ಶಿವಮೊಗ್ಗ: ವ್ಯಕ್ತಿಯೋರ್ವರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಓರ್ವನ ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿದ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಶಿವಮೊಗ್ಗದ ಜೆ.ಪಿ.ನಗರ ಬಡಾವಣೆ ನಿವಾಸಿ ರಜಾಕ್ (23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ವಿರುದ್ದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ.
ಈ ಕುರಿತಂತೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ‘ಆರೋಪಿ ರಜಾಕ್ ವಿರುದ್ದ 5 ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ವ್ಯಕ್ತಿಯೋರ್ವರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದು, ನಂತರ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ನೇತೃತ್ವದ ತಂಡ ಯತ್ನಿಸಿದೆ.
ಈ ವೇಳೆ ಈತ ಪೊಲೀಸ್ ಸಿಬ್ಬಂದಿ ಅರ್ಜುನ್ ಮೇಲೆಯೇ ಚಾಕುವಿನಿಂದ ದಾಳಿ ನಡೆಸಿದ್ದಾನೆ. ತಕ್ಷಣವೇ ಇನ್ಸ್’ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಆರೋಪಿ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಗಾಯಗೊಂಡಿರುವ ಆರೋಪಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಎಸ್ಪಿ ಅವರು ತಿಳಿಸಿದ್ದಾರೆ.