಿನಿಂದಲೂ ಈ ಎರಡು ಕುಟುಂಬಗಳ ನಡುವೆ ನೇರ ಕದನ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಶಾಮನೂರು ಮನೆತನ ಸ್ಪರ್ಧಿಸರಲಿಲ್ಲ ಈಗ ಶಾಮನೂರು ಮನೆತನದಿಂದ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧಿಸಿದರೆ ಅತ್ತ ಸಂಸದ ಸಿದ್ದೇಶ್ವರ ಮನೆತನದಿಂದ ಪತ್ನಿ ಗಾಯಿತ್ರಿ ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಈ ಮೂಲಕ ಬೀಗರ ಕದನ ಈಗ ರಂಗೇರಲಿದೆ.
ಮತ್ತೆ ಶುರುವಾಗುತ್ತಾ ಎಸ್ಎಸ್ ಎಂ, ಜಿಎಂಎಸ್ ವಾದ-ವಾಗ್ವಾದ?
ಮಾವ ಶಾಮನೂರು ಹಾಗೂ ಅಳಿಯ ಸಂಸದ ಸಿದ್ದೇಶ್ವರ ನಡುವೆ ಮುಸುಕಿನ ಗುದ್ದಾಟ ಇದ್ದರೂ, ಇಬ್ಬರು ಚೆನ್ನಾಗಿದ್ದಾರೆ. ಆದರೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದ ಜಿಎಂ ಸಿದ್ದೇಶ್ವರ ನಡುವೆ ಆಗಾಗ ವಾಕ್ಸ ಮರ ನಡೆಯುತ್ತಿದ್ದು, ಈಗ ಅದು ಮುಂದುವರೆಯಲಿದೆ.
ಜಿ.ಬಿ.ವಿನಯ್ ಕುಮಾರ್ ಗೆ ಕಾಂಗ್ರೆಸ್ ಟಿಕೇಟ್ ನೀಡಲು ಒತ್ತಾಯ , ಮುಂದಿನ ವಿನಯ್ ನಡಿಗೆ ಏನು?ದಾವಣಗೆರೆ ಜಿಲ್ಲೆಯಲ್ಲಿ ಸಕ್ರಿಯರಾಗಿ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿರುವ ಕಾಂಗ್ರೆಸ್ ಮುಖಂಡರಾದ ಜಿ.ಬಿ ವಿನಯ್ ಕುಮಾರ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಬೇಕೆಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿಮಾನಿಗಳ ಬಳಗದವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅಭಿಮಾನಿಗಳ ಬಳಗದ ರಘುದೊಡ್ಮನಿ ಮಾತನಾಡಿ, ಜಿಲ್ಲೆಯ ಹಿಂದುಳಿದ ವರ್ಗದವರ ಶೋಷಿತರ ದೀನದಲಿತರು ಹಾಗೂ ಅಲ್ಪಸಂಖ್ಯಾತರು ಸಾಕಷ್ಟು ಬಾರಿ ಶಾಮನೂರು ಕುಟುಂಬಕ್ಕೆ ಪ್ರತಿ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ಕೊಟ್ಟಿದ್ದಕ್ಕೆ ಅವರು ಗೆದ್ದು ಮತದಾರರ ಹಾಗೂ ಜಿಲ್ಲೆಯ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ.
ಶಾಮನೂರು ರವರ ಕೊಡುಗೆ ಕಾಂಗ್ರೆಸ್ ಪಕ್ಷಕ್ಕೆ ಅಪಾರ.ಆದರೆ ನಾವು ಮತದಾರರು ಈ ಲೋಕಸಭಾ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ವರ್ಗದ ವಿದ್ಯಾವಂತ ಸರಳ ಜೀವಿ ಯುವಕರ ಕಣ್ಮಣಿ ಹಳ್ಳಿ ಹುಡುಗ ಜೆ ಬಿ ವಿನಯ್ ಕುಮಾರ್ ರವರನ್ನು ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನಾಗಿಸಿ ಇವರನ್ನು
ಜಯಶೀಲರನ್ನಾಗಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ದೇಶಸೇವೆ ಮಾಡುವ ಅವಕಾಶಕೊಡಲು ಬಯಸುತ್ತೇವೆ.ಈ ಬಾರಿ ನಮ್ಮ ಜಿಲ್ಲೆಗೆ ಜಾತಿಮತ ಬೇಧವಿಲ್ಲದೆ ಸರಳ ಸಜ್ಜನಿಕೆಯ ಜಿ.ಬಿ ವಿನಯ್ ಕುಮಾರ್ರವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿಸಿ ಸಾಮಾಜಿಕ ನ್ಯಾಯ ಮಾಡುತ್ತದೆಂದು ನಂಬಿದ್ದೇವೆ.
ಪ್ರತಿಯೊಬ್ಬರು ಅವಶ್ಯವಿರುವ ಶಿಕ್ಷಣಕ್ಕೆ ಮೊದಲ ಆದ್ಯತೆ. ಕ್ಷೇತ್ರದ ಅಭಿವೃದ್ಧಿಯ ಕನಸು, ಹಿಂದುಳಿದ ಶೋಷಿತರ ದೀನದಲಿತರ ಅಲ್ಪಸಂಖ್ಯಾತರ ಅಭಿವೃದ್ಧಿಯಿಂದಲೇ ದೇಶಾಭಿವೃದ್ಧಿ, ಹಳ್ಳಿಯ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿಯ ಸಾರುವ ಈ ಹೊಸಮುಖ ನಮ್ಮ ಅಭ್ಯರ್ಥಿಯಾಗಬೇಕು ಎಂಬುದು ಮತದಾರರ ಮನದಾಳದ ಮಾತು.
ದಾವಣಗೆರೆ ಜಿಲ್ಲೆಗೆ ಕುಟುಂಬದ ರಾಜಕಾರಣ ಹೋಗಲಾಡಿಸಲು ಇದೇ ಸೂಕ್ತ ಸುಸಮಯ, ಅಕಸ್ಮಾತ್ ಜಿ.ಬಿ.ವಿನಯ್ ಕುಮಾರ್ರವರನ್ನು ಕಡೆಗಣಿಸಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದರೆ ಜಿಲ್ಲೆಯಲ್ಲಿ ಅಸಮಧಾನ ಉಂಟಾಗಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಎಐಸಿಸಿ ಪ್ಯಾನಲ್ ನಲ್ಲಿ ಕೊನೆಯ ಹಂತದವರೆಗೂ ವಿನಯ್ ಕುಮಾರ್ ಅವರ ಹೆಸರೇ ಮುಂಚೂಣಿಯಲ್ಲಿತ್ತು.ಆದರೆ ಹಣ ಹಾಗೂ ಒಳರಾಜಕಾರಣ ಕೆಲಸ ಮಾಡಿದೆ ಎಂದು ಉಮೇಶ್ ಕೆ ಸಂತೆಬೆನ್ನೂರು,ಮಹಮ್ಮದ್ ಅಲ್ತಾಫ್ ಹುಸೇನ್,ಬಸವನಗೌಡ,ಹೇಮಂತ್ ಕುಮಾರ್ ದಳವಾಯಿ,ಇರ್ಫಾನ್,ಶಿವಕುಮಾರ್, ವಿಜಯಕುಮಾರ್,ನಾಗರಾಜ್,ಪರಶುರಾಮ್ ಸೇರಿದಂತೆ ಇತರರು ಹೇಳುತ್ತಾರೆ.
ಬಂಡಾಯ ಸ್ಪರ್ಧಿಯಾದ್ರೆ ಬಿಜೆಪಿ ಲಾಭ
ಕಾಂಗ್ರೆಸ್ ಟಿಕೇಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಅಭಿಮಾನಿ ಬಳಗದವರು ಒತ್ತಾಯಿಸಿದ್ದಾರೆ. ಸಮೀಕ್ಷೆಗಳ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೇಟ್ ನೀಡುವುದಾಗಿ ಹೇಳಿದ ಮುಖಂಡರು ತಮ್ಮ ನಿಲುವು ಬದಲಾಯಿಸಿರುವುದು ಸರಿಯಲ್ಲ.ಜನರಭಾವನೆಗಳಿಗೆ,ಜನಾಭಿಪ್ರಾಯದಂತೆ ಗೆಲ್ಲುವ ವ್ಯಕ್ತಿಗೆ ಅನ್ಯಾಯ ಮಾಡಬಾರದು.ನಾಳೆ ವಿನಯ್ ಕುಮಾರ್ ದಾವಣಗೆರೆಗೆ ಆಗಮಿಸುತ್ತಿದ್ದಾರೆ ನಂತರ ಸಭೆ ನಡೆಸಿ ತಮ್ಮ ತೀರ್ಮಾನ ಹೇಳಲಿದ್ದಾರೆ. ಎಂದು ವಿನಯ್ ಅಭಿಮಾನಿಗಳು ಹೇಳಿದ್ದಾರೆ.
ವಿನಯ್ ಗೆ ಟಿಕೆಟ್ ಸಿಗದೇ ಹೋದ್ರೆ ಕಾಂಗ್ರೆಸ್ ಗೆಲುವು ಕಷ್ಟ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಗೆಲ್ಲಬಹುದಾದ ಕ್ಷೇತ್ರವಾಗಿದೆ.ವಿನಯ್ ಕುಮಾರ್ ಅವರಿಗೆ ಟಿಕೇಟ್ ಸಿಗದಿದ್ದರೆ ಕಾಂಗ್ರೆಸ್ ಗೆಲುವು ಕಳೆದುಕೊಳ್ಳಬೇಕಾಗುತ್ತದೆ.ಅಲ್ಲದೇ ವಿದ್ಯಾವಂತ ಸಮುದಾಯ ಕಡೆಗಣಿಸಿದ ಕಳಂಕ ಕಾಂಗ್ರೆಸ್ ಗೆ ತಟ್ಟುತ್ತದೆ.ಅಹಿಂದ ಯುವಕನಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದಂತಾಗುತ್ತದೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಡೆದಂತೆ ದಾವಣಗೆರೆಯಲ್ಲಿಯೂ ಸ್ವಾಭಿಮಾನದ ಪ್ರತಿಷ್ಠೆಯ ಕಣವಾಗಲಿದೆ.ನಮ್ಮ ಹೋರಾಟ ವ್ಯಕ್ತಿ ಅಥವಾ ಕುಟುಂಬದ ವಿರುದ್ದ ಅಲ್ಲ ಎಂದು ವಿನಯ್ ಅಭಿಮಾನಿ ಬಳಗ ಹೇಳಿದೆ.
ಯಾರ್ಯಾರಿಗೆ ಟಿಕೆಟ್
ಬೆಂಗಳೂರು ಉತ್ತರಕ್ಕೆ ರಾಜೀವ್ ಗೌಡ, ಬೆಂಗಳೂರು ದಕ್ಷಿಣ ಸೌಮ್ಯಾ ರೆಡ್ಡಿ, ಬೆಂಗಳೂರು ಸೆಂಟ್ರಲ್ಗೆ ಮನ್ಸೂರ್ ಆಲಿಖಾನ್, ಮೈಸೂರು ಕ್ಷೇತ್ರಕ್ಕೆ ಲಕ್ಷ್ಮಣ್, ರಾಯಚೂರು ಕ್ಷೇತ್ರಕ್ಕೆ ಕುಮಾರ ನಾಯಕ್, ಕೊಪ್ಪಳಕ್ಕೆ ರಾಜಶೇಖರ ಹಿಟ್ನಾಳ್, ಬೀದರ್ಗೆ ಸಾಗರ್ ಖಂಡ್ರೆ, ದಾವಣಗೆರೆಗೆ ಪ್ರಭಾ ಮಲ್ಲಿಕಾರ್ಜುನ, ಉತ್ತರ ಕನ್ನಡಕ್ಕೆ ಅಂಜಲಿ ನಿಂಬಾಳ್ಕರ್, ದಕ್ಷಿಣ ಕನ್ನಡಕ್ಕೆ ಪದ್ಮರಾಜ್, ಚಿತ್ರದುರ್ಗಕ್ಕೆ ಚಂದ್ರಪ್ಪ, ಕಲಬುರಗಿಗೆ ರಾಧಾಕೃಷ್ಣ ದೊಡ್ಡಮನಿ, ಧಾರವಾಡಕ್ಕೆ ವಿನೋದ ಅಸೂಟಿ, ಬಾಗಲಕೋಟೆಗೆ ಸಂಯುಕ್ತ ಪಾಟೀಲ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗಡೆ, ಬೆಳಗಾವಿಗೆ ಮೃಣಾಲ್ ಹಾಗೂ ಚಿಕ್ಕೋಡಿಗೆ ಪ್ರಿಯಾಂಕಾ ಜಾರಕಿಹೊಳಿ ಸಂಭ್ಯಾವ್ಯ ಅಭ್ಯರ್ಥಿಗಳು ಎಂಬ ಮಾಹಿತಿ ಹೊರಬಿದ್ದಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ ಕ್ಷೇತ್ರ ಅಭ್ಯರ್ಥಿಗಳ ಇತ್ಯರ್ಥವಾಗಬಹುದು ಎಂದು ಹೇಳಲಾಗುತ್ತಿದ್ದರೂ, ಕೋಲಾರ ಕ್ಷೇತ್ರಕ್ಕೆ ಎಲ್.ಹನುಮಂತಯ್ಯ ಹೆಸರು ಕೇಳಿ ಬಂದಿದೆ.