ಚನ್ನಗಿರಿ : ಮೋದಿ ಜೀ ಅವರ ಸಾಧನೆ ಕಂಡು ಇಡೀ ವಿಶ್ವವೇ ಕೊಂಡಾಡುತ್ತಿದೆ. 60 ವರ್ಷದಲ್ಲಿ ಕಾಂಗ್ರೆಸ್ ಮಾಡದಿರುವ ಅಭಿವೃದ್ಧಿ ಕೆಲಸಗಳನ್ನು ಮೋದಿ ಜೀ ಅವರು ಕೇವಲ 10 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.

ಚನ್ನಗಿರಿ ತಾಲೂಕಿನಲ್ಲಿ ಮತಬೇಟೆ ಮಾಡಿ ಮಾತನಾಡಿದ ಅವರು, ಭಾರತ ಅಭಿವೃದ್ದಿಯತ್ತ ದಾಪುಗಾಲು ಇಡುತ್ತಿದೆ. ಕೆಲವೇ ವರ್ಷಗಳಲ್ಲಿ ಭಾರತ ವಿಶ್ವದಲ್ಲೇ 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಲಿದೆ. 10 ವರ್ಷಗಳ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದ ಕಾರಣ ನೆನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳು ಮೋದಿ ಜೀ ಕಾಲದಲ್ಲಿ ಪೂರ್ಣಗೊಂಡಿವೆ. ದೊಡ್ಡ ದೊಡ್ಡ ಯೋಜನೆಗಳ ಅನುಷ್ಠಾನದ ವೇಗ ಹೆಚ್ಚಿಸಲು ಪ್ರಧಾನ ಮಂತ್ರಿ ಗತಿಶಕ್ತಿ ಮಿಷನ್ ಜಾರಿಗೆ ತರಲಾಗಿದೆ. ಪ್ರಧಾನ ಮಂತ್ರಿ ಗತಿಶಕ್ತಿ ಅನುಷ್ಠಾನದ ಪರಿಣಾಮ ಹೆದ್ದಾರಿ, ರೈಲ್ವೆ ಕಾಮಗಾರಿಗಳು ಕಾಲ ಮಿತಿಯೊಳಗೆ ಪೂರ್ಣಗೊಳ್ಳುತ್ತಿವೆ ಎಂದರು.

ಕಾಂಗ್ರೆಸ್ ಕೇವಲ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ದೇಶದ ಜನರನ್ನು 60 ವರ್ಷಗಳ ಕಾಲ ಕಗ್ಗತ್ತಿನಲ್ಲಿಟ್ಟು ನಾಗರಿಕರ ಹಣ ಲೂಟಿ ಮಾಡಿದೆ. ಮೋದಿ ಜೀ ಅವರ ಕೈಯಲ್ಲಿ 10 ವರ್ಷದಲ್ಲೇ ದೇಶ ಇಷ್ಟು ಅಭಿವೃದ್ಧಿಯಾಗಿದೆ ಅಂದರೆ ಕಾಂಗ್ರೆಸ್ ಕೈಯಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಸ್ಪರ್ಧೆಯಲ್ಲಿದೆ. 

ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾಗಲು ನರೇಂದ್ರ ಮೋದಿ ಜೀ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಆಗಬೇಕು.  ಇದಕ್ಕಾಗಿ ತಾವೆಲ್ಲರೂ ಮುಂದಿನ 30 ದಿನಗಳ ಕಾಲ ವಿರಮಿಸದೆ ಕೆಲಸ ಮಾಡಬೇಕು. ನೀವು ಹಾಕಿಸುವ ಒಂದೊಂದು ಮತವೂ ಮೋದಿ ಜೀ ಅವರ ಕೈ ಬಲಪಡಿಸಲಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳು ಅಲ್ಪ ಸಮಯಕ್ಕೆ ಪ್ರಯೋಜನಕ್ಕೆ ಬರುವ ಗ್ಯಾರಂಟಿಗಳು. ಆದರೆ, ಮೋದಿ ಜೀ  ಈ ದೇಶಕ್ಕೆ ಮತ್ತು ನಾಗರಿಕರಿಗೆ ದೀರ್ಘಕಾಲದ ಪ್ರಯೋಜನೆ ನೀಡುತ್ತಾರೆ. ಈ ದೇಶಕ್ಕೆ ಮೋದಿ ಜೀ ಮಾತ್ರ ಗ್ಯಾರಂಟಿ ಎಂದು ಮತದಾರರಿಗೆ ಮನಮುಟ್ಟುವಂತೆ ಹೇಳಿದರು.

ಬಿಜೆಪಿ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಎಚ್.ಎಸ್.ಶಿವಕುಮಾರ್, ಮಂಡಲ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಬೂತ್ ಮಟ್ಟದ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದ್ದರು…

ಮುನಿಸಿಬಿಟ್ಟು ಪ್ರಚಾರಕ್ಕೆ ಬಂದ ಮಾಡಾಳ್ ಮಲ್ಲಿಕಾರ್ಜುನ್

ಮಾಡಾಳ್ ಮಲ್ಲಿಕಾರ್ಜುನ್ ಮುನಿಸಿಬಿಟ್ಟು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಪ್ರಚಾರಕ್ಕೆ ಇಳಿದರು.  ಅಲ್ಲದೇ ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ,‌ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಬಿಜೆಪಿ ಮುಖಂಡ ಎಚ್.ಎಸ್.ಶಿವಕುಮಾರ್ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಸಾಥ್ ನೀಡಿದರು… 

ಚನ್ನಗಿರಿಗೆ ಸಿದ್ದೇಶ್ವರ್ ಅವರ ಕೊಡುಗೆ

ಪ್ರಚಾರ ಸಭೆಯಲ್ಲಿ ಮಾತನಾಡಿದ ಗಾಯಿತ್ರಿ ಸಿದ್ದೇಶ್ವರ್ ಅವರು, ನನ್ನ ಪತಿ ಜಿ.ಎಂ.ಸಿದ್ದೇಶ್ವರ್ ಅವರು ಸತತ 4 ಬಾರಿ ಸಂಸದರಾಗಿ ಆಯ್ಕೆಯಾಗಿ ಚನ್ನಗಿರಿ ತಾಲೂಕಿಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಕೆಲಸ ಮಾಡಿಸಿದ್ದಾರೆ ಎಂದರು. ಗ್ರಾಮ ಸಡಕ್ ಯೋಜನೆ ಅಡಿ 22 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ, ಆದರ್ಶ ಗ್ರಾಮ ಯೋಜನೆ ಅಡಿ ಎಸ್ಸಿ, ಎಸ್ಟಿ ಸಮುದಾಯ ಹೆಚ್ಚಾಗಿರುವ 21 ಗ್ರಾಮಗಳ ಅಭಿವೃದ್ಧಿಗೆ 15 ಕೊಟಿ ಅನುದಾನ ನೀಡಿದ್ದಾರೆ. ಎಲ್ಲ ಗ್ರಾಮಗಳಲ್ಲಿ  ಶಾಲಾ ಕೊಠಡಿ, ಸಮುದಾಯ ಭವನ, ಗ್ರಂಥಾಲಯ, ಅಂಗನವಾಡಿ, ರಂಗಮಂದಿರ, ಪ್ರಯಾಣಿಕರ ತಂಗುದಾಣಗಳ ನಿರ್ಮಾಣಕ್ಕೆ 11 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಹೇಳಿದರು.

Share.
Leave A Reply

Exit mobile version