ಶಿವಮೊಗ್ಗ: ಶಿಮುಲ್(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ)ನ ಆಡಳಿತ ಮಂಡಳಿಗೆ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬಹುತೇಕ ಶಿವಮೊಗ್ಗ ಜಿಲ್ಲೆಯ ಶಿವಶಂಕರ್ ಅಥವಾ ವಿದ್ಯಾಧರ್ ಗೆ ಅಧ್ಯಕ್ಷ ಸ್ಥಾನ ಸಿಗಲಿದೆ.
14 ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಈಗಾಗಲೇ ಕಾಂಗ್ರೆಸ್ ಸಂಪೂರ್ಣ ಹಿಡಿತ ಸಾಧಿಸಿದೆ. ಈ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಇಂದು ನಿಗದಿಯಾಗಿದ್ದು, ಬಹುತೇಕ ಅವಿರೋಧ ಆಯ್ಕೆ ನಡೆಯಲಿದೆ. ಅಲ್ಲದೇ ನಾಲ್ಕು ಅವಧಿಗೆ ಅಧಿಕಾರ ಹಂಚಿಕೆಯಾಗಲಿದೆ ಎಂಬ ಮಾಹಿತಿ ಇದೆ.
ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಅಧಿಕ ಸ್ಥಾನದಲ್ಲಿ ಇರುವುದರಿಂದ ಬಹುತೇಕ ಅವಿರೋಧ ಆಯ್ಕೆಯಾಗಲಿದೆ.
ಜು.14ರಂದು ಶಿಮುಲ್ನ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಲಾ ಏಳು ಮಂದಿ ಮರು ಆಯ್ಕೆಯಾಗಿದ್ದು, ಏಳು ಹೊಸ ಮುಖಗಳು ಜಯಗಳಿಸಿದ್ದರು. ಮೂರು ಜಿಲ್ಲೆಗಳ ವ್ಯಾಪ್ತಿಯ ನಾಲ್ಕು ವಿಭಾಗಗಳಲ್ಲಿ ನಡೆದ ಚುನಾವಣೆಯಲ್ಲಿ ಹೊಸನಗರ ಕ್ಷೇತ್ರದಿಂದ ವಿದ್ಯಾಧರ ಹಾಗೂ ತೀರ್ಥಹಳ್ಳಿ ಕ್ಷೇತ್ರದಿಂದ ಆರ್.ಎಂ.ಮಂಜುನಾಥ ಗೌಡ ಮೊದಲ ಬಾರಿಗೆ ಶಿಮುಲ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದರು.
ಈ ಚುನಾವಣೆಯೂ ಕಿಂಗ್ ಮೇಕರ್ ಮಂಜುನಾಥ್ ಗೌಡ ನೇತೃತ್ವದಲ್ಲಿ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಸಹಕಾರಿಯಾಯಿತು. ಸದ್ಯ ಶಿಮುಲ್ನ ಮೂರು ಜಿಲ್ಲೆಗಳ ತಲಾ ನಾಲ್ವರು ನಿರ್ದೇಶಕರಿದ್ದು, ನಾಲ್ಕು ಅವಧಿಗೆ ಅಧಿಕಾರದ ಹಂಚಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಲ್ಲಿ ಮಾಜಿ ಅಧ್ಯಕ್ಷರೂ ಆದ ವಿದ್ಯಾಧರ, ಶಿಕಾರಿಪುರದ ಟಿ.ಶಿವಶಂಕರಪ್ಪ ಹಾಗೂ ಹೊನ್ನಾಳಿಯ ಬಿ.ಜಿ.ಬಸವರಾಜಪ್ಪ , ಕಂಚುಗಾರನಹಳ್ಳಿ ಬಸಪ್ಪ ಅವರು ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದು, ಯಾರಿಗೆ ಗದ್ದುಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ದಾವಣಗೆರೆಗೆ ಉಪಾಧ್ಯಕ್ಷ ಸ್ಥಾನ ದೊರೆಯುವ ನಿರೀಕ್ಷೆ
ಈ ಬಾರಿ ದಾವಣಗೆರೆ ಅಥವಾ ಶಿವಮೊಗ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಿಗುವ ಎಲ್ಲ ಲಕ್ಷಣಗಳಿವೆ. ಚಿತ್ರದುರ್ಗದವರು ಕೂಡ ಅಷ್ಟೇ ಓಡಾಟ ನಡೆಸಿದ್ದು, ಸಚಿವರ ಲಾಭಿಯೂ ಜೋರಾಗಿದೆ.
..
ನಾನು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಬಾರಿ ದಾವಣಗೆರೆಗೆ ಅಧ್ಯಕ್ಷ ಸ್ಥಾನ ಸಿಗಬೇಕಿತ್ತು. ಆದರೆ ಏನಾಗತ್ತೋ ಗೊತ್ತಿಲ್ಲ. ಉಪಾಧ್ಯಕ್ಷ ಸ್ಥಾನ ತಗೊಳ್ಳಿ ಅಂದಿದ್ದರು. ಆದರೆ ನಾನೇ ಬೇಡ ಅಂದಿದ್ದೇನೆ. ನೋಡೋಣ ಏನಾಗುತ್ತೇ?
-ಬಸಪ್ಪ, ಶಿಮುಲ್ ನಿರ್ದೇಶಕ
….ದಾವಣಗೆರೆಯವರು ಅಧ್ಯಕ್ಷ ಸ್ಥಾನ ಬೇಕು ಅಂತಿದ್ದಾರೆ, ಶಿವಮೊಗ್ಗದವರು ಬೇಕು ಅನ್ನುತ್ತಿದ್ದಾರೆ. ಎಲ್ಲರೂ ಒಟ್ಟುಗೂಡುತ್ತಿದ್ದೇವೆ. ನೋಡೋಣ ಅಧ್ಯಕ್ಷರು ಯಾರಾಗುತ್ತಾರೆ ಎಂದು.
-ಮಂಜುನಾಥ್ ಗೌಡ, ಶಿಮುಲ್ ನಿರ್ದೇಶಕ