
ನಂದೀಶ್ ಭದ್ರಾವತಿ ದಾವಣಗೆರೆ
ಆ ಹುಡುಗನಿಗೆ ಇನ್ನೂ ಮೀಸೆ ಚಿಗಿರಿಲ್ಲ, ಸಣ್ಣ ವಯಸ್ಸಿಗೆ ಕಳ್ಳತನಕ್ಕೆ ಇಳಿದು ವಿಲಾಸಿ ಜೀವನ ನಡೆಸುತ್ತಿದ್ದ. ಹಣ ಖಾಲಿಯಾದ ನಂತರ ಮತ್ತೆ ಮನೆ ಕಳ್ಳತನಕ್ಕೆ ಇಳಿಯುತ್ತಿದ್ದ..ಆದ್ರೆ ಈ ಆಟ ಬಹಳ ದಿವಸ ನಡೆಯಲಿಲ್ಲ..ಅಷ್ಟೋರೊಳಗೆ ಸಂತೆಬೆನ್ನೂರು ಪಿಎಸ್ಐ ನಿಂಗನಗೌಡ ನೇತೃತ್ವದ ತಂಡಕ್ಕೆ ಈ ಕಳ್ಳರು ತಗ್ಲಾಕೊಂಡ್ರು..ಹಾಗಾದ್ರೆ ಈ ಸ್ಟೋರಿ ಹಿನ್ನೆಲೆ ಏನು ಬನ್ನಿ ತಪ್ಪದೇ ನೋಡೋಣ.
ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಸರಣಿ ಮನೆ ಕಳವು ಪ್ರಕರಣ ನಡೆದಿದ್ದು, ಪೊಲೀಸರಿಗೆ ತಲೆನೋವಾಗಿತ್ತು. ನಂತರ ಎಸ್ಪಿ ಉಮಾ ಪ್ರಶಾಂತ್ ಎರಡು ತಂಡಗಳನ್ನು ರಚನೆ ಮಾಡಿದ್ದರು. ಅಲ್ಲಿಂದ ಫಿಲ್ಡಿಗೆ ಇಳಿದ ತಂಡ ಕಾರ್ಯಾಚರಣೆಗೆ ಇಳಿತು. ನಂತರ ಸರಣಿ ಮನೆ ಕಳವು ಪ್ರಕರಣ ಭೇದಿಸಿದ ಪೊಲೀಸರು ಬಾಲಕ ಸೇರಿ ಇಬ್ಬರನ್ನು ಬಂಧಿಸಿದ್ದು, ರೂ. 5.5 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದರು.

ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮದ ಮನೋಜ್ (22) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಇವರಿಂದ ಅರ್ಧ ಕೆ.ಜಿ. ಬೆಳ್ಳಿ, 45 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಐದು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಬಸವಾಪಟ್ಟಣ ಠಾಣಾ ವ್ಯಾಪ್ತಿಯ ದೊಡ್ಡಘಟ್ಟ ಹಾಗೂ ಬಸವಾಪಟ್ಟಣ ಗ್ರಾಮಗಳಲ್ಲಿ ಫೆ.8 ಮತ್ತು 10ರಂದು ಸರಣಿ ಮನೆ ಕಳವು ನಡೆದಿದ್ದವು. ಬಾಗಿಲು ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಲಾಗಿತ್ತು. ಇದು ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತ್ತು.
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಐದು ಮನೆ ಕಳವು ಪ್ರಕರಣ ದಲ್ಲಿ ಭಾಗಿಯಾಗಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಬಿಳಿಚೋಡು ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ಆರೋಪಿ ಮನೋಜ್ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಕ್ಕಿ ಬಿದ್ದಿದ್ದೇ ರೋಚಕ
ಅಪ್ರಾಪ್ತ ಬಾಲಕ, ಮನೋಜ್ ಬಡತನದಿಂದ ಬಂದವರು. ಇವರಿಬ್ಬರು ಸ್ನೇಹಿತರಾಗಿದ್ದು, ಪರಿಚಯದವರಾಗಿದ್ದರು. ಮೊದಲು ಬೈಕ್ ವೊಂದನ್ನು ಕದಿದ್ದಾರೆ. ಆ ಬೈಕಿನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ರಾತ್ರಿ ವೇಳೆ ಕಳ್ಳತನಕ್ಕೆ ಇಳಿಯುತ್ತಿದ್ದರು. ಪ್ರಕರಣ ದಾಖಲಾದ ನಂತರ ಪೊಲೀಸರು ಎಲ್ಲೆಲ್ಲಿ ಯಾವ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ಕಲೆ ಹಾಕಿದ್ದಾರೆ. ನಂತರ ಇಬ್ಬರು ಕಳ್ಳರು ದಾವಣಗೆರೆ ಸೇರಿದಂತೆ ಇತರೆಡೆ ಬೈಕಿನಲ್ಲಿ ಓಡಾಡಿದ ಬಗ್ಗೆ ಪ್ಯೂಟೇಜ್ ತರಿಸಿಕೊಂಡು ಹುಡುಕಾಡಿದಾಗ ಇವರಿಬ್ಬರು ಸಿಕ್ಕಿ ಬಿದ್ದಿದ್ದಾರೆ. ಒಟ್ಟಿನಲ್ಲಿ ಪೊಲೀಸರ ಈ ಕಾರ್ಯದಿಂದ ಜನರು ಒಂದಿಷ್ಟು ನಿಟ್ಟುಸಿರು ಬಿಟ್ಟಿದ್ದಾರೆ.