
ನ್ಯಾಮತಿ: ತಾಲ್ಲೂಕಿನ ಕುಂಕೋವ ಗ್ರಾಮದ ತೋಟದ ಮನೆಯೊಂದರಲ್ಲಿ 75 ವರ್ಷದ ಪಾಂಡುರಂಗಯ್ಯ ಎಂಬುವರನ್ನು ಕೊಲೆ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ನ್ಯಾಮತಿ ಪೊಲೀಸರು ತಿಂಗಳ ಬಳಿಕ ಶಿವಮೊಗ್ಗ ಗ್ರಾಮಾಂತರ ತಾಲೂಕು ಬೂದಿಗೆರೆ ಗ್ರಾಮದ ಬಳಿ ಬಂಧಿಸಿದ್ದಾರೆ.
ಹರಿಹರ ತಾಲೂಕು ಬೆಳ್ಳೊಡಿ ಗ್ರಾಮದ ಆಂಜನೇಯ (23) ಮತ್ತು ಅನಿಲ್ ಕುಮಾರ್ (20) ಬಂಧಿತರು. ಇವರಿಬ್ಬರು ವೃತ್ತಿಯಲ್ಲಿ ಎಲೆ ಬಳ್ಳಿ ಕೊಯ್ಲು ಕೆಲಸ ಮಾಡುತ್ತಿದ್ದು ಕೊಲೆ ಸುಪಾರಿ ಪಡೆದು ಎಲೆ ಬಳ್ಳಿ ಕೊಯ್ಲು ಮಾಡುವ ಚಾಕು (ಕತ್ತಿ)ಯಿಂದ ಕೊಲೆಗೆ ಯತ್ನಿಸಿರುವುದಾಗಿ ಬಂಧಿತ ಆರೋಪಿಗಳು ಬಾಯ್ಬಿಟ್ಟಿದ್ದಾರೆ.ಕೊಲೆ ಸುಫಾರಿ ನೀಡಿದ ಪಕ್ಕದ ಜಮೀನಿನನ ಮಾಲೀಕ ಉಮೇಶಪ್ಪ (ತಂದೆ ಕುರುವತ್ಯಪ್ಪ) ನನ್ನು ಕುಂಕುವ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜಮೀನು ವ್ಯಾಜ್ಯ ಕಾರಣ
ಪಾಂಡುರಂಗಯ್ಯ ಮತ್ತು ಉಮೇಶಪ್ಪ ಅಕ್ಕ ಪಕ್ಕದ ಜಮೀನಿನವರಾಗಿದ್ದು , ಜಮೀನು ವ್ಯಾಜ್ಯದಿಂದಲೇ ಕೊಲೆಗೆ ಸುಫಾರಿ ನೀಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಬೈಕ್ ನಲ್ಲಿ ಬಂದ ಮೂವರು ಅಪರಿಚಿತರಿಂದ ಈ ಘಟನೆ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

ಏನಿದು ಘಟನೆ
ತಾಲೂಕಿನ ಕುಂಕುವ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಪಾಂಡುರಂಗಯ್ಯ(75) ಎಂಬುವವರನ್ನ 2023ರ ಡಿ22ರ ಮದ್ಯರಾತ್ರಿ 11.30ರ ಸುಮಾರಿಗೆ ಕೊಲೆ ಯತ್ನ ನಡೆದಿತ್ತು. ಡಿ.23 ರಂದು ಈ ಸಂಬಂಧ ಪಾಂಡುರಂಗಯ್ಯ ಅವರ ಪತ್ನಿ ಲಕ್ಷ್ಮಮ್ಮ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕುಡಿಯಲು ನೀರು ಕೊಡಿ ಎಂದು ಬಾಗಿಲು ತಟ್ಟಿದ್ದರು
‘ಕುಂಕೋವ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಲಕ್ಷ್ಮಮ್ಮ ಹಾಗೂ ಪಾಂಡುರಂಗಯ್ಯ ಅವರ ಮನೆಗೆ ರಾತ್ರಿ 11.30ರ ಸಮಯಕ್ಕೆ ಬಂದ ಮೂವರು ದುಷ್ಕರ್ಮಿಗಳು ಬಾಗಿಲು ಬಡಿದು ಎಬ್ಬಿಸಿ, ‘ಬೈಕ್ನಿಂದ ಬಿದ್ದು ಗಾಯವಾಗಿದೆ ಕುಡಿಯಲು ನೀರು ಕೊಡಿ’ ಎಂದು ಕೇಳಿದ್ದಾರೆ. ದಂಪತಿ ಕೊಟ್ಟ ನೀರನ್ನು ತೆಗೆದುಕೊಂಡು ಹೋದವರು ಸ್ವಲ್ಪ ಹೊತ್ತಿನಲ್ಲಿ ಮತ್ತೆ ಬಂದು ಸ್ವಲ್ಪ ಅರಿಶಿಣ ಕೊಡಿ ಎಂದು ಕೇಳಿದ್ದಾರೆ. ನಂತರ ಸಕ್ಕರೆ ಕೊಡಿ ಎಂದು ಕೇಳಿದ್ದರು. ಸಕ್ಕರೆ ಇಲ್ಲ ಎಂದು ಹೇಳಿದ್ದಕ್ಕೆ ಪತಿಯನ್ನು ಕೆಳಕ್ಕೆ ಕೆಡವಿ ಚಾಕುವಿನಿಂದ ಕತ್ತು ಕೊಯ್ಯಲು ದುಷ್ಕರ್ಮಿಗಳು ಯತ್ನಿಸಿದ್ದರು.
ಪತಿ ಚೀರಾಡುತ್ತಿರುವ ಶಬ್ಧ ಕೇಳಿ ಹೊರಗೆ ಬಂದು ನೋಡಿದ್ದ ಪತ್ನಿಗೆ ಶಾಖ್ ಆಗಿತ್ತು. ಒಬ್ಬ ವ್ಯಕ್ತಿ ಪತಿಯ ಕಾಲು ಹಿಡಿದುಕೊಂಡಿದ್ದ, ಇನ್ನೊಬ್ಬ ಕತ್ತು ಕುಯ್ಯುತ್ತಿದ್ದ. ಈ ಘಟನೆ ಕಂಡು ಚೀರಾಡಿದಾಗ ಬಿಟ್ಟು ಓಡಿ ಹೋಗಿದ್ದರು’ ಎಂದು ಲಕ್ಷ್ಮಮ್ಮ ದೂರಿನಲ್ಲಿ ತಿಳಿಸಿದ್ದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪಿಎಸ್ಐ ಜಯ್ಯಪ್ಪ ನಾಯ್ಕ, ಸಿಬ್ಬಂದಿ ರಂಗಸ್ವಾಮಿ, ಮಹೇಶ್ ನಾಯ್ಕ, ಆನಂದ, ಉಮೇಶ್ ತಂಡ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.