
ದಾವಣಗೆರೆ : ಕಾಂಗ್ರೆಸ್ನಲ್ಲಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗಾಗಿ ಪೈಪೋಟಿ, ಬಣ ರಾಜಕೀಯ ನಡೆಯುತ್ತಿರುವಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನೀಡಿರುವ ಹೇಳಿಕೆಯೊಂದು ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಕೆಲ ಬದಲಾವಣೆ ಗ್ಯಾರಂಟಿ ಎಂಬ ಸಂದೇಶ ರವಾನಿಸಿದ್ದಾರೆ. ಹಾಗಾದ್ರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತಾ.? ಸುಲಭಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬಿಟ್ಟು ಕೊಡ್ತಾರಾ? ಮುಂದಿನ ಕಾಂಗ್ರೆಸ್ ಅಧ್ಯಕ್ಷ ಯಾರು ಆಗ್ತಾರೆ.?
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೈ ನಾಯಕರ ನಡುವೆ ಪೈಪೋಟಿ ಈಗಾಗಲೇ ಆರಂಭವಾಗಿದ್ದು, ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿ, ‘ಇನ್ನೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಇನ್ನು ಎಂಟು ದಿನಗಳಲ್ಲಿ ಪ್ರಕಟಣೆ ಹೊರ ಬೀಳಲಿದೆ’ ಎಂದು ಸ್ಪಷ್ಟಪಡಿಸಿರುವುದು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಗ್ಯಾರಂಟಿ ಎಂಬ ಸಂದೇಶ ಕಳುಹಿಸಿದ್ದಾರೆ.
ಒಡಿಶಾದಲ್ಲಿ ಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. ಅಲ್ಲಿ ಹಿಂದುಳಿದ ವರ್ಗದವರು ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಅಧ್ಯಕ್ಷರ ಬದಲಾವಣೆ ಆಗುತ್ತದೆ. ಈ ಬಗ್ಗೆ ನಿರ್ದಿಷ್ಟವಾಗಿ ನಾನು ಹೇಳಲು ಸಾಧ್ಯವಾಗುವುದಿಲ್ಲ. ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ಒಂದೆರಡು ದಿನದಲ್ಲಿ ಮತ್ತೆ ಒಂದೆರಡು ರಾಜ್ಯಗಳಲ್ಲಿ ಬದಲಾವಣೆ ಆಗಲಿದೆ. 8 ದಿನಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

ಡಿಕೆಶಿ ಬಿಗಿ ಪಟ್ಟು
ಕೆಪಿಸಿಸಿ ಹುದ್ದೆ ಅಂಗಡಿಯಲ್ಲೂ ಸಿಗುವುದಿಲ್ಲ, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಈ ಹಿಂದೆ ಹೇಳಿದ್ದರು. ಅಂದ್ರೆ, ಸಿಎಂ ಹುದ್ದೆ ದಕ್ಕದ ಹೊರತು ಯಾವುದೇ ಕಾರಣಕ್ಕೂ ಕೆಪಿಸಿಸಿ ಹುದ್ದೆ ಬಿಟ್ಟು ಕೊಡುವ ಮಾತೇ ಇಲ್ಲ ಎಂಬ ಸಂದೇಶ ವಿರೋಧಿ ಬಣ ಸೇರಿ ಹೈಕಮಾಂಡ್ ನಾಯಕರಿಗೂ ಕಳುಹಿಸಿದ್ದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವುದಕ್ಕೆ ತನು, ಮನು, ಧನ ಅರ್ಪಿಸಿದ್ದೇನೆ ಎಂದು ಹೇಳಿರುವುದು, ಹೇಳುತ್ತಿರುವುದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂಬ ಸಂದೇಶವೇ ಹೊರತು ಬೇರೆನೂ ಅಲ್ಲ. ಒಂದು ವೇಳೆ ಬದಲಾವಣೆ ಮಾಡುವುದಾದರೇ ಮೊದಲು ಸಿಎಂ ಹುದ್ದೆ ಬಿಟ್ಟು ಕೊಡಬೇಕು ಇಲ್ಲವೇ ತಮ್ಮ ಸಹೋದರನಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಬೇಕು ಎಂಬ ಬಿಗಿ ಪಟ್ಟು ಹಿಡಿದಿದ್ದಾರೆ.
ಇದಕ್ಕೆ ಪ್ರತಿಯಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಒಬ್ಬರಿಗೆ ಎರಡು ಹುದ್ದೆಯಿಂದಾಗಿ ಪಕ್ಷ ಸಂಘಟನೆ ಸೊರಗುತ್ತಿದೆ. ಅಧ್ಯಕ್ಷ ಸ್ಥಾನ ಮತ್ತು ಎರಡು ಪ್ರಬಲ ಖಾತೆಗಳನ್ನು ಒಳಗೊಂಡ ಡಿಸಿಎಂ ಜವಾಬ್ದಾರಿಯನ್ನು ಒಬ್ಬರೇ ನಿಭಾಯಿಸುವುದು ಕಷ್ಟವೆಂದು ಹೇಳುತ್ತಿದ್ದಾರೆ.ಒಟ್ಟಾರೆ..ಎಐಸಿಸಿ ಖರ್ಗೆ ಅವರ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ನಲ್ಲಿ ತಲ್ಲಣ ಉಂಟಾಗಿರುವುದಂತೂ ನಿಜ.