ಚನ್ನಗಿರಿ :  ತಾಲೂಕು ಕಚೇರಿಯಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಸಹಾಯ ಮತದಾರರ ನೋಂದಣಾಧಿಕಾರಿ,  ಮತ್ತು ತಹಶೀಲ್ದಾರ್‌ ಯರ‍್ರಿಸ್ವಾಮಿ ನೇತ್ರತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದು 24 ತಾಲೂಕು ಮಟ್ಟದ ಇಲಾಖೆಗಳಿಂದ ಕೇವಲ 10  ಜನ ಅಧಿಕಾರಿಗಳು ಹಾಜರಾಗಿದ್ದರು. ಇದರಿಂದ ತಹಸೀಲ್ದಾರ್ ಯರ್ರಿಸ್ವಾಮಿ ಗರಂ ಆದರು.

ಮೀಟಿಂಗ್ ಗೆ  4 ಇಲಾಖೆಯ ಅಧಿಕಾರಿಗಳು ತಮ್ಮ ಕೆಳಗಿನ ಅಧಿಕಾರಿಗಳನ್ನು ಕಳುಹಿಸಿದ್ದರಿಂದ ಬೇಸರಗೊಂಡ ತಹಶೀಲ್ದಾರ್ ಯರ‍್ರಿಸ್ವಾಮಿ  ಅಧಿಕಾರಿಗಳನ್ನು ತರಾಟೆಗೆ  ತೆಗೆದುಕೊಂಡು ಸಭೆಗೆ ಬಾರದ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ  ಶೋಕಾಸ್ ನೋಟಿಸ್ ವಿತರಿಸುವಂತೆ ಶಿರಸ್ತೆದಾರ್ ಮೋಹನ್‌ರವರಿಗೆ ಸೂಚನೆ ನೀಡಿದರು.

ಬೆಳಗ್ಗೆ 11 ಕ್ಕೆ ತಾಲೂಕುಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು 11.30 ಕ್ಕೆ ಸಭೆಯನ್ನು ಪ್ರಾರಂಭ ಮಾಡಿದರೂ ಸಭೆಗೆ ಹಾಜರಿದ್ದ  ಅಧಿಕಾರಿಗಳ ಸಂಖ್ಯೆ 10 ಜನ ಮಾತ್ರ. ಅದರಲ್ಲಿಯೂ 4 ಜನ  ಅಸಿಸ್ಟೆಂಟ್‌ಗಳು.  ಇದನ್ನು ಕಂಡು ಗರಂ ಆದ ತಹಶೀಲ್ದಾರರು ಚುನಾವಣೆ ಕರ್ತವ್ಯ ಎಂದರೆ ಅಧಿಕಾರಿಗಳಿಗೆ ಭಯ ಇಲ್ಲದಂತಾಗಿದೆ.ನಾವು ಮೊದಲು ಒಳ್ಳೆಯ ಮಾರ್ಗದಲ್ಲಿ ಹೇಳುವ ಪ್ರಯತ್ನ ಮಾಡತ್ತೇವೆ. ಇಲ್ಲವಾದರೆ ಕಾನೂನಾತ್ಮಕವಾಗಿ ಕ್ರಮವನ್ನು ಕೈಗೊಳ್ಳಲಾಗುವುದುಎಂದರು.

ಚುನಾವಣೆಗೆ ಸಂಬಂದಿಸಿದಂತೆ ಸಭೆಗಳನ್ನು ಕರೆದರೆ ಕೆಲ ಇಲಾಖೆಗಳಿಂದ ಅವರ ಕೆಳಗಿನ ಅಧಿಕಾರಿಗಳನ್ನು ಕಳಿಸಿದ್ದಾರೆ. ಅವರ ಬಳಿ ಏನು ಚರ್ಚೆ ಮಾಡಲು ಸಾಧ್ಯ. ನಾವು ಇಲ್ಲಿ ಮಾತನಾಡಿದ್ದನ್ನು ಮತ್ತೆ ಅವರಿಗೆ ತಿಳಿಸಬೇಕಾಗುತ್ತದೆ. ಎಲ್ಲಾ ಭಾಗಗಳಲ್ಲಿಯೂ ಚುನಾವಣಾ ಕರ್ತವ್ಯಗಳು ಪ್ರಾರಂಭವಾಗಿವೆ. ಆದರೆ ನಮ್ಮ ಭಾಗಗಳಲ್ಲಿ ಇಲಾಖೆಗಳಿಂದ ಚುನಾವಣೆಗೆ ವಾಹನಗಳನ್ನು ನೀಡಲು ಹಿಂದೆ ಮುಂದೆ ಮಾಡುತ್ತಿದ್ದಾರೆ.

ತುರ್ತು ಆಗತ್ಯ ಸೇವೆ ಇಲ್ಲದ ಇಲಾಖೆಗಳಿಂದ ತಕ್ಷಣವೇ ವಾಹನವನ್ನು ಪಡೆದುಕೊಂಡು ನಮ್ಮ ತಾಲೂಕು ಕಚೇರಿಯ ಮುಂದೆ ನಿಲ್ಲಿಸಬೇಕು. ನೀಡದೇ ಇದ್ದರೇ ಸೀಜ್ ಮಾಡಿಸಿ ನಿಲ್ಲಿಸಿ ಎಂದರು.

ಆಯಾ ಇಲಾಖೆಗಳಿಂದ ಚುನಾವಣೆ ಕರ್ತವ್ಯಕ್ಕೆ  ನಿಯೋಜಿಸದವರಿಗೆ ಅರೋಗ್ಯ ಸಮಸ್ಯೆ ಇದ್ದರೆ ಅಂತವರನ್ನು ಕರ್ತವ್ಯಕ್ಕೆ  ನಿಯೋಜನೆ ಮಾಡಿಕೊಳ್ಳಬೇಡಿ ಎಂದರು. ತುರ್ತು ಅಗತ್ಯ ಬಿದ್ದರೆ  ಕಂಪ್ಯೂಟರ್ ಮತ್ತು ಆಪರೇಟರ್‌ಗಳನ್ನು ಇಲಾಖೆಗಳಿಂದ ಕಳುಹಿಸಿಕೊಡಬೇಕು ಎಂದು ಸೂಚನೆ ನೀಡಿದರು.

ಶುಕ್ರವಾರ ಭದ್ರತಾ ಕೊಠಡಿಗಳಿಗೆ ಇ.ವಿ.ಎಂ. ಮಿಷನ್‌ಗಳು ಬರಲಿದ್ದು ಎಲ್ಲಾ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.  ನಿಯೋಜನೆ ಮಾಡಿದಂತಹ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ  ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಲ್ಲಿಕಾರ್ಜುನ್, ಬಿ.ಸಿ.ಎಂ. ಸಹಾಯಕ ನಿರ್ದೇಶಕ ರವೀಂದ್ರ ಅಥರ್ಗ, ಅಹಾರ ಮತ್ತು ನಾಗರೀಕ ಇಲಾಖೆಯ ಶಿರಸ್ತೆದಾರ ಜಯರಾಂ, ತೋಟಗಾರಿಕಾ ಸಹಾಯಕ ನಿರ್ದೇಶಕ ಶ್ರೀಕಾಂತ್, ಪಿ.ಆರ್.ಡಿ. ಎ.ಇ.ಇ.ಷಣ್ಮುಖಪ್ಪ, ಪುರಸಭೆಯ ಮುಖ್ಯಾಧಿಕಾರಿ ವಸೀಂ ಹಾಜರಿದ್ದರು.

Share.
Leave A Reply

Exit mobile version