ದಾವಣಗೆರೆ : ನಗರದಲ್ಲಿ ಇಂದು ಪ್ರಧಾನಿ ಮೋದಿ ಆಗಮಿಸಲಿದ್ದು, ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಿ ಸಿದ್ದಗೊಳಿಸಲಾಗಿದೆ.
ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಎಂಬ ಘೋಷವಾಕ್ಯದಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವೇದಿಕೆ, 350-650 ಅಡಿಗಳಷ್ಟು ವಿಕಾಲ ಪೆಂಡಾಲ್ನಲ್ಲಿ ಸಮಾವೇಶ ನಡೆಯಲಿದೆ. ಜರ್ಮನ್ ಹ್ಯಾಂಗರ್ ಮಾದರಿ ಹಾಗೂ ಇಕ್ಕೆಲಗಳಲ್ಲಿ ಸಾಮಾನ್ಯ ಶಾಮಿಯಾನ ಸಿದ್ಧಗೊಂಡಿದೆ. ಮೈದಾನದಲ್ಲಿ ಮೋದಿ ಕಟೌಟ್ಗಳು, ಪಕ್ಷದ ಬಾವುಟಗಳು ರಾರಾಜಿಸುತ್ತಿವೆ.
ವೇದಿಕೆಯಲ್ಲಿ ಪ್ರಧಾನಿ ಮೋದಿ ಸೇರಿ 51 ಗಣ್ಯರಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗಳಿಂದ ವ್ಯಾಪಕ ಭದ್ರತೆ ಕೈಗೊಳ್ಳ ಲಾಗಿದೆ. ಸುಮಾರು 2 ಸಾವಿರಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ಭದ್ರತೆಗೆ ನಿಯೋಜಿ ಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ಬೆಳಗ್ಗೆಯಿಂದಲೇ ಸಮಾರಂಭ ಸ್ಥಳದಿಂದ ಒಂದು ಕಿಮೀ ವ್ಯಾಪ್ತಿಯ ಸುತ್ತಲ ಪ್ರದೇಶದಲ್ಲಿ ಸಾರ್ವ ಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹಾವೇರಿ ಲೋಕಸಭಾ ಕ್ಷೇತ್ರದ ಬಸವರಾಜ ಬೊಮ್ಮಾಯಿ ಅಭ್ಯರ್ಥಿಗಳ ಪ್ರಚಾರ ಹಾಗೂ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ ಇದಾಗಿದೆ. ಈಗಾಗಲೇ ವೇದಿಕೆ, ಪೆಂಡಾಲ್ ಪ್ರದೇಶವನ್ನು ಭದ್ರತಾ ಪಡೆಗಳ ವಶಕ್ಕೆ ಒಪ್ಪಿಸಲಾಗಿದೆ. ಇಡೀ ಸಮಾರಂಭ ಸ್ಥಳಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಈ ಸಮಾ ವೇಶಕ್ಕೆ ನರೇಂದ್ರ ಸುಮಾರು 1.5 ಲಕ್ಷಕ್ಕೂ ಅಧಿಕ ಜನರು ನಿರೀಕ್ಷೆ ಇದೆ. ಸುಮಾರು 1 ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಎಲ್ಲಾ ಕಡೆ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ. ಇಲ್ಲಿನ ಹೈಸ್ಕೂಲ್ ಮೈದಾನಕ್ಕೆ ಹೊಂದಿಕೊಂಡಿದ್ದ ಕೆಎಸ್ಆರ್ಟಿಸಿಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಸ್ಥಳಾಂತರಿಸಲಾಗಿದೆ. ಜಿಲ್ಲಾ ಕೇಂದ್ರಕ್ಕೆ ಬಂದು ಹೋಗುವ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಪ್ರಧಾನಿ ಕಾರ್ಯಕ್ರಮಕ್ಕೆ ಬರುವ ನಾಯಕರು, ಮುಖಂಡರು, ಕಾರ್ಯ ಕರ್ತರು, ಅಭಿಮಾನಿಗಳು, ಸಾರ್ವಜನಿಕರ ವಾಹನಗಳ ನಿಲುಗಡೆಗೆ ನಿರ್ಧಿಷ್ಟ ಸ್ಥಳ ಸೂಚಿಸಲಾಗಿದೆ. ಏ.28 ಮತ್ತು 29ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ 5 ಕಡೆ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನರೇಂದ್ರ ಮೋದಿಯವರು ಏ.28ರ ಬೆಳಗ್ಗೆ 10ಕ್ಕೆ ಬೆಳಗಾವಿ, ಮಧ್ಯಾಹ್ನ 12ಕ್ಕೆ ಉತ್ತರ ಕನ್ನಡ, ಅದೇ 2 ಗಂಟೆಗೆ ದಾವಣಗೆರೆಗೆ ಆಗಮಿಸಿ, ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನುದ್ದೇಶಿಸಿ ಮಾತ ನಾಡಲಿದ್ದಾರೆ. ನಂತರ ಸಂಜೆ 4ಕ್ಕೆ ಹೊಸಪೇಟೆಯಲ್ಲಿ ನರೇಂದ್ರ ಮೋದಿ ಪ್ರಚಾರ ಕೈಗೊಳ್ಳುವರು. ಏ.29ಕ್ಕೆ ಬಾಗಲಕೋಟೆಯಲ್ಲಿ ಪ್ರಚಾರ ನಡೆಸು ವರು. ರಾಜ್ಯದ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿ ಗುರಿಯಾಗಿದೆ. 5ನೇ ಬಾರಿಗೆ ನರೇಂದ್ರಮೋದಿ ದಾವಣಗೆರೆಗೆ ಆಗಮಿಸುತ್ತಿದ್ದಾರೆ .
ಮಾಜಿ ಸಚಿವ, ಹಾಲಿ ಸಂಸದ ಪರಿಶೀಲನೆ
ದಾವಣಗೆರೆ: ಪ್ರಧಾನಿ ಬರುವ ಹಿನ್ನೆಲೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಶನಿವಾರ ಸಂಜೆ ಅಂತಿಮ ಸಿದ್ಧತೆ ಪರಿಶೀಲಿಸಿದರು.
ನಂತರಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಸಿದ್ದೇಶ್ವರ, ಏ.28ರ ಮಧ್ಯಾಹ್ನ 1ಕ್ಕೆ ಸಮಾವೇಶ ಆರಂಭವಾಗಲಿದೆ. ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮೋದಿ ಮತಯಾಚಿಸಲಿದ್ದಾರೆ. ಮೋದಿಯ ವರಿಗೆ ದಾವಣಗೆರೆ ಪ್ರಿಯವಾದ ಊರುಗಳಲ್ಲಿ ಒಂದಾಗಿದೆ. ಇದೀಗ 5ನೇ ಬಾರಿಗೆ ಮೋದಿ ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂದರು. ವೇದಿಕೆಯಲ್ಲಿ ಮಾಜಿ ಸಿಎಂ ಯಡಿಯೂ
ರಪ್ಪ, ಗಾಯತ್ರಿ ಸಿದ್ದೇಶ್ವರ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಮುಖ್ಯ ಸಚೇತಕ ಎನ್.ರವಿಕುಮಾರ, ಮಾಜಿ ಸಚಿವ ರಾದ ಎಸ್.ಎ.ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ರಾಮಚಂದ್ರ, ಎಚ್.ಪಿ.ರಾಜೇಶ, ಜೆಡಿಎಸ್ ಮುಖಂಡರಾದಮಾಜಿ ಶಾಸಕ ಎಚ್.ಎಸ್. ಶಿವಶಂಕರ, ತಾವು ಸೇರಿ ಅನೇಕರು ವೇದಿಕೆಯ ಲ್ಲಿರುತ್ತೇವೆ ಎಂದರು.
ಸಮಾವೇಶಕ್ಕೆ 3 ಲಕ್ಷಕ್ಕೂ ಅಧಿಕ ಜನ
ಏ.28ರಂದು ಪ್ರಧಾನಿಮೋದಿನಗರಕ್ಕೆ ಆಗಮಿಸಲಿದ್ದು, ಸುಮಾರು 3 ಲಕ್ಷಕ್ಕೂ ಅಧಿಕ ಜನರುಸೇರುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಸಂಖ್ಯೆಯಲ್ಲಿ ನಮ್ಮ ಪಕ್ಷದ ಮುಖಂಡರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. 3ನೇ ಬಾರಿಗೆ ಮೋದಿಯವರನ್ನು ಪ್ರಧಾನಿ ಮಾಡಲು
ದಶ ದಿಕ್ಕುಗಳಿಂದಲೂ ಜನ ಸಾಗರ ದಾವಣಗೆರೆಯತ್ತ ಹರಿದು ಬರಲಿದೆ. ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವ ಜನರು, ಮಹಿಳೆಯರು ಹೀಗೆ ಎಲ್ಲರೂ
ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಎರಡನೇ ಹಂತದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿದ ಬೆನ್ನಲ್ಲೇ ಪ್ರಧಾನಿ ಏ. 28 ರಂದು ಬಿಜೆಪಿ ಅಭ್ಯರ್ಥಿಯ ಪರವಾಗಿ ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಭಾನುವಾರ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ (ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ) ದೇಶದ ಚೌಕಿದಾರ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ನಗರ ಕಳೆಗಟ್ಟಿದೆ.
ಅಸಮಾಧಾನ ಇದ್ದ ಕ್ಷೇತ್ರ ಆಯ್ಕೆ
ಪ್ರಧಾನಿ ಮೋದಿ ಅಸಮಾಧಾನ ಇದ್ದ ಕ್ಷೇತ್ರಗಳನ್ನೆ ಆಯ್ಕೆ ಮಾಡಿಕೊಂಡಿದ್ದಾರೆ. ಹಾಲಿ ಸಂಸದ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಿದ್ದರಿಂದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ, ಜಿ.ಕರುಣಾಕರ ರೆಡ್ಡಿ ಅಸಮಾಧಾನಗೊಂಡಿದ್ದು, ಒಳ ಒಡೆತ ಕೊಡಬಾರದೆಂದು ಮೋದಿ ಬರುತ್ತಿದ್ದಾರೆ ಎಂಬ ಮಾತಿದೆ.
ಮೋದಿ ಬಂದ ನಂತರ ಟ್ರೆಂಡ್ ಬದಲಾವಣೆ ಆಗುವ ಸಂಭವವಿದೆ. ಈ ಹಿಂದೆಯೂ ದಾವಣಗೆರೆಗೆ ಲೋಕಸಭಾ ಚುನಾವಣೆ ವೇಳೆ ಬಂದಿದ್ದು ಸಾಕಷ್ಟು ಅನುಕೂಲವಾಗಿತ್ತು.
ದಾವಣಗೆರೆ ಪ್ರವಾಸಿ ತಾಣಗಳ ಚಿತ್ರ
ಬೃಹತ್ ಪೆಂಡಾಲ್ ಎದುರು ಸಂತೇಬೆನ್ನೂರು ಪುಷ್ಕರಣಿ, ಉಚ್ಚಂಗಿದುರ್ಗ ಕೋಟೆ, ಹರಿಹರೇಶ್ವರ ದೇವಸ್ಥಾನ ಮೊದಲಾದ ಜಿಲ್ಲೆಯ ಐತಿಹಾಸಿಕ ಕ್ಷೇತ್ರಗಳನ್ನು ರಂಗೋಲಿಯಲ್ಲಿ ಚಿತ್ರಿಸಲಾಗಿದೆ. ವೇದಿಕೆ ಎದುರು ಮೂರು ವಿಭಾಗಗಳನ್ನು ಮಾಡಲಾಗಿದೆ. ಒಂದೆಡೆ ಯುವ ಮತದಾರರು, ಇನ್ನೊಂದೆಡೆ ವೈದ್ಯರು, ವಕೀಲರು ಸೇರಿ ವೃತ್ತಿಪರರು ಮತ್ತೊಂದೆಡೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದ ಫಲಾನುಭವಿಗಳಿಗೆ ಆಸನಗಳನ್ನು ಸಜ್ಜುಗೊಳಿಸಲಾಗಿದೆ.
ಪೆಂಡಾಲ್ನಲ್ಲಿ ಒಟ್ಟು 10-12 ಅಡಿ ಎತ್ತರದ 10 ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ. ವೇದಿಕೆ ಹಿಂಬದಿ 14-40 ಅಡಿ ವಿಸ್ತೀರ್ಣದ ಬ್ಯಾಕ್ಡ್ರಾಪ್ ಸ್ಟೀನ್ ವ್ಯವಸ್ಥೆಗೊಂಡಿದೆ. ಕಾರ್ಯಕರ್ತರು ಫೋಟೋ ಕ್ಲಿಕ್ಕಿಸಿಕೊಳ್ಳಲು ನಮೋ ಆ್ಯಪ್, ವಿಕಸಿತ ಭಾರತ ಕಿಯೋಸ್ಕ್ನ ಮಾದರಿಗಳನ್ನು ಅಳವಡಿಸಲಾಗಿದೆ. ಒಟ್ಟಾರೆ ಚೌಕಿದಾರ ಆಗಮನಕ್ಕೆ ಜಿಲ್ಲಾ ಬಿಜೆಪಿ ಸಜ್ಜುಗೊಂಡಿದ್ದು, ಮೋದಿ ಹೋದ ನಂತರ ಬದಲಾವಣೆ ಗಾಳಿ ಬೀಸಲಿದೆ ಎಂಬ ಬಿಜೆಪಿಗರ ಮಾತು ನಿಜವಾಗಲಿದೆಯೇ ಎಂದು ಫಲಿತಾಂಶ ಬಂದ ನಂತರ ತಿಳಿಯಲಿದೆ.
ಭಾನುವಾರದ ಸಂತೆ ರದ್ದು
ಪ್ರಧಾನಿ ಬರುವ ಹಿನ್ನೆಲೆ ದಾವಣಗೆರೆ ನಗರದ ಕೆ.ಆರ್ ಮಾರ್ಕೇಟ್, ಗಡಿಯಾರಕಂಬ ಸುತ್ತಮುತ್ತ, ಕಾಯಿಪೇಟೆ ಸುತ್ತಮುತ್ತ ಹಾಗೂ ಇತರೆ ಕಡೆಗಳಲ್ಲಿ ನಡೆಯುವ ಭಾನುವಾರದ ಸಂತೆಯನ್ನು ಮುಂದೂಡಲಾಗಿದೆ
ಭದ್ರಾತಾ ದೃಷ್ಟಿಯಿಂದ ಕಾನೂನು ಮತ್ತು ಕಾರ್ಯಕ್ರಮದ ಸಮಯದಲ್ಲಿ ಪ್ರತಿಭಟನೆ ಮಾಡುವವರ ಮೇಲೆ ಹಾಗೂ ಕಪ್ಪು ಬಟ್ಟೆ ಪ್ರದರ್ಶನ ಮಾಡುವವರ ಮೇಲೆ ನಿಗಾವಹಿಸಲಾಗಿದೆ.
ಸಮಾವೇಶಕ್ಕೆ ಬರುವ ವಾಹನಗಳ ಪಾರ್ಕಿಂಗ್ಗೆ ನಿಗಧಿಪಡಿಸಿರುವ ಸ್ಥಳಗಳು:
ಹಾವೇರಿ ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ್ ವಿವರಮೊತಿವೀರಪ್ಪ ಕಾಲೇಜ್ ಒಳಗೆ ಕಾರ್ ಪಾರ್ಕಿಂಗ್ (ಹುಬ್ಬಳ್ಳಿ-ಹಾವೇರಿ ಕಡೆಯಿಂದ ಕಾರುಗಳು ನಿಲುಗಡೆ) ಬಾಪೂಜಿ ಸಮುಧಾಯ ಭವನದಿಂದ ಶಾರದಾ ನಾಖಾ ಬಂಧಿ ಸರ್ಕಲ್ ವರೆಗೆ ಎರಡೂ ಬದಿಯಲ್ಲಿ ಬಸ್ ಪಾರ್ಕಿಂಗ್( ಹುಬ್ಬಳ್ಳಿ ಹಾವೇರಿ ಕಡೆಯಿಂದಬರುವ ಬಸ್ಗಳು ನಿಲುಗಡೆ)ಎಸ್.ಎಸ್ ಎನ್ಕ್ಲೇವ್ ಪಕ್ಕ ಉತ್ತಮ ಲೇ ಔಟ್ ಆವರಣ ಬಸ್ ಪಾರ್ಕಿಂಗ್
ಚನ್ನಗಿರಿ, ಶಿವಮೊಗ್ಗ, ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ್ ವಿವರಸ್ಟೇಡಿಯಂ ಒಳಭಾಗ ಬಸ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಕಡೆಯಿಂದ ಬರುವ ಕಾರು ಮತ್ತು ಬೈಕ್ ಗಳು ನಿಲುಗಡೆ)ಯು.ಬಿ.ಡಿ.ಟಿ ಕಾಲೇಜ್ ಒಳ ಭಾಗ ಕಾರ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಕಡೆಯಿಂದ ಬರುವ ಕಾರುಗಳು ನಿಲುಗಡೆ)ಕೆ.ಇ.ಬಿ ಸಮುಧಾಯ ಭವನ ಹದಡಿ ರಸ್ತೆ ಒಳಗೆ ಕಾರ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಕಡೆಯಿಂದ ಬರುವ ಕಾರುಗಳು ನಿಲುಗಡೆ)ಡಿ.ಆರ್.ಆರ್ ಪಾಲಿಟೆಕ್ನಿಕ್ ಒಳಗೆ ಬೈಕ್ ಮತ್ತು ಕಾರು ಐ.ಟಿ.ಐ ಕಾಲೇಜ್ ಒಳ ಭಾಗ ಬಸ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಮಂಗಳೂರು, ಕಡೆಯಿಂದ ಬರುವ ಬಸ್ಗಳು ನಿಲುಗಡೆ)
ಮಾಗನೂರ ಬಸಪ್ಪ ಮೈದಾನದ ಒಳಗೆ ಬಸ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಕಡೆಯಿಂದ ಬರುವ ಬಸ್ಗಳು ನಿಲುಗಡೆ)ಚಿತ್ರದುರ್ಗ ತುಮಕೂರು ಕಡೆಯಿಂದ ಬರುವ ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ.
ವಾಹನಗಳ ಪಾರ್ಕಿಂಗ್ ವಿವರ
ಮುರುಘಾ ರಾಜೇಂದ್ರ ಮಠದ ಒಳಗೆ ಮತ್ತು ವಿ.ಐ.ಪಿ ಕಾರು ಪಾರ್ಕಿಂಗ್ ತ್ರಿಶೂಲ್ ಕಲಾಭವನ ಒಳಗೆ ಪಾರ್ಕಿಂಗ್ ಮಾಡಬೇಕು.
(ಸಾರ್ವಜನಿಕರ ಕಾರ್ ಮತ್ತು ಬೈಕ್ ಪಾರ್ಕಿಂಗ್ )ಸೆಂಟ್ರಲ್ ವೇರ್ ಹೌಸ್ ಒಳಗೆ ಬಸ್ ಪಾರ್ಕಿಂಗ್, (ಚಿತ್ರದುರ್ಗ, ಕಡೆಯಿಂದ ಬರುವ ಬಸ್ಗಳ ನಿಲುಗಡೆ )ಡಿ.ಆರ್.ಆರ್ ಶಾಲೆ ಒಳಗೆ ಬಸ್ ಪಾರ್ಕಿಂಗ್ (ಚಿತ್ರದುರ್ಗ, ಕಡೆಯಿಂದ ಬರುವ ಕಾರುಗಳ ನಿಲುಗಡೆ )
ಹರಪನಹಳ್ಳಿ ಜಗಳೂರು, ಹಡಗಲಿ ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ್ ವಿವರ
ಬೇತೂರು ರಸ್ತೆಯ ಚಾನಲ್ ಬಳಿಯ ಪಾರ್ಕಿಂಗ್ (ಜಗಳೂರು ಮಾರ್ಗವಾಗಿ ಬರುವ ಬಸ್ ನಿಲುಗಡ ಮತ್ತು ಚೆಕ್ ಪೋಸ್)ಎ.ಪಿ.ಎಂ.ಸಿ ಒಳ ಭಾಗ ಬಸ್ ಪಾರ್ಕಿಂಗ್ (ಬಳ್ಳಾರಿ, ಹರಪನಹಳ್ಳಿ, ಹಡಗಲಿ ಜಗಳೂರು ಕಡೆಯಿಂದ ಬರುವ ಬಸ್ ಪಾರ್ಕಿಂಗ್)ದುರ್ಗಂಬಿಕಾ ದೇವಸ್ಥಾನದ ಮೈದಾನ ಬೂದಾಳ್ ರಸ್ತೆ ( ಬೂದಾಳ್ ಹರಪನಹಳ್ಳಿ ಕಡೆಯಿಂದ ಬರುವ) ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿ್ಎ.
ವಾಹನ ಸಂಚಾರ ಮಾರ್ಗ ಸ್ಥಳಾಂತರ ನಿಷೇದ ಮತ್ತು ಸ್ಥಗಿತ ಮಾರ್ಗಗಳು
ಕೊಂಡಜ್ಜಿ ರಸ್ತೆ ಮತ್ತು ಶಿಬಾರ ರಸ್ತೆಯಲ್ಲಿ ಓಡಾಡುವ ವಾಹನಗಳು ಆರ್ಟಿಓ ಸರ್ಕಲ್ನಿಂದ ಬ್ರೀಡ್ಜ್ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್ಗೆ ಬರದಂತೆ ನಿಷೇಧಿಸಲಾಗಿದೆ.ಹಳೇ ಕೋರ್ಟ್ ರಸ್ತೆಯಲ್ಲಿರುವ ಆಟೋ ನಿಲ್ದಾಣವನ್ನು ಏ.28ರಂದು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಮತ್ತು ಹಳೇ ಕೋರ್ಟ್ ರಸ್ತೆಯಲ್ಲಿ ಮತ್ತು ಹಳೇ ಪಿ.ಬಿ ರಸ್ತೆಯಲ್ಲಿ ಬಾತಿ ಕೆರೆ ಕಡೆಯಿಂದ ಎಪಿಎಂಸಿ ಫ್ಲೈ ಓವರ್ ವರೆಗೆ ಮತ್ತು ಎವಿಕೆ ರಸ್ತೆ ಪಿ.ಜೆ ಕ್ರಾಸ್ನಿಂದ ವಿಜಯಾ ಹೋಟೆಲ್ ಆಟೋ ಸ್ಟ್ಯಾಂಡ್ವರೆಗೆ ಮತ್ತು ಹಳೇ ಕೋರ್ಟ್ ರಸ್ತೆಯ ಎ.ಸಿ.ಸರ್ಕಲ್ನಿಂದ ಅಂಬೇಡ್ಕರ್ ಸರ್ಕಲ್, ವಿದ್ಯಾರ್ಥಿ ಭವನದವರೆಗೆ ಮತ್ತು ಹಳೇ ಐಬಿ ರಸ್ತೆಯ ಅರಸು ಸರ್ಕಲ್, ಜಯದೇವ ಸರ್ಕಲ್ವರೆಗೆ ಮತ್ತು ಅಶೋಕ ರಸ್ತೆಯಲ್ಲಿ ಗಾಂಧಿ ಸರ್ಕಲ್ನಿಂದ ಜಯದೇವ ಸರ್ಕಲ್ವರೆಗೆ ಮತ್ತು ಎವಿಕೆ ಕಾಲೇಜ್ ರಸ್ತೆಯಲ್ಲಿರುವ ರಾಮ ಮಂದಿರ ಕ್ರಾಸ್ನಲ್ಲಿರುವ ಆಟೋ ನಿಲ್ದಾಣವನ್ನು ಬೇರೆ ಕಡೆ ಸ್ಥಳಾಂತರಿಸಲು ಹಾಗೂ ಎವಿಕೆ ಕಾಲೇಜ್ ರಸ್ತೆಯಲ್ಲಿ ಮತ್ತು ಎವಿಕೆ ರಸ್ತೆ ಪಿ.ಜೆ ಕ್ರಾಸ್ನಿಂದ ವಿಜಯಾ ಹೋಟೆಲ್ ಆಟೋ ಸ್ಟ್ಯಾಂಡ್ವರೆಗೆ ಮತ್ತು ಅರುಣ ಸರ್ಕಲ್ನಿಂದ ರಾಂ&ಕೋ ಸರ್ಕಲ್- ಸಿಜಿ ಆಸ್ಪತ್ರೆ ರಸ್ತೆ ಸ್ಪಂದನಾ ಜ್ಯೂಸ್ ಸ್ಟಾಲ್-ಸಿಜಿ ಆಸ್ಪತ್ರೆ ರಸ್ತೆ ಬ್ಲಡ್ ಬ್ಯಾಂಕ್ ರಸ್ತೆ(ಪಿ.ಜೆ ಬಡಾವಣೆ ೮ನೇ ಮೇನ್)ವರೆಗೆ ಮತ್ತು ಹಳೆ ಪಿ.ಬಿ ರಸ್ತೆಯ ಬಾತಿ ಕೆರೆಯಿಂದ ಡಿಸಿಎಂ ರೈಲ್ವೆ ಅಂಡರ್ ಬ್ರಿಡ್ಜ್ ವರೆಗೆ ರಸ್ತೆಯಲ್ಲಿ ಓಡಾಡುವ ಆಟೊಗಳನ್ನು ಈ ಮಧ್ಯೆ ಸಂಚಾರ ಮತ್ತು ನಿಲುಗಡೆ ಮಾಡದಂತೆ ನಿಷೇಧಿಸಲಾಗಿದೆ. ಎರಡು ದಿನ ಹಳೇ ಪಿಬಿ ರಸ್ತೆ ಬಾತಿ ಕೆರೆಯಿಂದ ಡಿಸಿಎಂ ರೈಲ್ವೆ ಅಂಡರ್ ಬ್ರಿಡ್ಜ್ ವರೆಗೆ ಲಾರಿ ಸಂಚಾರ ನಿಷೇಧಿಸಲಾಗಿದೆ
ಸಂಚಾರ ಮಾರ್ಗ ಬದಲಾವಣೆ
ಬಸ್ ಗಳ ಮಾರ್ಗ
ಕೆ.ಎಸ್.ಆರ್.ಟಿ.ಸಿ (ನಗರ ಸಾರಿಗೆ, ಗ್ರಾಮೀಣ ಸಾರಿಗೆ, ಹೊರ ಜಿಲ್ಲೆ) ಬಸ್ಗಳನ್ನು ಹರಿಹರ ಕಡೆಯಿಂದ ದಾವಣಗೆರೆ ಹಳೇ ಪಿ.ಬಿ ರಸ್ತೆಯ ಮಾರ್ಗವಾಗಿ ಬರುವ ಬಸ್ಗಳನ್ನು ದಾವಣಗೆರೆ ಹಳೇ ಪಿ.ಬಿ ರಸ್ತೆಯ ಕಡೆಗೆ ಬಿಡದೇ, ಹರಿಹರದಿಂದ ಎನ್.ಹೆಚ್-೪೮ ರಸ್ತೆ ಮೂಲಕ ಬಾಡಾ ಕ್ರಾಸ್ಗೆ ಬಂದು ನಂತರ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಆದೇ ಮಾರ್ಗದಲ್ಲಿ ವಾಪಸ್ಸು ಹೋಗುವಂತೆ ತಿಳಿಸಿದೆ.
ಚಿತ್ರದುರ್ಗ ಮಾರ್ಗವಾಗಿ ಬರುವ ಬಸ್ಗಳನ್ನು ಎನ್.ಹೆಚ್-೪೮ ರಸ್ತೆ ಮೂಲಕ ಬಾಡಾ ಕ್ರಾಸ್ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಜನರನ್ನು ಇಳಿಸಿ ನಂತರ ಆದೇ ಮಾರ್ಗದಲ್ಲಿ ವಾಪಸ್ಸು ಚಿತ್ರದುರ್ಗ ಮತ್ತು ಬೆಳಗಾವಿ ಕಡೆಗೆ ಹೋಗುವಂತೆ ಸೂಚನೆ ನೀಡಲಾಗಿದೆ.
ಜಗಳೂರು ಮಾರ್ಗವಾಗಿ ಮತ್ತು ಹರಪನಹಳ್ಳಿ, ಅರಸಿಕೇರೆ,ಕಂಚಿಕೆರೆ ಬೆಂಡಿಗೆರೆ ಮಾರ್ಗವಾಗಿ ಬರುವ ಬಸ್ಗಳನ್ನು ಮತ್ತು ಮಾಗಾನಹಳ್ಳಿ ಕಡೆಯಿಂದ ಬರುವ ಬಸ್ಗಳು ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಗಳೂರು ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಆದೇ ಮಾರ್ಗದಲ್ಲಿ ವಾಪಸ್ಸು ಹೋಗುವಂತೆ ಸೂಚನೆ ನೀಡಲಾಗಿದೆ.
ಕೊಂಡಜ್ಜಿ ಮಾರ್ಗವಾಗಿ ದಾವಣಗೆರೆ ನಗರದ ಕಡೆ ಬರುವ ಬಸ್ಗಳನ್ನು ಹರಿಹರದಿಂದ ಎನ್.ಹೆಚ್-೪೮ ರಸ್ತೆ ಮೂಲಕ ಬಾಡಾ ಕ್ರಾಸ್ಗೆ ಬಂದು ನಂತರ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಆದೇ ಮಾರ್ಗದಲ್ಲಿ ವಾಪಸ್ಸು ಹೋಗುವಂತೆ ಸೂಚನೆ ನೀಡಲಾಗಿದೆ.
ಶಾಮನೂರು ಕ್ರಾಸ್ ನಿಂದ ಶಾರದಾಂಭ ಸರ್ಕಲ್ ವರೆಗೆ ವಾಹನಗಳು ಬರುವುದು, ನಂತರ ಶಾರದಾಂಭ ಸರ್ಕಲ್ನಿಂದ ಸಂಗೊಳ್ಳಿರಾಯಣ್ಣ ಸರ್ಕಲ್ಗೆ ಯಾವುದೇ ವಾಹನಗಳು (ಬಸ್ ಮತ್ತು ಲಾರಿ) ಓಡಾಡದಂತೆ ನಿಷೇಧಿಸಲಾಗಿದೆ.
ಹದಡಿ ರಸ್ತೆ ಮಾರ್ಗವಾಗಿ ಬರುವಂತಹ ವಾಹನಗಳು ಸ್ಟೇಡಿಯಂ (ಎಆರ್ಜಿ ಕಾಲೇಜ್ ಕ್ರಾಸ್) ವರೆಗೆ ಬಂದು ವಾಪಸ್ ಹೋಗಲು ಸೂಚನೆ ನೀಡಲಾಗಿದೆ.
ಜಗಳೂರು ಕಡೆಯಿಂದ ಬರುವ ಖಾಸಗಿ ಬಸ್ಗಳು ಹೊಸದಾಗಿ ನಿರ್ಮಿಸಿರುವ ಜಗಳೂರು ಬಸ್ನಿಲ್ದಾಣದಲ್ಲಿ, ಹದಡಿ ರಸ್ತೆಯಿಂದ ಬರುವ ಖಾಸಗಿ ಬಸ್ಗಳು ಮಾಗನೂರು ಬಸಪ್ಪ ಮೈದಾನದಲ್ಲಿ ಮತ್ತು ಚಿತ್ರದುರ್ಗ, ಆನಗೋಡು ಮಾರ್ಗವಾಗಿ ಬರುವ ಖಾಸಗಿ ಬಸ್ಗಳು ಎಪಿಎಂಸಿ ದನದ ಮಾರ್ಕೇಟ್ನಲ್ಲಿ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ.
ಬಾತಿ ಕಡೆಯಿಂದ ಗಾಂಧಿ ಸರ್ಕಲ್ ವರೆಗೆ ಹಾಗೂ ಶಾಮನೂರು, ಲಕ್ಷ್ಮೀ ಫ್ಲೋರ್ ಮಿಲ್, ಗುಂಡಿ ಸರ್ಕಲ್, ವಿಧ್ಯಾರ್ಥಿ ಭವನ, ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಗಾಂಧಿ ಸರ್ಕಲ್, ಹಳೇ ಪಿ.ಬಿ ರಸ್ತೆ ಹಳೇ ಕೋರ್ಟ್ ರಸ್ತೆ ಮತ್ತು ಎ.ವಿ.ಕೆ ರಸ್ತೆ ಮಾರ್ಗವಾಗಿ ಬಾರದಂತೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ
ಹಾವೇರಿ ಮತ್ತು ಹರಿಹರ ಕಡೆಯಿಂದ ದಾವಣಗೆರೆ ನಗರಕ್ಕೆ ಬರುವ ಲಾರಿ ಮತ್ತು ಇತರೆ ವಾಹನಗಳನ್ನು ಬಾತಿ ಒಳಗಿನಿಂದ ಎನ್ಹೆಚ್-೪೮ ಮುಖಾಂತರ ಹೋಗುವಂತೆ ಸೂಚನೆ ನೀಡಲಾಗಿದೆ.
ಚಿತ್ರದುರ್ಗ ಕಡೆಯಿಂದ ಬರುವ ಲಾರಿಗಳು ಡಿಸಿಎಂ ರೈಲ್ವೆ ಅಂಡರ್ ಪಾಸ್ ಬಳಿಯಿರುವ ಎಪಿಎಂಸಿ ರಸ್ತೆ ಕಡೆಗೆ ತೆರಳುವಂತೆ ಸೂಚನೆ ನೀಡಲಾಗಿದೆ.