ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಮಾಜಿ ಸಚಿವ ಎಸ್.ಎ ರವೀಂದ್ರನಾಥ ಅವರ ಸಾರಥ್ಯದಲ್ಲಿ ನಾವು ಸಾಗುತ್ತಿದ್ದೇವೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಪರೋಕ್ಷವಾಗಿ ಎಂಪಿ ಸಿದ್ದೇಶ್ವರಗೆ ಟಾಂಗ್ ನೀಡಿದ್ರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಬಣಗಳಿಲ್ಲ.೧೯೯೦ ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ನಿಲ್ಲುವ ಅಭ್ಯರ್ಥಿಗಳೇ ಇರಲಿಲ್ಲ. ಅಂದು ದಾವಣಗೆರೆ ಅಖಂಡ ಚಿತ್ರದುರ್ಗ ಜಿಲ್ಲೆಗೆ ಒಳಪಟ್ಟಿತ್ತು. ಆಗ ಎಸ್ .ಎ ರವೀಂದ್ರನಾಥ ಪಕ್ಷದ ಅಧ್ಯಕ್ಷರಾಗಿ ಕಟ್ಟಿಬೆಳೆಸಿದ್ದರು. ಇಲ್ಲಿ ರೇಣುಕಾಚಾರ್ಯ ಬಣ ಎಂಬುದಿಲ್ಲ ಇಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದರು.
ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕನಸು ನನಸು
ಅಯ್ಯೋಧ್ಯೆಯಲ್ಲಿ ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣಕ್ಕಾಗಿ ಸುಮಾರು ೫೦೦ ವರ್ಷಗಳ ಹಿಂದೆ ಕಂಡಿದ್ದ ಕನಸು ನರೇಂದ್ರ ಮೋದಿಯವರ ಆಡಳಿತದ ಫಲವಾಗಿ ನನಸಾಗುತ್ತಿದೆ. ಕೇವಲ ಭಾರತ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಆಹ್ವಾನ ನೀಡಲಾಗಿದೆ ಹಾಗೂ ಆ ಐತಿಹಾಸಿಕ ಕ್ಷಣಕ್ಕೆ ಎಲ್ಲರೂ ಕಾತುರರಾಗಿ ಕಾಯುತ್ತಿದ್ದೇವೆ.
ಕೋಮುಗಲಭೆ ಸೃಷ್ಟಿಸಿ ಓಟ್ ಬ್ಯಾಂಕ್ ರಾಜಕಾರಣ ಮಾಡಿದವರಿಗೆ ಪ್ರಧಾನಿ ನರೇಂದ್ರ ಮೋದಿ ತಕ್ಕ ಪಾಠ ಕಲಿಸಿದ್ದಾರೆ.ಈ ಮೂಲಕ ಶಾಂತಿಸಂದೇಶ ಸಾರಿದ್ದಾರೆ. ಎಡಪಂಥೀಯರು ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಅನುದಾನ ನೀಡುವುದಾಗಿ ಘೋಷಿಸಿದ್ದು ಸರಿಯಲ್ಲ. ಅವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಆರೀತಿ ಅವರು ಹೇಳಬಾರದಾಗಿತ್ತು ಎಂದರು.
ಬರಗಾಲವಿದೆ ಆದರೆ ರೈತರಿಗೆ ರಾಜ್ಯ ಸರ್ಕಾರ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ.ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಸೌಲಭ್ಯ ಒದಗಿಸಿತ್ತು.ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಜನ ವಿರೋಧಿ ಸರ್ಕಾರವಾಗಿದೆ ಎಂದು ಕುಟುಕಿದರು.
ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕವಾಗಿದಾಗಿನಿಂದ ಒಂದು ರೀತಿ ಮಿಂಚಿನಂತೆ ವಾತಾವರಣ ಉಂಟಾಗಿದೆ.ವಿಜಯೇಂದ್ರ ಅವರು ಸಂಘಟನೆ ಮೂಲಕ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತಿದ್ದಾರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು