ದಾವಣಗೆರೆ : ಆರ್ಎಸ್ಎಸ್ ನಾಯಕರು ಸರಣಿ ಸಭೆಗಳನ್ನು ಮಾಡಿ ಬಿಜೆಪಿಯಲ್ಲಿ ಮೂಡಿರುವ ಭಿನ್ನಮತ ದೂರಮಾಡಲು ಕಸರತ್ತು ನಡೆಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ಬಿಜೆಪಿಯ ಇನ್ನೊಂದು ತಂಡ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ದೂರುವಿಟ್ಟು ಸಭೆ ಮಾಡಿದೆ. ದೊಡ್ಡ ಮಟ್ಟದ ಪ್ಲಾನ್ ಸಿದ್ದಪಡಿಸಿದೆ. ಹಾಗಾದ್ರೆ ವಿಜಯೆಂದ್ರ ನಡೆಯೇನು? ಬಿಜೆಪಿ ಹೈಕಮಾಂಡ್ ಸೈಲೆಂಟ್ ಆಗಿದ್ಯಾಕೆ.? ಈ ಕುರಿತು
ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾನುವಾರ ದಾವಣಗೆರೆಯಲ್ಲಿ ಸಭೆ ನಡೆಸಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಬೆಳಗಾವಿಯ ಖಾಸಗಿ ರೆಸಾರ್ಟ್ನಲ್ಲಿ ಇದೇ ಮಾದರಿಯ ಸಭೆ ನಡೆದಿತ್ತು. ಬೆಳಗಾವಿಯ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ನಾಯಕರು ಇಂದು ನಡೆದ ಸಭೆಗೆ ಗೈರಾಗಿದ್ದರು. ಸಭೆಯಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದಾವಣಗೆರೆಯ ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ, ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ, ಹರಿಹರದ ಶಾಸಕ ಬಿ. ಪಿ. ಹರೀಶ್, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಆಗಸ್ಟ್ನಲ್ಲಿ ಬಿಜೆಪಿ-ಜೆಡಿಎಸ್ ಪಕ್ಷದ ‘ಮೈಸೂರು ಚಲೋ’ ಪಾದಯಾತ್ರೆಯಿಂದ ದೂರವಾಗಿದ್ದ ನಾಯಕರು ಬೆಳಗಾವಿಯ ಖಾಸಗಿ ರೆಸಾರ್ಟ್ನಲ್ಲಿ ಸಭೆ ನಡೆಸಿದ್ದರು. ಈಗ ಇದೇ ನಾಯಕರು ದಾವಣಗೆರೆಯಲ್ಲಿ ಸಭೆ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ನಾಯಕರು ಇಂದಿನ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅಣ್ಣಾಸಾಹೇಬ್ ಜೊಲ್ಲೆ, ಜೆಡಿಎಸ್ನ ಎನ್. ಆರ್. ಸಂತೋಷ್ ಸೇರಿದಂತೆ ವಿವಿಧ ನಾಯಕರು ಪಾಲ್ಗೊಂಡಿದ್ದರು. ಆದರೆ ಇಂದಿನ ಸಭೆಯಲ್ಲಿ ಪ್ರಮುಖವಾಗಿ ಪ್ರತಾಪ್ ಸಿಂಹ, ಬಸನಗೌಡ ಪಾಟೀಲ್ ಯತ್ನಾಳ್, ಜಿ. ಎಂ.ಸಿದ್ದೇಶ್ವರ ಮಾತ್ರ ಪಾಲ್ಗೊಂಡಿದ್ದರು.
ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ-ಜೆಡಿಎಸ್ ನಾಯಕರು ‘ಮೈಸೂರು ಚಲೋ’ ಪಾದಯಾತ್ರೆ ನಡೆಸಿದ್ದರು. ಇದೇ ಮಾದರಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅನುದಾನ ದುರುಪಯೋಗ ಪ್ರಕರಣದ ಬಗ್ಗೆ ‘ಬಳ್ಳಾರಿ ಚಲೋ’ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ.
ಗಣೇಶ ಚತುರ್ಥಿ ಬಳಿಕ ಪಾದಯಾತ್ರೆ ನಡೆಸಲು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಈಗ ಇದೇ ಸಭೆಯ ಮುಂದುವರೆದ ಭಾಗವಾಗಿ ದಾವಣಗೆರೆಯಲ್ಲಿ ಸಭೆಯನ್ನು ನಡೆಸಲಾಗಿದೆ. ಅಚ್ಚರಿ ಎಂದರೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರೋಧಿಸುವ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ವಾರ ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ನಿವಾಸದಲ್ಲಿಯೂ ಇದೇ ಮಾದರಿಯ ಸಭೆ ನಡೆದಿತ್ತು. ರಾಜ್ಯದ ಪ್ರಮುಖ ನಾಯಕರಿಲ್ಲದೇ ನಡೆಸುವ ಇಂತಹ ಸಭೆಗಳು ರಾಜ್ಯ ಬಿಜೆಪಿಯಲ್ಲಿ ಏನಾಗುತ್ತಿದೆ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿವೆ.ಒಟ್ಟಿನಲ್ಲಿ ಬಿಜೆಪಿ ಬಣ ರಾಜಕೀಯಕ್ಕೆ ಕೊನೆ ಇಲ್ಲದಂತಾಗಿದ್ದು, ಕಾಂಗ್ರೆಸ್ಗೆ ಮನೋರಂಜನೆ ನೀಡುತ್ತಿದೆ.