ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ರಾಜಕೀಯದಲ್ಲಿ ಶೇ.33 ರಷ್ಟು ಮೀಸಲಾತಿ ನೀಡುವ ಮೂಲಕ ಮಹಿಳಾ ಶಕ್ತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಸಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಸಲುವಾಗಿ ರಾಜಕೀಯದಲ್ಲಿ ಶೇ.33 ರಷ್ಟು ಮೀಸಲಾತಿ ನೀಡಿದ್ದಾರೆ. ಅದರ ಪರಿಣಾಮವಾಗಿ ನಾನೊಬ್ಬ ಮಹಿಳಾ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು. ಹೆಣ್ಣುಮಕ್ಕಳ ಶಿಕ್ಷಣ, ಮಹಿಳಾ ಸ್ವಾವಲಂಬನೆಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದ್ದಾರೆ. ಬೇಟಿ ಬಚಾವೋ, ಬೇಟಿ ಪಢಾವೋ ಮೂಲಕ ಕೋಟ್ಯಂತರ ಹಣ್ಣು ಮಕ್ಕಳ ಪಾಲಿಗೆ ಆಶಾ ಕಿರಣವಾಗಿದ್ದಾರೆ ಎಂದರು.
ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದಾರೆ. ನಾವು ಇಷ್ಟು ವರ್ಷ ಮಾಡಿರೋ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದೇವೆ. ಇದುವರೆಗೂ ಪಾರದರ್ಶಕ ಆಡಳಿತ ನೀಡಿದ್ದಕ್ಕೆ ಲೋಕಸಭಾ ಕ್ಷೇತ್ರದ ಮತದಾರರು ನಮ್ಮನ್ನು ಆರಿಸಿ ಲೋಕಸಭೆಗೆ ಕಳುಹಿಸಿದ್ದಾರೆ. ಈ ಬಾರಿಯೂ ನನಗೆ ಮತ ನೀಡುವ ಮೂಲಕ ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತಕ್ಕೆ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಹೊಸ ಬೆಳವನೂರು ಗ್ರಾಮದ ಗಣಪತಿ, ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಗ್ರಾಮದ ಬೂತ್ ಅಧ್ಯಕ್ಷ ತಿಪ್ಪೇಸ್ವಾಮಿ, ಜೆಡಿಎಸ್ ಮುಖಂಡ ನಾಗೇಶ್ವರರಾವ್ ನಿವಾಸಕ್ಕೆ ಭೇಟಿ ನೀಡಿ, ಉಭಯ ಕುಶಲೋಪರಿ ವಿಚಾರಿಸಿದರು. ಹೊಸ ತುರ್ಚಘಟ್ಟ ಗ್ರಾಮದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು.
ಬಿಜೆಪಿ ಮುಖಂಡರಾದ ಗಂಗಮ್ಮ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಕೈದಾಳೆ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಳಿಕ ಗ್ರಾಮದಲ್ಲಿ ಮತಯಾಚನೆ ಮಾಡಿದರು. ಕೈದಾಳೆ ಗ್ರಾಮದ ಬೂತ್ ಅಧ್ಯಕ್ಷ ಕೇಶವಮೂರ್ತಿ, ಮುಖಂಡರಾದ ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಇನ್ನು ಕುಕ್ಕುವಾಡ, ಹೊಸಕೊಳೇನಹಳ್ಳಿ, ನಾಗರಸನಹಳ್ಳಿ, ಕನಗೊಂಡನಹಳ್ಳಿ, ಹದಡಿ, ಮುದಹದಡಿ, ಜರೇಕಟ್ಟೆ, ನಾಗನೂರು ಸೇರಿದಂತೆ 15 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.ಪ್ರತಿ ಗ್ರಾಮಕ್ಕೂ ಭೇಟಿ ನೀಡಿದಾಗ ಬೂತ್ ಅಧ್ಯಕ್ಷರು, ಸಾಮಾನ್ಯ ಕಾರ್ಯಕರ್ತರ, ಜೆಡಿಎಸ್ ಮುಖಂಡರ, ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಚರ್ಚಿಸಿದರು.
ಜೆಡಿಎಸ್ ಹಿರಿಯ ಮುಖಂಡ ನಾಗೇಶ್ವರರಾವ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸ್ ಕರಿಯಪ್ಪ, ವಿಜಯ್ ಕುಮಾರ್, ಗುರು ಪ್ರಸಾದ್, ಗುರುಮೂರ್ತಿ, ದಕ್ಷಿಣ ಅಧ್ಯಕ್ಷ ಆನಂದ್ ರಾವ್ ಸಿಂಧೆ, ರಾಜು ನೀಲಗುಂದ, ಡಿ.ಎಲ್.ಶಿವಪ್ರಕಾಶ್ ಮತ್ತು ಎಲ್ಲ ಗ್ರಾಮಗಳ ಮುಖಂಡರು ಪ್ರಚಾರಕ್ಕೆ ಸಾಥ್ ನೀಡಿದ್ದರು