
ದಾವಣಗೆರೆ/ನವದೆಹಲಿ; ತೆಲಂಗಾಣದ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿದ ಹಿಂದುಳಿದ ವರ್ಗಗಳ ಶೇ.42 ಮೀಸಲಾತಿಯನ್ನು ಸಂಸತ್ತಿನಲ್ಲಿ ಅನುಮೋದಿಸುವಂತೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಸಂಸದರುಗಳು ಬೃಹತ್ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮತ್ತು ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಜಾತಿ ಗಣತಿಯನ್ನು ನಡೆಸುವುದಾಗಿ ಮತ್ತು ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ನ್ಯಾಯವನ್ನು ಖಚಿತಪಡಿಸುವುದಾಗಿ ಭರವಸೆ ನೀಡಿದ್ದರು ಅದರಂತೆ ಅವರ ಮಾರ್ಗದರ್ಶನದಲ್ಲಿ ತೆಲಂಗಾಣ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ ನಿರ್ದೇಶನದ ಮೇರೆಗೆ ತೆಲಂಗಾಣದಲ್ಲಿ 100 ಸರ್ಕಾರಿ ಅಧಿಕಾರಿಗಳಿಂದ ಜಾತಿ ಗಣತಿ ನಡೆಸಿ 50 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ.
ವರದಿಯನ್ನು ತೆಲಂಗಾಣ ವಿಧಾನಸಭೆಯಲ್ಲಿ ಮಂಡಿಸಲಾಯಿತು ಮತ್ತು ಹಿಂದುಳಿದ ವರ್ಗಗಳಿಗೆ ಶೇ.42% ಮೀಸಲಾತಿ ನೀಡಲು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಲಾಗಿದೆ ಆದ್ದರಿಂದ ತೆಲಂಗಾಣದ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿದ ಹಿಂದುಳಿದ ವರ್ಗಗಳ ಶೇ.42 ಮೀಸಲಾತಿಯನ್ನು ಸಂಸತ್ತಿನಲ್ಲಿ ಅನುಮೋದಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತೆಲಂಗಾಣದ ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಸಂಸದರುಗಳು ಭಾಗವಹಿಸಿದ್ದರು.

