ದಾವಣಗೆರೆ/ಕಲಬುರಗಿ/ಶಿವಮೊಗ್ಗ/ಹುಬ್ಬಳ್ಳಿ:
ಬಿಸಿಲಿನ ಕೆಂಡಕ್ಕೆ ರೋಸಿ ಹೋಗಿದ್ದ ಜನಕ್ಕೆ ಗುರುವಾರ ಸಂಜೆ ಮಳೆರಾಯ ಒಂದಿಷ್ಟು ತಂಪೆರೆದ. ದಾವಣಗೆರೆ, ಕಲಬುರುಗಿ, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಮಳೆಯಾಗಿದ್ದು, ಸುಡು ಬಿಸಿಲಿನಿಂದ ಕಾದಿದ್ದ ಇಳೆ ಕೊಂಚ ತಂಪಾಗಿದೆ.
ದಾವಣಗೆರೆಯಲ್ಲಿ ಮಳೆ
ದೇವ ನಗರಿ ದಾವಣಗೆರೆಯಲ್ಲಿ ಬಿಸಿಲಿನಿಂದ ಕೆಂಗಟ್ಟಿದ್ದ ಜನಕ್ಕೆ ಮಳೆರಾಯ ತಂಪು ತರಿಸಿದ. ಹೆಬ್ಬಾಳು.ಹುಣಸೆಕಟ್ಟೆ. ಮಂಡಲೂರು. ಹೆಬ್ಬಾಳು ಬಡಾವಣೆ. ಮತ್ತು ಹಾಲ್ವರ್ತಿ ಗ್ರಾಮಗಳಲ್ಲಿ ಸಾಧಾರಣ ಮಳೆಯಾಯಿತು. ಮಳೆಯೇ ನಿರೀಕ್ಷೆ ಇಲ್ಲದ ಜನ ವರುಣನ ಶಬ್ದ ನೋಡಿ ಖುಷಿಯಾದರು. ಕಾರಿನಲ್ಲಿ ಹೋಗುತ್ತಿದ್ದವರು ಮುಂಗಾರು ಮಳೆ ಹಾಡು ಹಾಕಿ ಹನಿಯ ಜತೆ ನೀರಾಟವಾಡಿದರು. ಟ್ಯಾಂಕರ್ ನೀರು ತಂದು ತೋಟ ರಕ್ಷಿಸಿಕೊಳ್ಳುತ್ತಿದ್ದವರ ಮನಸ್ಸು ಮಳೆಯಿಂದ ಒಂದಿಷ್ಟು ನಿರಾಳಗೊಂಡಿತು. ಹಂಚಿನಮನೆಯಲ್ಲಿ ವಾಸವಾದವರು ಒಂದಿಷ್ಟು ಮಳೆಯಿಂದ ಪರಿಪಾಟಲು ಪಟ್ಟರು. ಮಳೆಯ ಆಗಮನದಿಂದ ಧರೆಯಿಂದ ಬಂದ ಸುವಾಸನೆ ಜನರ ಮೂಗು ತಟ್ಟಿತು. ಫ್ಯಾನ್, ಎಸಿಗಳಿಗೆ ಒಂದಿಷ್ಟು ರೆಸ್ಟ್ ಕೊಡಲಾಯಿತು.
ಕಲಬುರುಗಿ
ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಕೆಲ ಭಾಗದಲ್ಲಿ ಕೂಡ ಮಿಂಚು ಸಹಿತ ಜೋರು ಮಳೆಯಾಯಿತು. ಕಲಬುರಗಿ ನಗರದಲ್ಲಿ ಸುಮಾರು 45 ನಿಮಿಷ ಬಿರುಸಿನ ಮಳೆ ಸುರಿದು ನಗರವನ್ನು ತಂಪಾಗಿಸಿತು. ಸಿಟಿ, ಆಳಂದ ಪಟ್ಟಣ, ಮಾದನ ಹಿಪ್ಪರಗಿ, ಝಳಕಿ, ದರ್ಗಾ ಶಿರೂರು, ಕೆರೂರು, ನಿಂಗದಳ್ಳಿ, ಹಳ್ಳಿ ಸಲಗರ, ಕಾಮನಳ್ಳಿ, ನಿಂಗದಳ್ಳಿ ಸೇರಿ ಇತರೆ ಗ್ರಾಮಗಳಲ್ಲಿ ಅರ್ಧ ಗಂಟೆ ಕಾಲ ಬಿರುಗಾಳಿಯೊಂದಿಗೆ ಮಳೆ ಸುರಿಯಿತು. ಸಿಡಿಲು ಬಡಿದು ಎಮ್ಮೆ ಮೃತ
ಮಳೆಯಿಂದ ಅಫಜಲಪುರ ತಾಲ್ಲೂಕಿನ ಆನೂರು ಗ್ರಾಮದಲ್ಲಿ ಮನೋಹರ್ ಕಲ್ಲಸಿದ್ದನೂರು ಎಂಬುವವರಿಗೆ ಸೇರಿದ ಎಮ್ಮೆಗೆ ಸಿಡಿಲು ಬಡಿದು ಮೃತಪಟ್ಟಿದೆ. ಮಳೆಯಿಂದಾಗಿ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆಯ ವಾರದ ಸಂತೆಗೆ ಅಡಚಣೆಯಾಯಿತು.
ಬೀದರ್, ಹುಮನಾಬಾದ್, ಹುಲಸೂರ, ಬಸವಕಲ್ಯಾಣ ಹಾಗೂ ಭಾಲ್ಕಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಗುರುವಾರ ಗುಡುಗು ಸಹಿತ ಜಿಟಿಜಿಟಿ ಮಳೆಯಾಗಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ 4ಗಂಟೆ ಸುಮಾರಿಗೆ ಆರಂಭಗೊಂಡ ಜಿಟಿಜಿಟಿ ಮಳೆ ಸಂಜೆ 6.30ರವರೆಗೆ ಸುರಿದಿದೆ. ಮಳೆಗೆ ತಾಪಮಾನದಲ್ಲಿ ಭಾರಿ ಇಳಿಕೆಯಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ.
ಶಿವಮೊಗ್ಗ ಮೊದಲ ಮಳೆಯ ಸ್ಪರ್ಶ
ಮಲೆನಾಡು ಶಿವಮೊಗ್ಗದಲ್ಲಿ ಗುರುವಾರ ಸಂಜೆ 20 ನಿಮಿಷಕ್ಕೂ ಕಾಲ ಮಳೆ ಸುರಿಯಿತು. ಯುಗಾದಿ ಹಬ್ಬದ ಹೊಸ ವರ್ಷದ ಒಡಕಾಗಿದ್ದು ಅಧಿಕ ಕಾಲ ಸುರಿದ ಪ್ರಸಕ್ತ ವರ್ಷದ ಮೊದಲ ಮಳೆ ಯುಗಾದಿ, ರಂಜಾನ್ ಹಬ್ಬವನ್ನು ಇಮ್ಮಡಿಗೊಳಿಸಿತು.ಬಿಸಿಲ ತಾಪಕ್ಕೆ ಕಂಗೆಟ್ಟಿದ್ದ ಜನರು ಮಳೆರಾಯನ ದರ್ಶನದಿಂದ ಪುಳಕಗೊಂಡರು. ಮಳೆಗೆ ನಗರದ ರಸ್ತೆಗಳಲ್ಲಿ ನೀರು ಹರಿಯಿತು.
ಸಿಡಿಲಿಗೆ ಮೂವರ ಸಾವು
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿಯೂ ಮಳೆಯಾಗಿದ್ದು ವಿವಿಧೆಡೆ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಹೊರವಲಯದಲ್ಲಿ ಬೀರಪ್ಪ ನಿಂಗಪ್ಪ ಅವರಾದಿ (15), ಮಸಳಿ ಬಿ.ಕೆ.ಗ್ರಾಮದ ಸೋಮಶೇಖರ ಪಟ್ಟಣಶೆಟ್ಟಿ (45) ಮತ್ತು ಚಡಚಣ ತಾಲ್ಲೂಕಿನ ಹಾವನಾಳ ಗ್ರಾಮ ಸುನಂದಾ ಶ್ರೀಮಂತ ಡೋಳ್ಳಿ (50) ಎಂಬುವರು ಮೃತಪಟ್ಟಿದ್ದಾರೆ. ಒಂದು ಎಮ್ಮೆ ಮತ್ತು ಎರಡು ಆಕಳು ಸಿಡಲಿಗೆ ಬಲಿಯಾಗಿವೆ.ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆ ವಿವಿಧೆಡೆ ಗುರುವಾರ ಗುಡುಗು ಸಹಿತ ಮಳೆಯಾಯಿತು.ವಿಜಯಪುರ ಜಿಲ್ಲೆ ತಿಕೋಟಾ,ಆಲಮಟ್ಟಿ, ಮುದ್ದೇಬಿಹಾಳ, ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ. ತಾಳಿಕೋಟೆ ಪಟ್ಟಣದಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ. ಚಡಚಣ ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಬಿರುಗಾಳಿ ಅಬ್ಬರಕ್ಕೆ 20ಕ್ಕೂ ಮನೆಯ ಮೇಲಿನ ಪತ್ರಾಸ್ಗಳು ಹಾರಿಹೋಗಿವೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣ ಸೇರಿ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡುಗು, ಜೋರಾದ ಗಾಳಿಯೊಂದಿಗೆ ಮಳೆ ಸುರಿಯಿತು. ಬೈಲಹೊಂಗಲ– ಹಾರೂಗೊಪ್ಪ ಮುಖ್ಯ ರಸ್ತೆಯಲ್ಲಿ ಮರ ನೆಲಕ್ಕುರುಳಿತು. ಮರಕುಂಬಿ, ಮಲ್ಲೂರ, ದುಂಡನಕೊಪ್ಪ ಗ್ರಾಮದಲ್ಲಿ ಹಳ್ಳಗಳು ತುಂಬಿ ಹರಿದವು. ಬಾಗಲಕೋಟೆ ನಗರ ಸೇರಿ ಜಿಲ್ಲೆಯ ಕಮತಗಿ, ಸೂಳೇಭಾವಿ, ಐಹೊಳೆ, ರಕ್ಕಸಗಿ ಸೇರಿ ವಿವಿಧೆಡೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆಯಾಯಿತು. ಹುನಗುಂದದಲ್ಲಿ ಕೆಲ ನಿಮಿಷ ಮಳೆಯಾಯಿತು. ಒಟ್ಟಾರೆ ಮಳೆ ಸಿಂಚನ ಜನರಿಗೆ ಖುಷಿಕೊಟ್ಟಿತು.