ದಾವಣಗೆರೆ: ಸದ್ಯ ರಾಜ್ಯ ಬಿಜೆಪಿಯಲ್ಲಿ ಶಾಸಕ ಬಸವನಗೌಡ ಯತ್ನಾಳ್ ಹಾಗೂ ಶಾಸಕ ವಿಜಯೇಂದ್ರ ನಡುವೆ ಮುಸುಕಿನ ಗುದ್ದಾಟ ನಡೆದರೆ, ದಾವಣಗೆರೆಯಲ್ಲಿ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಸ್ಎ ರವೀಂದ್ರನಾಥ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ..ಈ ನಡುವೆ ಕಾಂಗ್ರೆಸ್ ಹಿತ್ತಲಿನ ಆಟ ನಡೆಸುತ್ತಿದೆ. ಇದರ ಕಂಪ್ಲೀಟ್ ಡೀಟೆಲ್ಸ್ ನಿಮ್ಮ ಮುಂದೆ
ಹೌದು…ದಾವಣಗೆರೆ ಕಮಲಪಾಳಯದಲ್ಲಿ ಈಗ ಬಣ ರಾಜಕೀಯ ಆಟ ನಡೆಯುತ್ತಿದ್ದು, ಆರೋಪ, ಪ್ರತ್ಯಾರೋಪಗಳು ಬರುತ್ತಿದೆ. ಈ ಹಿಂದೆ ಸಂಸತ್ ಚುನಾವಣೆ ವೇಳೆ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಎರಡು ಬಣದ ಮುಖಂಡರು ಒಲ್ಲದ ಮನಸ್ಸಿನಿಂದ ಒಂದಾಗಿ ಚುನಾವಣೆ ನಡೆಸಿದರು. ಆದರೆ ಮಾಜಿಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿ ಕಡಿಮೆ ಮತಗಳ ಅಂತರದಿAದ ಸೋತರು. ಇಲ್ಲಿಂದ ಬಣ ರಾಜಕೀಯ ಜೋರಾಯಿತು. ಎರಡು ಬಣಗಳು ಅವರದ್ದೇ ಆದ ವಾದ ಮಂಡಿಸಿದರು.
ಬಣ ಯಾಕಾಯಿತು?
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಹುಟ್ಟುಹಬ್ಬಕ್ಕೆ ಬಂದಿದ್ದ ಸಿಎಂ ಯಡಿಯೂರಪ್ಪ ಈ ಬಾರಿಯೂ ಸಿದ್ದೇಶ್ವರ ಗೆಲ್ಲಿಸಿ ಎಂದು ಹೇಳಿಕೆ ನೀಡಿದರು. ಇದರಿಂದ ಆಕಾಂಕ್ಷಿಯಾಗಿದ್ದ ರವೀಂದ್ರನಾಥ್ ಬಣ ಮಾಜಿ ಸಚಿವ ಎಂಪಿರೇಣುಕಾಚಾರ್ಯ, ಮಾಜಿ ಶಾಸಕ ಗುರುಸಿದ್ದಲಿಂಗಗೌಡರ ಪುತ್ರ ಡಾ.ರವಿ. ಲೋಕಿಕೆರೆ ನಾಗರಾಜ್, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣದಲ್ಲಿ ಸೋತ ಬಿ.ಜೆ.ಅಜಯ್ಕುಮಾರ್ ಒಂದಾದರು. ನಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಡಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದರು. ದೆಹಲಿಗೂ ಹೋಗಿ ಬಂದಿದ್ದರು. ಈ ನಡುವೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಟೀಂನಲ್ಲಿ ಬಿಜೆಪಿ ಶಾಸಕ ಬಿ.ಪಿ.ಹರೀಶ್, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಜಗದೀಶ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್ ಒಂದಾಗಿ ಎದುರಾಳಿಗೆ ಟಾಂಗ್ ನೀಡಿದರು. ಈ ನಡುವೆ ಮಾಜಿ ಶಾಸಕ ರೇಣುಕಾಚಾರ್ಯ ದಾವಣಗೆರೆ ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ರನ್ನು ಆಗಾಗ ಭೇಟಿ ಮಾಡುತ್ತಿದ್ದರು. ಇದು ಎದುರಾಳಿ ಸಿದ್ದೇಶ್ವರ ತಂಡಕ್ಕೆ ಇರುಸು ಮುರುಸು ಉಂಟಾಯಿತು. ಅಲ್ಲದೇ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯೇಂದ್ರ ಸಹ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್ರೊಡನೆ ಹೆಚ್ಚು ಸಂಪರ್ಕ ಬೆಳೆಸಿದರು. ಅಷ್ಟೋತ್ತಿಗೆ ಬಿಜೆಪಿ ಟಿಕೆಟ್ ಮಾಜಿ ಸಂಸದ ಜಿಎಂ ಸಿದ್ದೇಶ್ವರಪತ್ನಿ ಗಾಯಿತ್ರಿ ಸಿದ್ದೇಶ್ವರ್ ಸಿಕ್ಕಿತ್ತು. ಆದರೆ ಮಾಜಿ ಶಾಸಕ ರೇಣುಕಾಚಾರ್ಯ ಟೀಂಗೆ ಗಾಯಿತ್ರಿ ಸಿದ್ದೇಶ್ವರ್ಗೆ ಟಿಕೆಟ್ ನೀಡಿರುವುದು ಸುತಾರಾಮ ಇಷ್ಟವಿರಲಿಲ್ಲ. ಮೇಲ್ನೋಟಕ್ಕೆ ಪ್ರಚಾರಕ್ಕೆ ಬಂದರೂ, ಒಳೊಳಗೆ ಗಾಯಿತ್ರಿ ಸಿದ್ದೇಶ್ವರನ್ನು ಸೋಲಿಸಲೇಬೆಂಕೆಂಬ ನಿರ್ಧಾರಕ್ಕೆ ಬಂದಿದ್ದರು ಎಂದು ಬಿಜೆಪಿ ಆಪ್ತವಲಯ ಹೇಳುತ್ತವೆ. ಇದಾದ ಬಳಿಕ ಎಂಪಿ ಚುನಾವಣೆಯಲ್ಲಿ ಗಾಯಿತ್ರಿ ಸಿದ್ದೇಶ್ವರ ಸುಮಾರು 25 ಸಾವಿರ ಮತಗಳಿಂದ ಪರಾಭವಗೊಂಡರು. ಇದಕ್ಕೆ ಮಾಜಿ ಶಾಸಕ ರೇಣುಕಾಚಾರ್ಯ ಟೀಂ ಕಾರಣ ಎಂದು ಸಿದ್ದೇಶ್ವರ ಬೆಂಬಲಿಗರು ಆರೋಪಿಸಿದರು. ಅಲ್ಲದೇ ಇದೇ ಸಮಯದಲ್ಲಿ ಹೊನ್ನಾಳಿಯಿಂದ ಒಂದು ಆಡಿಯೋ ವೈರಲ್ ಆಯಿತು. ಈ ಆಡಿಯೋದಲ್ಲಿ ಮಾಜಿ ಸಂಸದರು ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂಬ ಆರೋಪವಿತ್ತು. ಅಲ್ಲಿಂದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಮಾಜಿ ಶಾಸಕ ರೇಣುಕಾಚಾರ್ಯ, ರವೀಂದ್ರನಾಥ್ ಬೆಂಬಲಿಗರು ವಿಭಾಗಗೊಂಡರು. ಇದರಲ್ಲಿ ಎಂಪಿ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಡಾ.ರವಿಕುಮಾರ್ ಕಮಲ ಬಿಟ್ಟು ಕಾಂಗ್ರೆಸ್ ಸೇರಿಕೊಂಡರು. ಅಲ್ಲಿಗೆ ರೇಣುಕಾಚಾರ್ಯ ಟೀಂನ ಒಂದು ವಿಕೆಟ್ ಪತನಗೊಂಡಿತು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಇತರರು ಟೀಮ್ ಮಾಡಿಕೊಂಡರು..ಬಳಿಕ ಮಾಜಿ ಶಾಸಕ ರೇಣುಕಾಚಾರ್ಯ ವಿಜಯೇಂದ್ರ ಬಣ ಸೇರಿಕೊಂಡರೇ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಯತ್ನಾಳ ಬಣ ಸೇರಿಕೊಂಡರು. ಈ ನಡುವೆ ವಿಜಯೇಂದ್ರರವರನ್ನು ಮುಂದಿನ ಸಿಎಂ ಎಂದು ರೇಣುಕಾಚಾರ್ಯ ಘೋಷಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೂ ಬಣ
ಈ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದಲ್ಲೂ ಎರಡು ತಂಡಗಳ ನಡುವೆ ತಿಕ್ಕಾಟವಿತ್ತು. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ತಂಡದಲ್ಲಿ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ ಇದ್ದರೆ, ಮಾಜಿ ಶಾಸಕ ರೇಣುಕಾಚಾರ್ಯ ತಂಡದಲ್ಲಿ ರಾಜಶೇಖರ ನಾಗಪ್ಪ ಇದ್ದರು. ಅಂತಿಮವಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ರೇಣುಕಾಚಾರ್ಯ ಬಣದ ರಾಜಶೇಖರ ನಾಗಪ್ಪರನ್ನು ಆಯ್ಕೆಮಾಡಿದರು. ಇದರ ಹಿಂದೆ ಎಸ್ಎಆರ್ ತಂಡದ ಕೆ.ಎಂ.ಸುರೇಶ್, ಶಿವಯೋಗಿಸ್ವಾಮಿ ಇದ್ದರು. ಇದರಿಂದ ಮಾಜಿ ಸಂಸದ ಸಿದ್ದೇಶ್ವರ ತಂಡ ಇನ್ನಷ್ಟು ಆಕ್ರೋಶಗೊಂಡಿತು.
ಮಾಜಿ ಸಂಸದರ ಮೇಲೆ ಸಾವಿರ ಕೋಟಿ ರೂಪಾಯಿ ಆರೋಪ
ಮಾಜಿ ಶಾಸಕ ರೇಣುಕಾಚಾರ್ಯ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಹುಟ್ಟುಹಬ್ಬದಲ್ಲಿ ಮಾಜಿ ಸಂಸದ ಸಿದ್ದೇಶ್ವರ ಅವರು ಬಿಜೆಪಿ ಸರಕಾರ ಇದ್ದಾಗ ಸಾವಿರ ಕೋಟಿ ರೂಪಾಯಿ ಮಾಡಿದ್ದಾರೆ ಎಂದಿದ್ದರು. ಅಲ್ಲದೇ ಬಿ.ವೈ. ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮಗುರಿ ಎಂದು ರೇಣುಕಾಚಾರ್ಯ ಹೇಳಿದ್ದರು. ಸಿದ್ದೇಶ್ವರ ಅವರು ಸಾವಿರ ಕೋಟಿ ರೂಪಾಯಿ ಮಾಡಿದ್ದಾರೆ ಎಂದಾದರೆ, ಅವರ ಸರ್ಕಾರದ ಅವಧಿಯಲ್ಲಿ ಸಚಿವರು ಎಷ್ಟು ಕೋಟಿಗಟ್ಟಲೆ ಕೊಳ್ಳೆ ಹೊಡೆದಿರಬಹುದು? ಎಂದು ಕಾಂಗ್ರೆಸ್ ನವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ದಾವಣಗೆರೆಯಲ್ಲಿ ವಿಜಯೇಂದ್ರ ಪರ ಬೃಹತ್ ಸಮಾವೇಶ
ಯತ್ನಾಳ್ ಟೀಂ ವಕ್ಫ್ ವಿರೋಧಿ ಹೋರಾಟಕ್ಕೆ ಪರ್ಯಾಯವಾಗಿ ಟೆಂಪಲ್ ರನ್ ಮಾಡುವುದರ ಜೊತೆಗೆ ದಾವಣಗೆರೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಬಿಸಿ ಪಾಟೀಲ್, ವೈ ಸಂಪಂಗಿ ಸೇರಿದಂತೆ ವಿಜಯೇಂದ್ರ ಬಣದ ಪ್ರಮುಖರು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿ ಈ ಮಾತನ್ನು ಹೇಳಿದರು.
ಇಬ್ಬರ ಜಗಳದಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಎಸ್ ಎ ಆರ್ ಟೀಂ ನಡುವೆ ನಡೆಯುತ್ತಿರುವ ಜಗಳದಲ್ಲಿ ಸಚಿವ ಎಸ್ .ಎಸ್.ಮಲ್ಲಿಕಾರ್ಜುನ್ ನೇತೃತ್ವದ ಕಾಂಗ್ರೆಸ್ ಆಗಾಗ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರಗೆ ಟಾಂಗ್ ನೀಡಿ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್ ಪರ ಬ್ಯಾಟಿಂಗ್ ಬೀಸುತ್ತಿದೆ. ಈ ನಡುವೆ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಸಿದ್ದೇಶ್ವರ ಜತೆ ಇದ್ದು, ಆಗಾಗ ಕಾಂಗ್ರೆಸ್ ಗೆ ಸಡ್ಡು ಹೊಡೆಯುತ್ತಿದ್ದಾರೆ. ಒಟ್ಟಾರೆ ಬಿಜೆಪಿ ಕಾರ್ಯಕರ್ತರು ಅನಾಥವಾಗಿದ್ದು, ಎತ್ತ ಹೋಗಬೇಕೆಂಬ ದ್ವಂದ್ವ ನಿಲುವಿನಲ್ಲಿದ್ದಾರೆ