ಭದ್ರಾವತಿ : ನಗರದ ಹೃದಯ ಭಾಗದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಇದ್ದ ಹೈಟ್ ಗೇಜಿಗೆ ಇಂದು ಬೆಳಗಿನ ಜಾವ ಅಪರಿಚಿತ ಲಾರಿ ಗುದ್ದಿದ್ದ ಕಾರಣ, ಕಬ್ಬಿಣದ ರಾಡು ಕೆಳಗೆ ಬಿದ್ದು, ಸಾಕಷ್ಟು ತೊಂದರೆಯಾಯಿತು.
ಬೃಹತ್ ಲಾರಿಗಳು ಹೋಗದಂತೆ ಈ ಹೈಟ್ ಗೇಜ್ ಇರುವ ಕಬ್ಬಿಣದ ರಾಡ್ ಗಳನ್ನು ಹಾಕಲಾಗಿತ್ತು. ಆದರೆ ಲಾರಿಯೊಂದು ಇದರ ಕೆಳಗೆ ಹೋಗಿದ್ದು, ಕಬ್ಬಿಣದ ರಾಡ್ ಕೆಳಗೆ ಬಿದ್ದಿದೆ. ಅಲ್ಲದೇ ಈ ಬ್ರಿಡ್ಜ್ ಮೇಲೆ ರೈಲಿನ ಸಂಚಾರವಿದ್ದು, ರೈಲಿನ ಸಮಯದಲ್ಲಿ ವ್ಯತ್ಯಯವಾಯಿತು.
ಲಾರಿ ಗುದ್ದಿದ ಪರಿಣಾಮ ಹಳಿಗಳು ಏರುಪೇರಾಗಿ ತಾಂತ್ರಿಕ ದೋಷ ಉಂಟಾಗಿತ್ತು. ಕೂಡಲೆ ರೈಲ್ವೆ ಸಿಬ್ಬಂದಿ ಹಳಿ ರಿಪೇರಿ ಕಾಮಗಾರಿ ಆರಂಭಿಸಿದ್ದರು. ಈ ಹಿನ್ನೆಲೆ ಭದ್ರಾವತಿ ಅಂಡರ್ಪಾಸ್ನಲ್ಲಿ ಒಂದು ಕಡೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು.ಇದರಿಂದ ಶಿವಮೊಗ್ಗ – ಭದ್ರಾವತಿ ನಡುವೆ ರೈಲು ಸಂಚಾರ ರದ್ದುಗೊಳಿಸಲಾಗಿತ್ತು. ಅಲ್ಲದೇ ಗಂಟೆ-ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಸವಾರರು ಸುತ್ತಿ ಬಳಸಿ ಹೋಗಬೇಕಾಯಿತು. ಅಲ್ಲದೇ ಜಯಶ್ರೀ ವೃತ್ತದಿಂದ ಶಿವಮೊಗ್ಗ, ಬಳ್ಳಾರಿ, ತರೀಕೆರೆಗೆ ಹೋಗುವ ಪ್ರಯಾಣಿಕರು ಬಸ್ ಬಾರದ ಕಾರಣ ತೊಂದರೆಗೆ ಒಳಗಾದರು.
ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿ ತುರ್ತು ಕಾಮಗಾರಿ ಕೈಗೊಂಡರು.ಇದರಿಂದ ದೊಡ್ಡ, ದೊಡ್ಡ ವಾಹನಗಳಿಗೆ, ದ್ವಿಚಕ್ರ ವಾಹನಗಳಿಗೆ ಪಾದಾಚಾರಿಗಳು ಹೈರಾಣಾದರು. ಟ್ರಾಫಿಕ್ ಪೊಲೀಸ್ ನವರು ಸುಗಮ ಸಂಚಾರಕ್ಕೆ ಹರ ಸಾಹಸಪಟ್ಟರು.
ಕಾದು ಕಾದು ಹೈರಾಣಾದ ಪ್ರಯಾಣಿಕರು
ಹಳಿ ರಿಪೇರಿ ಕಾರ್ಯದ ಹಿನ್ನೆಲೆ ಎರಡು ರೈಲುಗಳು ವಿಳಂಬವಾಗಿ ಸಂಚರಿಸಬೇಕಾಯಿತು ಬೆಳಗ್ಗೆ 4.45ಕ್ಕೆ ಶಿವಮೊಗ್ಗ ತಲುಪಬೇಕಿದ್ದ ಮೈಸೂರು – ತಾಳಗುಪ್ಪ ಎಕ್ಸ್ಪ್ರೆಸ್ ರೈಲು ಬೆಳಗ್ಗೆ 6.45ಕ್ಕೆ ತಲುಪಿತು. ಅಲ್ಲಿಯವರೆಗೂ ಈ ರೈಲು ಭದ್ರಾವತಿ ನಿಲ್ದಾಣದಲ್ಲಿ ನಿಂತಿತ್ತು. ಇನ್ನು, ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಡಬೇಕಿದ್ದ ಬೆಂಗಳೂರು ಜನಶತಾಬ್ದಿ ರೈಲು ಸುಮಾರು ಬೆಳಗ್ಗೆ 6.35ಕ್ಕೆ ಹೊರಟಿದೆ. ವಿಳಂಬಕ್ಕೆ ಕಾರಣ ಗೊತ್ತಾಗದೆ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದರು. ಒಟ್ಟಾರೆ ಲಾರಿಯೊಂದು ಮಾಡಿದ ಎಡವಟ್ಟಿನಿಂದ ನೂರಾರು ಜನ ತೊಂದರೆ ಅನುಭವಿಸಿದರು. ಅಲ್ಲದೇ ಈ ಲಾರಿ ಯಾರದ್ದು ಎಂದು ಗುರುತಿಸಿ ಆ ಲಾರಿ ಮಾಲೀಕನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.