ಶಿವಮೊಗ್ಗ : ತಾಲೂಕಿನ ಸಂತೆ ಕಡೂರು ಹೋಬಳಿಯ ಹಲವೆಡೆ ರಸ್ತೆ ಬದಿ ಅಡಕೆ ಸಿಪ್ಪೆ ಸುರಿದು ಮನ ಬಂದಂತೆ ಬೆಂಕಿ ಹಚ್ಚುವುದರಿಂದ ವಾಯು ಮಾಲಿನ್ಯದ ಜತೆಗೆ ಸಂಚಾರಕ್ಕೆ ಅಡಚಣೆಯಾಗಿದೆ.
ಈ ಭಾಗಗಳಲ್ಲಿ ಅಡಕೆ ಚೇಣಿದಾರರಿದ್ದು ಚಳಿಗಾಲದ ಅವಧಿ ಬಂತೆಂದರೆ ಅಡಕೆ ಸಿಪ್ಪೆ ಸುಳಿದು ಸರಿಯಾಗಿ ವಿಲೇವಾರಿ ಮಾಡದೇ ರಸ್ತೆ ಬದಿಗಳಲ್ಲಿ ಸುರಿಯುತ್ತಾರೆ. ಸಿಪ್ಪೆ ಹೆಚ್ಚಾಗಿ ಒಣಗಿದ ಬಳಿಕ ಬೆಂಕಿ ಹಚ್ಚುತ್ತಾರೆ. ಇದರಿಂದ ರಸ್ತೆ ಬದಿ ಮರಗಳಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಅಲ್ಲದೇ ಅಡಕೆ ಸಿಪ್ಪೆ ಕೊಳೆತು ದುರ್ನಾತ ಬೀರುವುದಲ್ಲದೇ ಸೊಳ್ಳೆಗಳು ಹೆಚ್ಚಾಗಲು ಕಾರಣವಾಗಿದೆ. ಒಮ್ಮೊಮ್ಮೆ ಹಸಿ ಅಡಕೆ ಸಿಪ್ಪೆಗಳಿಗೆ ಬೆಂಕಿ ಹಚ್ಚುವುದರಿಂದ ಹೊಗೆಯ ದಟ್ಟತೆ ಹೆಚ್ಚಾಗುತ್ತಿದೆ.
ಅಪಘಾತ ಸಾಧ್ಯತೆ ಹೆಚ್ಚು
ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ಅಪಘಾತವಾಗುವ ಸಾಧ್ಯತೆಯೂ ಇದೆ. ಈ ಭಾಗಗಳಲ್ಲಿ ಅಡಕೆ ಚೇಣಿದಾರರು ಹೆಚ್ಚಿದ್ದು, ಒಂದು ಕಸ ವಿಲೇವಾರಿ ಘಟಕವನ್ನು ಗ್ರಾಪಂ ವತಿಯಿಂದ ನಿರ್ಮಿಸಿಕೊಟ್ಟಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಪರಿಸರ ವಾದಿಗಳ ವಾದ. ಅಡಕೆ ಸಿಪ್ಪೆ ರಸ್ತೆ ಬದಿ ಹಾಕಬಾರದು ಮತ್ತು ಸಾರ್ವಜನಿಕರಿಗೆ ಹಾಗೂ ಗಿಡಮರ ಹಾಗೂ ಪ್ರಾಣಿಪಕ್ಷಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು. ಆದಷ್ಟು ಬೇಗ ಗ್ರಾಪಂ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ
ರಸ್ತೆ ಬದಿಯಲ್ಲಿ ಸುರಿದಿರುವ ಅಡಿಕೆ ಸಿಪ್ಪೆಗೆ ಬೆಂಕಿ ಹಚ್ಚುತ್ತಿದ್ದು, ದಿನನಿತ್ಯ ಓಡಾಡುವ ಸಾವಿರಾರು ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೆಂಕಿ ಹಾಕುತ್ತಿರುವುದರಿಂದ ರಸ್ತೆ ಬದಿಯಲ್ಲಿರುವ ಮರಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗುತ್ತಿದ್ದು, ರಸ್ತೆಯೂ ಹಾಳಾಗುತ್ತಿದೆ. ಇದರಿಂದಾಗಿ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಅಡಕೆ ಸಿಪ್ಪೆಯನ್ನು ರಸ್ತೆಗೆ ಹಾಕದಂತೆ ಎಚ್ಚರ ವಹಿಸಬೇಕು. ಸಿಪ್ಪೆ ಸುಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂಬುದು ಸ್ಥಳೀಯರ ಆಗ್ರಹಿಸುತ್ತಿದ್ದಾರೆ.
‘ಅಡಕೆ ಸಿಪ್ಪೆ ನಿರ್ವಹಣೆಯ ಬಗ್ಗೆ ಅಧ್ಯಯನಗಳು ನಡೆಯಬೇಕು. ಅದರಲ್ಲಿರುವ ರಾಸಾಯನಿಕಗಳನ್ನು ಪತ್ತೆ ಹಚ್ಚಿ ಅದರ ಉಪಯೋಗ ಪಟ್ಟಿ ಮಾಡಿದರೆ ಅಡಿಕೆ ಸಿಪ್ಪೆಗೂ ಬೆಲೆ ಬರುತ್ತದೆ. ತೆಂಗಿನ ನಾರನ್ನು ಬಳಸಿ ಬಟ್ಟೆ ತಯಾರಿಸುತ್ತಿದ್ದು, ಅಡಿಕೆ ಹಾಳೆಯಿಂದ ತಟ್ಟೆಗಳ ನಿರ್ಮಾಣವಾಗುತ್ತಿದೆ. ತೆಂಗಿನ ಗರಿಗಳಿಂದ ಪೊರಕೆ ತಯಾರಿಸುತ್ತಾರೆ. ಹೀಗೆ ಕಂಗಿನಲ್ಲೂ ಹಲವು ಉಪಯುಕ್ತಗಳಿದ್ದು, ಅವುಗಳ ಮೇಲೆ ಬೆಳಕು ಚೆಲ್ಲುವಂತೆ ಆಗಬೇಕೆಂಬುದು ಪ್ರಜ್ಞಾವಂತರ ಅಭಿಪ್ರಾಯ. ಇನ್ನಾದರೂ ರೈತರು ರಸ್ತೆ ಬದಿ ಅಡಕೆ ಸಿಪ್ಪೆ ಎಸೆಯುವ ಬದಲು ಅದನ್ನು ಗೊಬ್ಬರವಾಗಿ ಬಳಸಿ ತಾವು ಬೆಳೆಯುವ ಜತೆ ಜನರ ಜೀವವನ್ನು ಉಳಿಸಬೇಕಾಗಿದೆ