
ದಾವಣಗೆರೆ : ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಶಾಸಕ ಕುಮಾರ ಬಂಗಾರಪ್ಪ ಅನಾಥ್ ಶಿಶುವಾಗಿದ್ದರು ಎಂದು ಮಾಜಿ ಶಾಸಕ ರೇಣುಕಾಚಾರ್ಯ ನಗರದಲ್ಲಿ ಹರಿಹಾಯ್ದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಅನಾಥ ಶಿಶುವಾಗಿದ್ದ ಕುಮಾರ ಬಂಗಾರಪ್ಪ ನಿಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇ ಬಿ.ಎಸ್.ಯಡಿಯೂರಪ್ಪ. ನಿಮ್ಮ ಕ್ಷೇತ್ರದಲ್ಲಿ ನೀವೇನು ಪಕ್ಷ ಸಂಘಟನೆ ಮಾಡಿದ್ದೀರಿ? ನೀವು ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆಂದು ಹೇಳುತ್ತೀರಾ? ನೀವೇನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾ? ಮಿಸ್ಟರ್ ಕುಮಾರ ಬಂಗಾರಪ್ಪನವರೇ ನಿಮಗೆ ತಾಕತ್ತು ಇದ್ದರೆ, ರಾಜ್ಯ ನಾಯಕತ್ವ ಬದಲಾವಣೆ ಮಾಡಲಿ ನೋಡೋಣ ಎಂದು ಏಕವಚನದಲ್ಲೇ ಅವರು ಸವಾಲು ಹಾಕಿದರು.
ವಿಜಯೇಂದ್ರರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ಜೊತೆಗೆ ಜಿಪಂ, ತಾಪಂ, ಮುಂದಿನ ವಿಧಾನಸಭೆ ಚುನಾವಣೆಯ ಸಾರಥ್ಯವನ್ನೂ ವಹಿಸುತ್ತಾರೆ. ನಮಗೆ ಯಾವುದೇ ಸಮಾವೇಶ ಆಯೋಜಿಸದಂತೆ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿಕೊಂಡು, ದಿನಾಂಕ ನಿಗದಿಪಡಿಸಿ, ಸಮಾವೇಶ ಆಯೋಜಿಸುತ್ತೇವೆ ಎಂದು ಯಡಿಯೂರಪ್ಪನವರ ಜನ್ಮದಿನ ಆಚರಣೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.