ದಾವಣಗೆರೆ : ಪ್ರತಿಯೊಬ್ಬರು ಸತ್ತ ಮೇಲೆ ತಮ್ಮ ಕುಟುಂಬ ಚೆನ್ನಾಗಿರಬೇಕೆಂದು ವಿಮೆ ಮಾಡಿಸವುದು ಕಾಮನ್, ಆದರೆ ಇಲ್ಲೋಬ್ಬ ಭೂಪ ತನ್ನ ಸಾಲ ತೀರಿಸುವುದಕ್ಕಾಗಿ ಸಂಬಂಧಿಗೆ ವಿಮೆ ಮಾಡಿಸಿ ಹಣಕ್ಕಾಗಿ ಕೊಂದಿದ್ದಾನೆ.
ಹೌದು..ಈ ಘಟನೆ ದಾವಣಗೆರೆ ನಗರದ ಆಜಾದ್ ನಗರದಲ್ಲಿ ನಡೆದಿದ್ದು, ಖಾಕಿ ಪಡೆ 24 ಗಂಟೆಯಲ್ಲಿ ಕೊಲೆಗಾರರನ್ನು ಬಂಧಿಸಿದೆ.ದಾವಣಗೆರೆಯ ಬಂಬೂಬಜಾರ್ ನಿವಾಸಿ ಗಣೇಶ (24), ಹಳೇಚಿಕ್ಕನಹಳ್ಳಿಯ ಅನಿಲ (18), ಶಿವಕುಮಾರ್ (25), ಭಾರತ್ ಕಾಲೋನಿಯ ಮಾರುತಿ (24) ಬಂಧಿತರು.ನಾಲ್ವರು ಆರೋಪಿಗಳು ನ. 4 ರಂದು ದಾವಣಗೆರೆಯ ಇಮಾಮ್ ನಗರದ ನಿವಾಸಿ ದುಗ್ಗೇಶಿ (32) ಎಂಬಾತನನ್ನು ಕೊಲೆ ಮಾಡಿದ್ದರು.
ಕೊಲೆ ಆರೋಪಿ ಗಣೇಶ್ ತನ್ನ ಸಂಬಂಧಿ ದುಗ್ಗೇಶಿ ಹೆಸರಿನಲ್ಲಿ ದಾವಣಗೆರೆಯ ಖಾಸಗಿ ಬ್ಯಾಂಕ್ ನಲ್ಲಿ ಇನ್ಸೂರೆನ್ಸ್ ಮಾಡಿಸಿದ್ದನು. ದುಗ್ಗೇಶಿಯನ್ನು ಕೊಲೆ ಮಾಡಿದರೆ 40 ಲಕ್ಷ ರೂಪಾಯಿ ಇನ್ಸೂರೆನ್ಸ್ ಹಣ ದೊರೆಯುತ್ತದೆ ಎಂದು ತನ್ನ ಗೆಳೆಯರೊಡಿನೆ ದುಗ್ಗೇಶಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಅವನ ಮನೆಗೆ ತಂದು ಹಾಕಿದ್ದರು.
ಪ್ರಕರಣ ದಾಖಲಿಸಿಕೊಂಡ ಆಜಾದ್ ನಗರ ಪೊಲೀಸರು ಆರೋಪಿತರ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ ಎಂ. ಸಂತೋಷ್, ಜಿ. ಮಂಜುನಾಥ್, ನಗರ ಉಪ ವಿಭಾಗ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗ ದರ್ಶನದಲ್ಲಿ ವೃತ್ತ ನಿರೀಕ್ಷಕ ಆರ್.ಜಿ. ಅಶ್ವಿನ್ ಕುಮಾರ್ ಸಿಬ್ಬಂದಿಗಳ ತಂಡ ಕೃತ್ಯ ನಡೆದ 24 ಗಂಟೆಯೊಳಗೆ ನಾಲ್ವರನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿ ಗಣೇಶ್ ಮೃತ ದುಗ್ಗೇಶ್ ಹೆಸರಲ್ಲಿ ದಾವಣಗೆರೆಯ ಖಾಸಗಿ ಬ್ಯಾಂಕ್ ನಲ್ಲಿ ಇನ್ಸೂರೆನ್ಸ್ ಬಾಂಡ್ ಮಾಡಿಸಿದ್ದು, ಕೊಲೆ ಮಾಡಿದರೆ ಬಾಂಡ್ ಮೊತ್ತ 40 ಲಕ್ಷ ರೂಪಾಯಿ ಬರುತ್ತದೆ ಎಂದು ತನ್ನ ಸ್ನೇಹಿತರ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.
ಕ್ಷಿಪ್ರ ಕಾರ್ಯಚರಣೆ ನಡೆಸಿ ಕೊಲೆ ನಡೆದ 24 ಗಂಟೆಯ ಒಳಗಡೆ ಆರೋಪಿತರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.