ನಂದೀಶ್ ಭದ್ರಾವತಿ ದಾವಣಗೆರೆ
ಬೆಳ್ಳಂ, ಬೆಳ್ಳಗ್ಗೆ ದೇವಿಗೆ ಬಲಿಯ ಭಕ್ತಿ ಸಮರ್ಪಣೆ ನಡೆಯುತ್ತಿದ್ದಂತೆ ಚರಗ ಚೆಲ್ಲಲಾಯಿತು. ನಂತರ ಇಡೀ ದಾವಣಗೆರೆಯಲ್ಲಿ ಮಟನ ಘಾಟು ಭರ್ಜರಿಯಾಗಿತ್ತು.
ಮಾಂಸದೂಟಕ್ಕಾಗಿ ಮನೆಯಜಮಾನ ಮಾರುಕಟ್ಟೆಗೆ ಹೋಗಿ ನಿಂಬೆಹಣ್ಣು, ಸೌತೆಕಾಯಿ, ಈರುಳ್ಳಿ ತಂದರು. ಮನೆಗೆ ಬಂದ ನೆಂಟ್ರು ಮಸಾಲೆ ರುಬ್ಬಿದರು. ಕೆಲವರು ಅಂಗಡಿಗೆ ಹೋಗಿ ಮಸಾಲೆ ರುಬ್ಬಿಸಿಕೊಂಡು ಬಂದರು. ಇನ್ನು ಮನೆ ಮುಂದೆ ಹಾಯಾಗಿ ಮೇಯುತ್ತಿದ್ದ ಕುರಿ ನೋಡನೋಡತ್ತಿದ್ದಂತೆ ಹೊಟ್ಟೆ ಸೇರಿತು.
ಸಂಜೆ ಆದ ತಕ್ಷಣ ದಾವಣಗೆರೆಯಲ್ಲಿನ ಎಲ್ಲ ಬಾರ್ ಗಳು ತುಂಬಿ ತುಳುಕಿದವು. ನೈಂಟಿ ಬಿಟ್ಟುಕೊಂಡ ಬಾಯ್ಸ್ ಟೇಬಲ್ ನಲ್ಲಿ ಕೇವಲ ಕುರಿಗಳ ಬಗ್ಗೆ ಚರ್ಚೆ ನಡೆಸಿದರು. ನಾನು ಸಣ್ಣ ಕುರಿ ತಗೋಳಣ್ಣಾ ಅಂತಿದ್ದೇ, ನಮ್ಮಪಕ್ಕದ್ಮನೆಯವ ದೊಡ್ಡ ಕುರಿ ತಂದಾ…ಅವನಿಗಿಂತ ನಾನೇನೂ ಕಡಿಮೆ ಎಂದು ಸಾಲ ಮಾಡಿ ದೊಡ್ಡ ಕುರಿ ತಂದೀದ್ದೇ. ಒಳ್ಳೆ ಮಟನ್, ಇನ್ನೊಂದಿಷ್ಟು ಎಣ್ಣೆ ಹಾಕಣ್ಣ ಎನ್ನುವ ಮಾತುಗಳು ಸಾಮಾನ್ಯವಾಗಿತ್ತು. ನೆಂಟರಿಷ್ಟರು ಗುರುವಾರವೂ ಮಾಂಸದೂಟ ಸವಿದರು.
ಇತ್ತ ದಾವಣಗೆರೆ ನಗರದಲ್ಲಿ ಮುಂಜಾನೆಯಿಂದ ಉಸಿರು ನಿಲ್ಲಿಸಿದ ಕೋಳಿ-ಕುರಿಗಳಿಗೆ ಲೆಕ್ಕವೇ ಇರಲಿಲ್ಲ. ಮನೆಗಳ ಮುಂದೆ ರಕ್ತದ ಹೋಳಿ. ಊರ ತುಂಬೆಲ್ಲಾ ಮಾಂಸದ ಘಾಟು ಸಾಮಾನ್ಯವಾಗಿತ್ತು.
ಮಾಂಸದ ಅಂಗಡಿಗಳ ಸುತ್ತವೂ ಜನವೋ ಜನ. ಮಾಂಸದ ಅಂಗಡಿಗಳಲ್ಲಿ ಕಟ್…ಕಟ್…ಸದ್ದು ಶಬ್ದ ಜೋರಾಗಿತ್ತು ವ್ಯಾಪಾರಿಯ ಚಾಕುವಿಗೆ ಬಿಡುವೇ ಇರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಜನರ ಮುಖದಲ್ಲಿ ಬಾಡೂಟ ಉಂಡ ತೃಪ್ತಿ ಇತ್ತು. ಈ ನಡುವೆ ಸಸ್ಯಹಾರಿಗಳು ಹೋಳಿಗೆ ಸವಿದರೆಮಾಂಸಾಹಾರಿಗಳು ಮಟನ್ ತಿಂದು ಸಂಭ್ರಮಿಸಿದರು.
ನಗರದ ಅಧಿದೇವತೆ ದುರ್ಗಾಂಬಿಕಾ ದೇವಿ ಹಾಗೂ ವಿನೋಬನಗರದ ಚೌಡೇಶ್ವರಿ ಜಾತ್ರೆ ಪ್ರಯುಕ್ತ ಭಕ್ತರು ಬುಧವಾರ ಮಾಂಸದ ಅಡುಗೆ ತಯಾರಿಸಿದ್ದರಿಂದ ನಗರದ ಹಲವೆಡೆ ಬಾಡೂಟದ ಘಮ ಹಬ್ಬಿತ್ತು.ಚಿಕನ್, ಮಟನ್ ಜೊತೆಗೆ ಕೆಲವರ ಮನೆಗಳಲ್ಲಿ ಖಡಕ್ ರೊಟ್ಟಿ, ಚಪಾತಿ ತಯಾರಿಸಿದ್ದರೆ, ಇನ್ನೂ ಕೆಲವರ ಮನೆಗಳಲ್ಲಿ ಮುದ್ದೆ ಮಾಡಲಾಗಿತ್ತು. ಪಲಾವ್, ಅನ್ನ, ಮೊಸರನ್ನವನ್ನೂ ತಯಾರಿಸಲಾಗಿತ್ತು.
ಮಾಂಸಾಹಾರಿಗಳು ಬೆಳಿಗ್ಗೆ ಯಿಂದಲೇ ಬಾಡೂಟ ತಯಾರಿಸಲು ಸಿದ್ಧತೆ ನಡೆಸಿದ್ದರು. ಬಹುತೇಕರ ಮನೆಗಳ ಮುಂದೆ ಪೆಂಡಾಲ್ ಹಾಕಲಾಗಿತ್ತು. ಮಧ್ಯಾಹ್ನದ ವೇಳೆಗೆ ಬಾಡೂಟ ಸಿದ್ಧವಾಗಿತ್ತು. ಕೆಲವರು ಮನೆಯಲ್ಲೇ ದೇವಿಗೆ ಎಡೆ ಇಟ್ಟು ಪೂಜೆ ಮಾಡಿದರು. ಇನ್ನೂ ಕೆಲವರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪೆಂಡಾಲ್ಗಳ ಕೆಳಗೆ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಬಾಡೂಟ ಸವಿದ ದೃಶ್ಯ ಇಡೀ ನಗರದಲ್ಲಿತ್ತು. ಜಾತ್ರೆಗೆಂದೇ ಹಲವು ಭಕ್ತರು ಕೆಲ ತಿಂಗಳುಗಳ ಹಿಂದೆಯೇ ತಮ್ಮ ಶಕ್ತಿಗೆ ಅನುಸಾರವಾಗಿ ಚಿಕ್ಕ ಹಾಗೂ ದೊಡ್ಡ ಗಾತ್ರದ ಕುರಿಗಳನ್ನು ಖರೀದಿಸಿದ್ದರು.
ಇನ್ನೂ ಕೆಲವರು ಮಾಂಸದಂಗಡಿಗಳಿಂದ ಅಗತ್ಯಕ್ಕೆ ತಕ್ಕಷ್ಟು ಚಿಕನ್ ಹಾಗೂ ಮಟನ್ ಖರೀದಿಸಿ ತಂದು ಮನೆಗಳಲ್ಲಿ ವಿವಿಧ ಖಾದ್ಯ ತಯಾರಿಸಿದರು. ಬುಧವಾರ ಶುರುವಾಗಿರುವ ಬಾಡೂಟದ ಸೊಗಡು ಗುರುವಾರ ಹಾಗೂ ಶುಕ್ರವಾರವೂ ಹಲವರ ಮನೆಗಳಲ್ಲಿ ಇರುವುದು ವಿಶೇಷ. ಕೆಲವರ ಮನೆಗಳಲ್ಲಿ ಸಂಬಂಧಿಕರು ಅವರ ಊರಿಗೆ ತೆರಳುವವರೆಗೂ ಮಾಂಸದಡುಗೆಯನ್ನೇ ಕಳಿಸಿದರು. ನಗರದಲ್ಲಿ ಈರುಳ್ಳಿ, ಮಸಾಲೆ ಪದಾರ್ಥ, ನಿಂಬೆಹಣ್ಣಿನ ಖರೀದಿಯೂ ಜೋರಾಗಿತ್ತು. ಕುರಿ ಚರ್ಮದ ವ್ಯಾಪಾರ, ಚಾಕು, ಚೂರಿ, ಕುಡುಗೋಲುಗಳಿಗೆ ಸಾಣೆ ಹಿಡಿಸುವ ವ್ಯಾಪಾರವೂ ಕಂಡುಬಂತು.
ಒಂದೆಡೆ ಶಾಸ್ತ್ರ, ಸಂಪ್ರದಾಯಗಳು ಎಂದಿನಂತೆ ಪೂಜಾ ಕಾರ್ಯಗಳು ನಡೆಯುತ್ತಿದ್ದರೆ, ದೇವಸ್ಥಾನದತ್ತ ಭಕ್ತರ ದಂಡೇ ಹರಿದು ಬರಲಾರಂಭಿಸಿತ್ತು. ಉಧೋ ಉಧೋ ದುಗ್ಗಮ್ಮ ಎಂದು ಭಕ್ತಿ ಪರವಶರಾಗಿ ಭಕ್ತರು ಕೂಗುತ್ತಿದ್ದರು. ಅಲ್ಲದೇ ತಾವು ಹೊತ್ತಿದ್ದ ಹರಕೆ ತೀರಿಸಿದರು.
ಜನರ ಭಕ್ತಿಯ ಮುಂದೆ ಬಿಸಿಲು ಲೆಕ್ಕಕ್ಕೇಇಲ್ಲವೆನ್ನುವಂತಾಗಿತ್ತು. ಮಕ್ಕಳು, ಮಹಿಳೆಯರು, ವೃದ್ಧರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಹಣವಿದ್ದವರು, ವಿಐಪಿ ಪಾಸ್ ಇದ್ದವರು ತುಸು ಹತ್ತಿರದ ಸಾಲಿನಲ್ಲಿ ನಿಲ್ಲುತ್ತಿದ್ದರು. ದೇವಸ್ಥಾನದ ಮುಂಭಾಗ ವಿವಿಧ ಆಭರಣ, ಆಟಿಕೆಗಳ ಖರೀದಿಯೂ ಜೋರಾಗಿತ್ತು.
ಬೇವುಮಯವಾದ ಆವರಣ
ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಬೇವಿನಸೊಪ್ಪು ಹಿಡಿದು ದುಗ್ಗಮ್ಮನ ದೇವಸ್ಥಾನದತ್ತ ಹೆಜ್ಜೆ ಹಾಕಿದರು. ದಿನವಿಡೀ ದೇವಸ್ಥಾನದ ಆವರಣದಲ್ಲಿ ಉಧೋ.. ಉಧೋ.. ಎಂಬ ಭಕ್ತಿಪೂರ್ವಕ ಉದ್ಘಾರವೇ ಕೇಳಿಬಂತು. ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯೋಮಾನದವರು ಬೇವಿನ ಸೊಪ್ಪು ಹಿಡಿದು ದೇವಸ್ಥಾನಕ್ಕೆ ಬಂದಿದ್ದರು. ಹರಕೆಯ ಭಾಗವಾಗಿ ಉಟ್ಟ ಬಟ್ಟೆಗಳನ್ನು ಹಾಗೂ ಬೇವಿನಸೊಪ್ಪನ್ನು ಅಲ್ಲಿಯೇ ಬಿಟ್ಟು ಹೊಸ ಬಟ್ಟೆಗಳನ್ನು ಧರಿಸಿ ಮನೆಗಳಿಗೆ ತೆರಳಿದ್ದರಿಂದ, ದೇವಸ್ಥಾನದ ಆವರಣವು ಬೇವುಮಯವಾಗಿತ್ತು. ಭಕ್ತರು ಬಿಟ್ಟು ಹೋದ ಬಟ್ಟೆಗಳ ರಾಶಿಯೇ ಕಂಡುಬಂತು.
ಸಂಚಾರ ದಟ್ಟಣೆ
ಜಾತ್ರೆ ಹಿನ್ನೆಲೆಯಲ್ಲಿ ದುಗ್ಗಮ್ಮ ಗುಡಿಗೆ ತೆರಳುವ ಬಹುತೇಕ ಎಲ್ಲ ಮಾರ್ಗಗಳಲ್ಲಿ ವಾಹನ ದಟ್ಟಣೆ ಕಂಡುಬಂತು. ಹೊಂಡ ಸರ್ಕಲ್ನಿಂದ ದೇವಸ್ಥಾನಕ್ಕೆ ತೆರಳುವ ಮಾರ್ಗವಂತೂ ಭಕ್ತರಿಂದ ತುಂಬಿಹೋಗಿತ್ತು. ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು. ಹಲವು ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಲ್ಲಿ ಪಾರ್ಕಿಂಗ್ಗೂ ವ್ಯವಸ್ಥೆ ಮಾಡಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ ನಾಳೆಯಿಂದ
ದುಗ್ಗಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಚರಗ ಚೆಲ್ಲುವ ಕಾರ್ಯ ನಡೆಯಿತು. ಬಳಿಕ ದೇವಿಯನ್ನು ಮುತ್ತೈದೆ ಮಾಡಿ ಉಡಿ ತುಂಬಿ, ಮಹಾಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಭಾರಿ ಪ್ರಮಾಣದ ಭಕ್ತರು ಬುಧವಾರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ರಾತ್ರಿ 8 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಪ್ರಯಾಣಿಕರಿಂದ ತುಂಬಿದ್ದ ಬಸ್ಗಳು
ಜಾತ್ರೆ ಹಿನ್ನೆಲೆಯಲ್ಲಿ ಪರ ಊರುಗಳಿಂದ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಿದ್ದರಿಂದ ಬುಧವಾರ ಬಹುಪಾಲು ಕೆಎಸ್ಆರ್ಟಿಸಿ ಬಸ್ಗಳು ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ಹೈಸ್ಕೂಲ್ ಮೈದಾನದ ಪಕ್ಕದಲ್ಲಿರುವ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆಯಿಂದಲೇ ಜನದಟ್ಟಣೆ ಕಂಡುಬಂತು.
ಜಾತ್ರೆ ಪ್ರಯುಕ್ತ ನಗರದಲ್ಲಿ ಹಲವು ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ– ಮುಂಗಟ್ಟುಗಳನ್ನು ಮುಚ್ಚಿದ್ದರು. ಹೊಸ ದಾವಣಗೆರೆಯ ಹಲವು ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು
ಹಣ್ಣು ಕಾಯಿ ಮಾರಾಟ ಜೋರು:
ಜಾತ್ರೆ ಅಂಗವಾಗಿ ದೇವಸ್ಥಾನದ ಬೀದಿ ಹಾಗೂ ದೇವಸ್ಥಾನದ ಮುಂಭಾಗದ ಆವರಣದಲ್ಲಿ ತೆಂಗಿನಕಾಯಿ, ಬಾಳೆಹಣ್ಣು, ಹಸಿರು ಬಳೆ, ಸೀರೆ, ಕುಪ್ಪಸ, ಹೂವು, ದೇವಿಯ ಫೋಟೊ, ಅರಿಶಿನ, ಕುಂಕುಮ, ವಿಭೂತಿ ಹಾಗೂ ಇನ್ನಿತರ ವಸ್ತುಗಳ ಮಾರಾಟದ ಭರಾಟೆಯೂ ಜೋರಾಗಿತ್ತು. ಮಹಿಳೆಯರು, ಯುವತಿಯರು ಬಳೆ ಹಾಕಿಸಿಕೊಂಡು ಸಂಭ್ರಮಿಸಿದರು.
ಹಣದ ಚಲಾವಣೆ…
ಜಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಕೋಟ್ಯಂತರ ರೂ. ಹಣ ಕೈ ಬದಲಾಗಿ ಅತ್ತಿಂದಿತ್ತ ಓಡಾಡಿದೆ. ನಾನಾ ರೀತಿಯ ಕಸುಬುದಾರರ ಜೇಬಿಗೆ ಝಣ, ಝಣ ಕಾಂಚಾಣ ಹರಿದು ಬಂದಿದೆ. ಸಾವಿರಾರು ಮಂದಿ ಸಾಲ ಮಾಡಿಯಾದರೂ ಜಾತ್ರೆ ಮಾಡಿದವರಿದ್ದಾರೆ. ಒಟ್ಟಾರೆ ಜಾತ್ರೆ ಹೆಸರಲ್ಲಿ ಕೋಟ್ಯಂತರ ರೂ. ಹಣ ಅತ್ತಿಂದಿತ್ತ ಓಡಾಡಿ ಹಣದುಬ್ಬರಕ್ಕೆ ಒಂದು ಸಣ್ಣ ಹೊಡೆತವನ್ನೂ ಜಾತ್ರೆ ನೀಡಿದೆ ಎಂಬುದು ಆರ್ಥಿಕ ತಜ್ಞರ ಅಭಿಮತ.
ಕೋಟಿ, ಕೋಟಿ ಚಲಾವಣೆ…
ದುಗ್ಗಮ್ಮ ಜಾತ್ರೆಯೆಂದರೆ ಕೋಟ್ಯಂತರ ರೂ.ವ್ಯವಹಾರ. ಬಾಡೂಟದ ದಿನವಾದ ಬುಧವಾರದಂದು ಖರ್ಚು ಒಂದು ಲೆಕ್ಕಾಚಾರದ ಪ್ರಕಾರ ಹತ್ತಾರು ಕೋಟಿ ದಾಟಿದೆ. ಶಾಖಾಹಾರಿ ಮನೆಗಳಲ್ಲಿ ಪ್ರತಿ ಮನೆಯಲ್ಲೂ ಟಗರು, ಕುರಿ, ಕೋಳಿ ಬಲಿ ನೀಡಿ ಜಾತ್ರೆ ಆಚರಿಸುವುದರಿಂದ ಹಣ ದೊಡ್ಡ ಮಟ್ಟದಲ್ಲಿ ಖರ್ಚಾಗಿದೆಮಹಾನಗರದ ಅಂಕಿಸಂಖ್ಯೆ ಪ್ರಕಾರ ನಗರದಲ್ಲಿ 1.30 ಲಕ್ಷ ಮನೆಗಳಿವೆ. ಇದರಲ್ಲಿ ಮಂಗಳವಾರದಂದು ಬಹುತೇಕ ಎಲ್ಲ ಮನೆಗಳಲ್ಲಿ ಹೋಳಿಗೆಯ ಸಿಹಿ ಊಟ ಮಾಡಿ ಜಾತ್ರೆ ಆಚರಿಸಿದ್ದರು. ಬುಧವಾರ ಬಾಡೂಟದ ದಿನವಾಗಿದ್ದು ಸುಮಾರು 60 ಸಾವಿರ ಮನೆಗಳು ಸಸ್ಯಹಾರಿ ಎಂದು ಲೆಕ್ಕ ಹಾಕಿದರೂ ಉಳಿದ ಮನೆಗಳು ಶಾಖಾಹಾರಿಗಳಾಗಿವೆ. ಶಾಖಾಹಾರಿ ಮನೆಗಳು, ಮಟನ್ಸ್ಟಾಲ್ಗಳು ಸೇರಿ ಸುಮಾರು ಒಂದು ಲಕ್ಷ ಸ ಕುರಿಗಳು ಬಲಿಯಾಗಿರಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಒಂದು ಟಗರಿಗೆ ಕನಿಷ್ಟ 15 ಸಾವಿರ ರೂ. ಮತ್ತು ಅಡುಗೆ ತಯಾರಿಸಲು ಆಗುವ ವೆಚ್ಚ ಸೇರಿದರೆ ಬುಧವಾರದ ಜಾತ್ರೆಯ ವಹಿವಾಟು ಕೋಟಿ, ಕೋಟಿ ದಾಟಲಿದೆ. ಒಂದು ಮನೆಗೆ ಕನಿಷ್ಟ 20 ಸಾವಿರ ಖರ್ಚು ಎಂದು ಲೆಕ್ಕ ಹಾಕಿದರೂ 70 ಸಾವಿರ ಮನೆಗಳಲ್ಲಿ ಮಾಡಿರುವ ಒಟ್ಟು ಖರ್ಚಿನ ಲೆಕ್ಕ ಸಿಗಲಿದೆ.
ಹಿಗ್ಗಿದ ಚರ್ಮ ಮಾರುಕಟ್ಟೆ
ನಗರಕ್ಕೆ ಚರ್ಮ ವ್ಯಾಪಾರಿಗಳು ದಾಂಗುಡಿಯಿಟ್ಟಿದ್ದರು. ಟಗರು, ಕುರಿ ಚರ್ಮ ಖರೀದಿಸುವುದು ಕಂಡು ಬಂತು. 180 ರೂ.ನಿಂದ 300 ರೂವರೆಗೂ ಚರ್ಮ ಮಾರಾಟ ಆಗುತ್ತಿತ್ತು. ಒಂದು ಅಂದಾಜಿನ ಪ್ರಕಾರ ಲಕ್ಷ ಕುರಿ ಬಲಿಯಾಗಿದ್ದು ಚರ್ಮ ಮಾರುಕಟ್ಟೆಯೂ ಬುಧವಾರ ಕೊಂಚ ಹಿಗ್ಗಿತ್ತು. ಒಟ್ಟಾರೆ ಬರದ ನಡುವೆಯೂ ದುಗ್ಗಮ್ಮನ ಜಾತ್ರೆ ಬಾಡೂಟದ ಮೂಲಕ ಸಂಪನ್ನಗೊಂಡಿತು.