ಭದ್ರಾವತಿ: ವಿಐಎಸ್ ಎಲ್ ಕಾರ್ಖಾನೆ ಪುನಶ್ಚೇತನ ಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರಿಗೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಸಿಂಧಿಯಾ ಅವರಿಗೆ ಪತ್ರ ಬರೆದಿರುವ ಸಚಿವ ಪಾಟೀಲ್ ಅವರು, ವಿಐಎಸ್ ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಮರುಪರಿಶೀಲಿಸಿ, ಅದರ ಪುನಶ್ಚೇತನಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ವಿಐಎಸ್ಪಿ ಖಾಸಗೀಕರಣಗೊಳಿಸಲು ಷೇರುವಿಕ್ರಯಕ್ಕೆ ಮುಂದಾಗಿದ್ದ ಭಾರತೀಯ ಉಕ್ಕು ಪ್ರಾಧಿಕಾರದ (ಎಸ್ಎಐಎಲ್) ಪ್ರಯತ್ನವು ವಿಫಲವಾಗಿರುವುದನ್ನು ಪತ್ರದಲ್ಲಿ ಸಿಂಧಿಯಾ ಅವರ ಗಮನಕ್ಕೆ ತರಲಾಗಿದೆ. 1989 ರವರೆಗೆ ಕರ್ನಾಟಕದ ಸರ್ಕಾರಿ ವಲಯದ ಉದ್ಯಮವಾಗಿದ್ದ ವಿಐಎಸ್ಪಿ ಕಾರ್ಖಾನೆ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಅಥವಾ ಉಕ್ಕು ಪ್ರಾಧಿಕಾರದ (ಎಸ್ಎಐಎಲ್) ಅಸಮರ್ಪಕ ಬಂಡವಾಳ ಹೂಡಿಕೆ ನೀತಿಯಿಂದಾಗಿ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿದೆ ಎಂದು ವಿವರಿಸಿದ್ದಾರೆ.