
ದಾವಣಗೆರೆ : ಸರಿಯಾದ ಅಂಕಿ, ಅಂಶಗಳ ಸಹಿತ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಗಣತಿ ನಡೆಯಬೇಕೆಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಆರಂಭಗೊಂಡ ಎರಡು ದಿನಗಳ ಮಹಾಧಿವೇಶನಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜ ಆಂತರಿಕ ಕಲಹ, ಒಳಬೇಗುದಿ ಬಿಟ್ಟು ಬದುಕಬೇಕು ಎಂಬ ಉದ್ದೇಶದಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪನೆಯಾಯಿತು. ಸಮಾಜದ ಸಮಸ್ತರಿಗೂ ಎಲ್ಲ ಭಾಗಗಳಲ್ಲಿ ಅವಕಾಶ ಇರಬೇಕಿದೆ. ಅಷ್ಟೇ ಅಲ್ಲದೇ ಕರ್ನಾಟಕದಲ್ಲಿ ಸಮಾಜ ಬೃಹತ್ ಆಗಿ ಬೆಳೆದಿದೆ ಎಂದರು.
ಜಾತಿಗಣತಿ ಬಗ್ಗೆ ಹೇಳಿದ್ದು ಸಿದ್ದಗಂಗಾ ಶ್ರೀಗಳು
ಈ ಹಿಂದೆ ಮುಂಬೈನಲ್ಲಿ ಅಧಿವೇಶನ ನಡೆದಿತ್ತು. ಆ ಸಂದರ್ಭದಲ್ಲಿ ಸರ್ಕಾರ ಜಾತಿ, ಜನಗಣತಿ ಮಾಡಲ್ಲ ಎಂದು ಹೇಳಿತ್ತು. ಆದರೆ, ಜಾತಿಗಣತಿ ಮೂಲಕ ಯಾವ ಸಮುದಾಯದವರು ಎಷ್ಟಿದ್ದಾರೆ ಎಂದು ತಿಳಿಯಬೇಕು ಎಂದು ಅಂದು ಸಿದ್ಧಗಂಗಾ ಶ್ರೀಗಳು ಹೇಳಿದ್ದರು. ಅಂದರೆ ಜಾತಿಗಣತಿ ಮಾಡಬೇಕು ಎಂದು ಮೊದಲು ಹೇಳಿದ್ದು ಸಿದ್ದಗಂಗಾ ಶ್ರೀಗಳು.

ಇವತ್ತು ವೈಜ್ಞಾನಿಕ ತಳಹದಿಯ ಮೇಲೆ ಪರಿಶೀಲನೆ ಮಾಡಬೇಕು ಎಂದು ಪ್ರಸ್ತಾಪ ಮಾಡುತ್ತಿದ್ದೇವೆ. ನಾವು ಜಾತಿಗಣತಿಗೆ ವಿರೋಧ ಮಾಡುತ್ತಿಲ್ಲ. ಆದರೆ, ಸರಿಯಾದ ಅಂಕಿ ಅಂಶಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.