
ದಾವಣಗೆರೆ :ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬರತೊಡಗಿವೆ.
ಆಡಳಿರೂಢ ಕಾಂಗ್ರೆಸ್ ಸರ್ಕಾರದ ಸಚಿವರೊಬ್ಬರು ಸುಧಾಕರ್ ಅವರು ಕಾಂಗ್ರೆಸ್ ಪಕ್ಷ ಸೇರುವ ಸುಳಿವು ನೀಡಿದ್ದಾರೆ. ಈ ಮೂಲಕ ಮತ್ತೆ ಮರಳಿ ಗೂಡು ಸೇರುತ್ತಾರಾ ಎಂಬ ಕುತೂಹಲ ಚಿಕ್ಕಬಳ್ಳಾಪುರ ಜನರಲ್ಲಿ ಮನೆ ಮಾಡಿದೆ.
ಕಾಂಗ್ರೆಸ್ ನತ್ತ ಒಲವು
ಬಿಜೆಪಿ ಸಂಸದ ಕೆ.ಸುಧಾಕರ್ ಮಾತ್ರವಲ್ಲ ಇನ್ನೂ ಹಲವರು ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ. ಈ ಬಗ್ಗೆ ಹೈಕಮಾಂಡ್, ರಾಜ್ಯ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಈ ಹೇಳಿಕೆ ಈಗ ಬಿಜೆಪಿಯಲ್ಲಿ ತಲ್ಲಣ ಹುಟ್ಟಿಸಿದ್ರೆ, ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಈಗಿನಿಂದಲೇ ಪಕ್ಷ ಬಲವರ್ಧನೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್ ಸಮುದ್ರವಿದ್ದಂತೆ, ಪಕ್ಷಕ್ಕೆ ಯಾರೂ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ, ಯಾರೇ ಬಂದರೂ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ. ಅಂತಿಮವಾಗಿ ತೀರ್ಮಾನ ಹೈಕಮಾಂಡ್ನಿಂದ ಆಗಲಿದೆ ಎಂದು ಮುನಿಯಪ್ಪ ನುಡಿದಿದ್ದಾರೆ.
ಕಾಂಗ್ರೆಸ್ನಿಂದ ರಾಜಕೀಯ ಜೀವನ ಆರಂಭಿಸಿದವರು ಸುಧಾಕರ್. ರಾಜ್ಯದಲ್ಲಿ ನಡೆದ ಕ್ಷೀಪ್ರ ರಾಜಕೀಯ ಬೆಳವಣಿಗೆಯಲ್ಲಿ ದಿಢೀರ್ ಬಿಜೆಪಿ ಸೇರಿಕೊಂಡು ಚಿಕ್ಕಬಳ್ಳಾಪುರ ಜನತೆಗೆ ಶಾಕ್ ನೀಡಿದ್ದರು. ಬಳಿಕ ಶಾಸಕರಾಗಿದ್ದ ಅವರು ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಖಾತೆ ಗಿಟ್ಟಿಸಿಕೊಳ್ಳುವ ಮೂಲಕ ಪ್ರಭಾವಿ ಸಚಿವರಾಗಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಸುಧಾಕರ್, ಬಳಿಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರೂ ಆಗಿದ್ದಾರೆ. ಆದರೆ ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ಉರಿಯುತ್ತಿರುವ ಬಣ ರಾಜಕೀಯ ಹಾಗೂ ವಿಜಯೇಂದ್ರ ಅವರ ನಡೆಗೆ ಸುಧಾಕರ್ ಅವರು ಆಕ್ರೋಶ ಹೊರಹಾಕಿದ್ದರು. ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಸುಧಾಕರ್ ಅವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ಎಲ್ಲೆಡೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಅಧ್ಯಕ್ಷ ವಿಜಯೇಂದ್ರ ಬಗ್ಗೆ ಈಗಾಗಲೇ ದೂರು ನೀಡಿರುವ ಸುಧಾಕರ್ ಅವರು ಒಂದು ವೇಳೆ ಹೈಕಮಾಂಡ್ ಇದಕ್ಕೆ ಸ್ಪಂದಿಸದಿದ್ದರೆ ಮತ್ತೆ ಕಾಂಗ್ರೆಸ್ ಸೇರುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ.