ಚನ್ನಗಿರಿ (ಸಂತೆಬೆನ್ನೂರು) : ವಿಜಯನಗರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಜನರಿಗೆ 1.80 ಕೋಟಿ ವೆಚ್ಚದಲ್ಲಿ ನಮ್ಮ ಟ್ರಸ್ಟ್ ನಿಂದ ಆಕ್ಸಿಜನ್ ಪ್ಲಾಂಟ್ನ್ನು ನಿರ್ಮಾಣ ಮಾಡಿದ್ದು, ಜನರ ಜೀವ ಉಳಿಸಿದ್ದೇವೆ ಎಂದು ಭೀಮಸಮುದ್ರದ ಶ್ರೀಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಸದಸ್ಯ ಜಿ.ಎಂ.ಅನೀತ್ ಹೇಳಿದರು.
ಇಲ್ಲಿನ ವಿಜಯ ವಿದ್ಯಾಸಂಸ್ಥೆ ಆವರಣದಲ್ಲಿ ಶ್ರೀಶೈಲ ಎಜ್ಯುಕೇಷನ್ ಟ್ರಸ್ಟ್, ಶ್ರೀಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಭಿಮಸಮುದ್ರ ದಾವಣಗೆರೆ ಅಶ್ವಿನಿ ಅಯುರ್ವೇದಿಕ್ ಮೆಡಿಕಲ್ ಕಾಲೇಜು, ಜಿಎಂ ಇನ್ಸ್ಟೀಟ್ಯೂಟ್ ಅಪ್ ಪರ್ಯಾಸಿಟಿಕಲ್ ಸೈನ್ಸ್ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ, ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೊರೊನಾ ಸಮಯದಲ್ಲಿ ಜನರ ಜೀವ ಉಳಿಸಲು ನಮ್ಮ ಟ್ಟಸ್ಟ್ ಸಾಕಷ್ಟು ಶ್ರಮಿಸಿದ್ದು, ಆಕ್ಸಿಜನ್ ನೀಡಿ ಅನೇಕರ ಪ್ರಾಣ ಉಳಿಸಿದ್ದೇವೆ. ಅಂದು ಉಳಿಸಿದ ಜೀವಗಳು ಇಂದು ಹಕ್ಕಿಯಂತೆ ಹಾರಾಡುತ್ತಿವೆ. ಇನ್ನು ಶಾಲೆಗಳ ಮಕ್ಕಳಿಗೆ ನೋಟ್ ಬುಕ್, ಬ್ಯಾಗ್ ಹಾಗೂ ಉದ್ಯೋಗ ಮೇಳ ಮಾಡಿದ್ದೇವೆ, ಚನ್ನಗಿರಿಯಲ್ಲಿ ಉದ್ಯೋಗ ಮೇಳದಿಂದ ಸುಮಾರು 900 ಜನಕ್ಕೆ ಉದ್ಯೋಗ ಲಬಿಸಿದೆ. ನಮ್ಮ ದುಡಿಮೆಯಲ್ಲಿ ಇಂತಹ ಸಾಮಾಜಿಕ ಕಾರ್ಯಕ್ಕೆ ಒಂದು ಭಾಗ ನೀಡಿದ್ದು, ನಮಗೆ ತೃಪ್ತಿ ತಂದಿದೆ. ಆದ್ದರಿಂದ ಜನರು ಇದರ ಸದುಪಯೋಗವನ್ನು ಪಡೆಯಬೇಕು ಎಂದರು.
ಟ್ರಸ್ಟ್ನ ಅಧ್ಯಕ್ಷ ಜಿ.ಎಂ.ಪ್ರಸನ್ನ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಆರೋಗ್ಯ ತಪಾಸಣೆಯಿಂದ ಪ್ರಾಥಮಿಕ ಹಂತದಲ್ಲಿಯೇ ರೋಗಗಳು ಪತ್ತೆಯಾಗಿ ಚಿಕಿತ್ಸೆ ಪಡೆಯಲು ಇಂತಹ ಶಿಬಿರಗಳು ಅನುಕೂಲ.
ಈ ಶಿಬಿರದಲ್ಲಿ ವಿಶೇಷ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಅಲ್ಲದೇ ಸೂಕ್ಷö್ಮ ರೋಗಗಳ ಬಗ್ಗೆ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ಮತ್ತು ಉಚಿತ ಔಷಧಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಗ್ರಾಮೀಣ ಜನರ ಬೇಡಿಕೆ ಬಂದರೆ ಯಾವುದೇ ಹಳ್ಳಿಗಳಲ್ಲಿ ಈ ಶಿಬಿರವನ್ನು ಆಯೋಜಿಸಲು ನಮ್ಮ ಟ್ರಸ್ಟ್ ಸಿದ್ದವಿದೆ. ಜನರ ಉತ್ತಮ ಆರೋಗ್ಯ ನಮ್ಮ ಟ್ರಸ್ಟ್ ಉದ್ದೇಶ ವೆಂದು ಹೇಳಿದರು.
ಟ್ರಸ್ಟ್ ಸಂಯೋಜಕ ಬಸವರಾಜ್ ಅರಳಿಕಟ್ಟೆ ಮಾತನಾಡಿ, ೨೦ ವರ್ಷಗಳಿಂದ ಟ್ರಸ್ಟ್ ನಿಂದ ಉದ್ಯೋಗ ಮೇಳ, ಮಕ್ಕಳಿಗೆ ನೋಟ್-ಬುಕ್ ವಿತರಣೆ, ಆರೋಗ್ಯ ಮೇಳ, ಆರೋಗ್ಯ ಚಿಕಿತ್ಸೆ, ಹೃದಯ ಚಿಕಿತ್ಸೆ ಹಾಗೂ ಸಾಮಾಜಿಕ ಸೇವೆಗಳನ್ನು ನೀಡುತ್ತಾ ಬಂದಿದೆ ಎಂದರು. ಶಿಬಿರದಲ್ಲಿ ಸಾಕಷ್ಟು ಜನಕ್ಕೆ ತಪಾಸಣೆ ಮಾಡಿ, ಉಚಿತವಾಗಿ ಔಷಧ ನೀಡಲಾಗಿದೆ ಎಂದರು.
- ಕಾರ್ಯಕ್ರಮದ ಅಧ್ಷಕ್ಷತೆಯನ್ನು ಡಾ.ಬಸವಂತಪ್ಪ ವಹಿಸಿದ್ದರು. ಟ್ರಸ್ಟ್ನ ಕಾರ್ಯದರ್ಶಿ ಜಿ.ಎಂ.ಲಿಂಗರಾಜ್, ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಅಧ್ಯಕ್ಷೆ ಭಾಗ್ಯ ಗುಜ್ಜರ್, ಅರಳಿಕಟ್ಟೆ ಬಸವರಾಜ್, ಕೆ.ಬಸವರಾಜ್, ಕೆ.ಸಿದ್ದಲಿಂಗಪ್ಪ, ಮಠದ್, ಸುಮತೀಂದ್ರ ನಾಡಿಗ್, ಜ್ಞಾನೇಶ್, ಪ್ರಕಾಶ್, ಮೆದಿಕೆರೆ ಸಿದ್ದೇಶ್, ದೇವರಹಳ್ಳಿ ಬಸವರಾಜ್, ಕೆ.ಸಿ.ನಾಗರಾಜ್ ಇದ್ದರು.