ಶಿವಮೊಗ್ಗ: ಕನ್ನಡ ರಾಜ್ಯೋತ್ಸವ ಆಚರಣೆಯು ನವೆಂಬರ್‌ಗೆ ಸೀಮಿತ ಆಗಬಾರದು. ಎಲ್ಲ ಸಂದರ್ಭಗಳಲ್ಲಿ ಕನ್ನಡ ಭಾಷೆ ಬಳಸಬೇಕು. ಕನ್ನಡ ನಮ್ಮ ನಿತ್ಯೋತ್ಸವ ಆಗಬೇಕು ಎಂದು ಪ್ರೊ. ಡಾ. ಹಸೀನಾ ಎಚ್.ಕೆ. ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕ ಸಂಸ್ಕೃತಿಯ ನಾಡು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು ಎಂದು ತಿಳಿಸಿದರು.

ರೋಟರಿ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಬಹಳ ವಿಶೇಷ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದರ ಜತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬರಿಗೂ ವಿಶೇಷ ಹಬ್ಬ. ಇದು ಕನ್ನಡ ನಾಡಿನ ಎಲ್ಲರೂ ಸೇರಿ ಆಚರಿಸುವ ಹೆಮ್ಮೆಯ ಹಬ್ಬ ಎಂದು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್. ಮಾತನಾಡಿ, ಈವರೆಗೂ ನಮ್ಮ ಸಂಘಟನೆಗಳು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಇತರರನ್ನು ನಾವು ಗೌರವಿಸುತ್ತಿದ್ದೆವು. ಆದರೆ ರೋಟರಿ ಸಂಸ್ಥೆಯು ವಿಶೇಷವಾಗಿ ನಮ್ಮನ್ನು ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಗುರುತಿಸಿರುವುದು ನಮಗೆ ಬಹಳ ತಂದಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಯನ್ನು ಹೆಮ್ಮೆಯಿಂದ ಆಚರಿಸೋಣ. ಕನ್ನಡ ನಾಡು ಬೆಳೆಸೋಣ, ಭಾಷೆ ಉಳಿಸೋಣ, ನಾವು ಬೆಳೆಯೋಣ ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮಹಿಳಾ ಜಿಲ್ಲಾಧ್ಯಕ್ಷೆ ಕವಿತಾ ಮಾತನಾಡಿ, ಈ ಸಲ ನಾವು ರೋಟರಿ ಸಂಸ್ಥೆಯಲ್ಲಿ ರಾಜ್ಯೋತ್ಸವ ಆಚರಿಸುತ್ತಿರುವುದು ವಿಶೇಷ. ರಾಜ್ಯೋತ್ಸವ ಅಂದರೆ ಸಂಭ್ರಮ ಸಡಗರ ಕರುನಾಡಿನ ಹೆಮ್ಮೆಯ ಹಬ್ಬ ಎಂದರು.

ಪ್ರೊ. ಡಾ. ಹಸೀನಾ ಎಚ್.ಕೆ., ಕಿರಣ್ ಕುಮಾರ್.ಎಚ್.ಎಸ್. ಮತ್ತು ಕವಿತಾ ಅವರನ್ನು ಸಂಸ್ಥೆಯಿಂದ ಗೌರವಿಸಲಾಯಿತು.
ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ ರೋಟರಿ ಕ್ಲಬ್, ಸಂಸ್ಥೆಯ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆ ಕಾರ್ಯದರ್ಶಿ ಈಶ್ವರ್, ಚೂಡಾಮಣಿ ಪವಾರ್, ಧರ್ಮೇಂದ್ರ ಸಿಂಗ್, ಬಸವರಾಜ್, ಜಯಶೀಲ ಶೆಟ್ಟಿ ಹಾಗೂ ಅನ್ ಅಧ್ಯಕ್ಷೆ ಗೀತಾ ಜಗದೀಶ್ ಹಾಗೂ ಶುಭಾ ಚಿದಾನಂದ್, ಕ್ಲಬ್‌ನ ಎಲ್ಲ ಸದಸ್ಯರು ಭಾಗವಹಿಸಿದ್ದರು.

Share.
Leave A Reply

Exit mobile version