ಹಾಸನ:
ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ಪಕ್ಕದ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯ ಗೊಂಡಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಮೃತಪಟ್ಟ ಘಟನೆ ಭಾನುವಾರ ತಾಲ್ಲೂಕಿನ ಕಿತ್ತಾನೆ ಬಳಿ ನಡೆದಿದೆ.
ಮಧ್ಯಪ್ರದೇಶದ ಸಿಂಗ್ರುಲಿ ಜಿಲ್ಲೆಯ ದೋಸಾರ್ ಗ್ರಾಮದ ಹರ್ಷವರ್ಧನ್ (26) ಮೃತರು. ಜೀಪ್ ಚಾಲಕ, ಹಾಸನದ ಡಿಎಆರ್ ಕಾನ್ಸ್ಟೆಬಲ್ ಮಂಜೇಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ಮಹೇಂದ್ರ ಬೊಲೆರೊ ಜೀಪ್ ಟೈಯರ್ ಸ್ಫೋಟದಿಂದ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದ ತಡೆ ಕಂಬಗಳಿಗೆ ಡಿಕ್ಕಿ ಹೊಡೆದು ನಂತರ ತೆಂಗಿನ ಮರಕ್ಕೆ ಡಿಕ್ಕಿಯಾಗಿದ್ದು, ಪಕ್ಕದ ಮನೆಗೆ ತಾಗಿ ನಿಂತಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಆಂಬುಲೆನ್ಸ್ ಮೂಲಕ ಹರ್ಷವರ್ಧನ್ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವರನ್ನು ಝೀರೊ ಟ್ರಾಫಿಕ್ನಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿಯೇ ಹರ್ಷವರ್ಧನ್ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ, ಎಸ್ಪಿ ಮೊಹಮದ್ ಸುಜೀತಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು