ದಾವಣಗೆರೆ : ಆರ್ ಎಸ್ಎಸ್ ಸಂಧಾನದ ಬಳಿಕ ರಾಜಾಹುಲಿ ಸಿಡಿದು ನಿಂತಿದ್ದಾರೆ. ತಾವೇ ಬೆಳೆಸಿದ ಹಾಗೂ ಕರೆತಂದ ನಾಯಕರು ರೂಪಿಸಿರುವ ಷಡ್ಯಂತ್ರಕ್ಕೆ ತಕ್ಕ ತಿರುಗೇಟು ನೀಡುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಂಧಾನ ಬಳಿಕ ಸಂಸದ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನ ಮನೆಗೆ ಕರೆಯಿಸಿಕೊಂಡು ಚರ್ಚಿಸಿದ್ದಾರೆ. ಮತ್ತೊಮ್ಮೆ ತಾಕತ್ತು ತೋರಿಸುವುದಕ್ಕೆ ರಾಜಾಹುಲಿ ಮುಂದಾಗಿದ್ದಾರೆ. ಹಾಗಾದ್ರೆ, ಬಿಎಸ್ವೈ ರೂಪಿಸಿದ ರಣತಂತ್ರ ಯಾವುದು..? ವಿರೋಧಿ ಬಣ ಸೇರಿ ಹೈಕಮಾಂಡ್ಗೂ ಬಿಸಿ ಮುಟ್ಟಿಸುವುದಕ್ಕೆ ಮುಂದಾದ್ರಾ ಯಡಿಯೂರಪ್ಪ..?
ಬಿಜೆಪಿಯಲ್ಲಿನ ಮುನಿಸು ಬಗೆಹರಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಆರ್ಎಸ್ಎಸ್ ನಾಯಕರು ಸಂಧಾನ ಸಭೆ ನಡೆಸಿದ ಬೆನ್ನಲ್ಲೇ ಪ್ರತ್ಯೇಕ ಗುಂಪಿನ ನಾಯಕ ಯತ್ನಾಳ್, ರಮೇಶ್ ಜಾರಕಿಹೋಳಿ ಮತ್ತಿತರು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ.
ಒಂದು ನಿಯೋಗ ಮನವಿ ಸಲ್ಲಿಸುವುದಕ್ಕೆ ಹೋಗಬೇಕು ಎಂದ್ರೆ ಪಕ್ಷದ ವತಿಯಿಂದ ಹೋಗಬೇಕು. ಎಲ್ಲರಿಗೂ ಮಾಹಿತಿ ನೀಡಬೇಕು. ರಾಜ್ಯಾಧ್ಯಕ್ಷರಿಗೂ, ವಿರೋಧ ಪಕ್ಷದ ನಾಯಕರಿಗೂ ಮಾಹಿತಿ ನೀಡಬೇಕು ಇಲ್ಲವೇ ಅವರ ಉಪಸ್ಥಿತಿಯಲ್ಲೇ ಮನವಿ ನೀಡುವುದಕ್ಕೆ ಹೋಗಬೇಕು. ಆದ್ರೆ, ಯತ್ನಾಳ್ ಟೀಂ, ಪೂರ್ವ ನಿಗದಿಯಂತೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾಗಿ ಹೇಳುತ್ತಿದೆ. ಈ ನಡೆಯೂ ಪಕ್ಷದಲ್ಲಿ ಎಲ್ಲ ಸರಿಯಿಲ್ಲ ಎಂಬ ಸಂದೇಶ ರವಾನಿಸಿದೆ.
ಇದರಿಂದ ವ್ಯಗ್ರವಾಗಿರುವ ರಾಜಾಹುಲಿ ಯಡಿಯೂರಪ್ಪ, ವಿರೋಧಿ ಬಣದ ಆಟಕ್ಕೆ ಬ್ರೇಕ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆರ್ಎಸ್ಎಸ್ ಸಭೆಯಲ್ಲಿ ಯಡಿಯೂರಪ್ಪನವರ ಪ್ರೋತ್ಸಾಹದಿಂದಲೇ ಬೆಳೆದವರು, ಅವರ ಕೃಪಕಟಾಕ್ಷದಿಂದ ಬೆಳೆದವರು ಅವರ ವಿರುದ್ಧವೇ ಮಾತನಾಡಿರುವುದಕ್ಕೆ ಗತ್ತು ತೋರಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷ ಹುದ್ದೆಗೆ ಬಿ.ವೈ.ವಿಜಯೇಂದ್ರ ಅವರನ್ನು ಹೈಕಮಾಂಡ್ ನೇಮಕ ಮಾಡಿದ್ದರೂ ಕುಟುಂಬದ ಕಾರಣದಿಂದ ಆಯ್ಕೆಯಾಗಿದ್ದಾರೆ ಎಂಬ ಕುಹಕ ಮಾತುಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.. ಜೊತೆಗೆ, ತಮ್ಮ ಬೆಂಬಲಕ್ಕಿರುವ ಶಾಸಕರು, ಸಂಸದರು, ನಾಯಕರು, ಮಾಜಿ ಶಾಸಕರು, ಮಾಜಿ ಸಂಸದರು , ನಾಯಕರನ್ನ ಒಗ್ಗೂಡಿಸಿ ಹೈಕಮಾಂಡ್ ನಾಯಕರಿಗೆ ತಾಕತ್ತು ತೋರಿಸುವುದರ ಜೊತೆಗೆ ವಿರೋಧಿ ಪಾಳಯಕ್ಕೆ ತಕ್ಕ ಎದಿರೇಟು ನೀಡಲು ತಯಾರಿ ನಡೆಸಿದ್ದಾರೆ ಎನ್ನಲಾಗ್ತಿದೆ.
ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಸಂಘಟನೆ ಚುರುಕುಗೊಂಡಿದೆ. ಕಾರ್ಯಕರ್ತರಲ್ಲಿ ಉತ್ಸಾಹ ಬಂದಿದೆ ಜೊತೆಗೆ ಮೈಸೂರು ಪಾದಯಾತ್ರೆ ಪಕ್ಷದ ವರ್ಚಸ್ಸು, ರಾಜ್ಯಾಧ್ಯಕ್ಷರ ಪ್ರಭಾವ ಹೆಚ್ಚಿದೆ. ಇದು ಬಿಎಸ್ವೈ ವಿರೋಧಿ ಪಾಳಯದಲ್ಲಿ ನಡುಕ ಉಂಟು ಮಾಡಿದೆ. ಬಿವೈವಿ ಹೀಗೆ ಮುಂದುವರಿದರೇ ತಮಗೆ ಉಳಿಗಾಲವಿಲ್ಲ ಎಂಬ ಆತಂಕ ಮನೆ ಮಾಡಿದೆ. ಹೀಗಾಗಿ, ವಿಜಯೇಂದ್ರ ವಿರುದ್ಧ ಸಂಚು ರೂಪಿಸಿ ಆಟವಾಡುತ್ತಿದೆ ಎನ್ನಲಾಗಿದೆ.ಒಟ್ಟಾರೆ.. ಆರ್ಎಸ್ಎಸ್ ಸಂಧಾನ ಸಭೆಯಲ್ಲಿದಾದ ಹಿನ್ನಡೆಗೆ ಮುಟ್ಟಿ ನೋಡಿಕೊಳ್ಳುವಂತಹ ತಿರುಗೇಟು ನೀಡುವುದಕ್ಕೆ ಸಜ್ಜಾಗಿದ್ದಾರೆ.