ದಾವಣಗೆರೆ: ಕಾಂಗ್ರೆಸ್ ಚಿಹ್ನೆಯಿಂದ ಪಾಲಿಕೆ ಚುನಾವಣೆಯಲ್ಲಿ ಗೆದ್ದು, ಮೇಯರ್ ಸ್ಥಾನ ಸಿಗಲಿಲ್ಲವೆಂದು ಬಿಜೆಪಿಗೆ ಹೋಗಿ ಗೆಲುವು ಸಾಧಿಸಿದ್ದ  ಜೆ.ಎನ್.ಶ್ರೀನಿವಾಸ್ ಆಲಿಯಾಸ್ ಮೋಟ್ ಬೆಳ್ ಸೀನಾ ಇಂದು ಗಣೇಶ್ ಹುಲ್ಮನಿ, ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಚಿವರೊಂದಿಗೆ ಕಾಂಗ್ರೆಸ್ ಶಾಲು ಹಾಕಿಕೊಂಡಿದ್ದ ಪೋಟೋ ಹರಿದಾಡುತ್ತಿದ್ದು, ಕಾಂಗ್ರೆಸ್ ಸೇರಿದ ಬಗ್ಗೆ ಅಧಿಕೃತ ಮಾಹಿತಿ ಬರಬೇಕಿದೆ.

ಮೇಯರ್ ಗೋಸ್ಕರ ರಾಜೀನಾಮೆ

28ನೇ ವಾರ್ಡ್‌ (ಭಗತ್‌ಸಿಂಗ್‌ ನಗರ) ಸದಸ್ಯ ಜೆ.ಎನ್‌. ಶ್ರೀನಿವಾಸ್‌ ಮತ್ತು ಅವರ ಪತ್ನಿ, 37ನೇ ವಾರ್ಡ್‌ (ಕೆಇಬಿ ಕಾಲೊನಿ) ಸದಸ್ಯೆ ಶ್ವೇತಾ ಶ್ರೀನಿವಾಸ್‌ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಅಲ್ಲದೇ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯರಿಬ್ಬರು ಪಕ್ಷಕ್ಕೂ, ಪಾಲಿಕೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ  ಅನಿವಾರ್ಯವಾಗಿ ಉಪಚುನಾವಣೆ ಎದುರಾಗಿತ್ತು. ನಂತರ ಉಪಚುನಾವಣೆಗೆ ಇವರ ಎದುರಾಳಿಯಾಗಿ ಸಚಿವರ ಆಪ್ತ ಹುಲ್ಲುಮನಿ ಗಣೇಶ್ ನಿಂತಿದ್ದರು. ನಂತರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹುಲ್ಲುಮನಿ ಗಣೇಶ್ ಪರ ಪ್ರಚಾರ ಮಾಡಿದ್ದರು. ಆದರೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಜೆ.ಎನ್.ಶ್ರೀನಿವಾಸ್, ಪತ್ನಿ ಶ್ವೇತಾ ಶ್ರೀನಿವಾಸ ಗೆದ್ದಿದ್ದರು.

ಕಳೆದ ಮೂರು ವರ್ಷದ  ಹಿಂದೆ ಪಾಲಿಕೆಗೆ ಚುನಾವಣೆ ನಡೆದಾಗ ಅಧಿಕಾರ ಹಿಡಿಯಲು ಒಂದೇ ಮೆಟ್ಟಿಲು ಎಂದು ಕಾಂಗ್ರೆಸ್‌ ಬೀಗಿತ್ತು.ಬಳಿಕ ಒಂದೊಂದೇ ಸ್ಥಾನಗಳನ್ನು ಕಳೆದುಕೊಂಡು ಬಂದಿದ್ದ  ಕಾಂಗ್ರೆಸ್‌ಗೆ ಇವರಿಬ್ಬರ ರಾಜೀನಾಮೆ ಮತ್ತಷ್ಟು ಹೊಡೆತ ನೀಡಿತ್ತು.

45 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದ್ದರೆ, ಬಿಜೆಪಿ 17ಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಐವರು ಪಕ್ಷೇತರರು, ಒಬ್ಬರು ಜೆಡಿಎಸ್‌ ಅಭ್ಯರ್ಥಿ ಗೆದ್ದಿದ್ದರು. ಆನಂತರ ನಡೆದ ಬೆಳವಣಿಗೆಯಲ್ಲಿ ವಿಧಾನ ಪರಿಷತ್‌ ಸದಸ್ಯರನ್ನು ದಾವಣಗೆರೆಯ ನಿವಾಸಿಗಳನ್ನಾಗಿಸಿ ಅಧಿಕಾರ ಹಿಡಿಯುವ ಹೋರಾಟದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಮುಂದೆ ಸಾಗಿತ್ತು. ಅದಾಗಿಯೂ ಮೇಯರ್‌ ಚುನಾವಣೆಗೆ ಸಮ ಮತ ಬರುವ ಸಾಧ್ಯತೆ ಎದುರಾದಾಗ ಇದೇ ಜೆ.ಎನ್‌. ಶ್ರೀನಿವಾಸ್‌ ಮತ್ತು ಶ್ವೇತಾ ಶ್ರೀನಿವಾಸ್‌ ಗೈರಾಗಿ ಬಿಜೆಪಿಯ ಹಾದಿ ಸುಗಮಗೊಳಿಸಿದ್ದರು. ಕಾಂಗ್ರೆಸ್‌ನ ಯಶೋದಾ ಕೂಡ ಆಗ ಸಭೆಗೆ ಹಾಜರಾಗಿರಲಿಲ್ಲ. ಬಳಿಕ ಅವರು ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತರು.

ಆಗ ಜೆ.ಎನ್.ಶ್ರೀನಿವಾಸ ಹೇಳಿದ್ದೇನು?

‘ಮೇಯರ್‌ ಸ್ಥಾನದ ಅಭ್ಯರ್ಥಿಯನ್ನಾಗಿ ನನ್ನನ್ನು ಮಾಡಿದ್ದರೆ ಬರುತ್ತಿದ್ದೆ. ಅಸಮಾಧಾನದಿಂದ ಬಂದಿರಲಿಲ್ಲ’ ಎಂದು ಆಗ ಶ್ರೀನಿವಾಸ್‌ ಗೈರಾಗಿದ್ದಕ್ಕೆ ಕಾರಣ ತಿಳಿಸಿದ್ದರು.ಎರಡನೇ ವರ್ಷದ ಮೇಯರ್‌ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಮೇಯರ್‌ ಅಭ್ಯರ್ಥಿಯಾಗಿದ್ದ ದೇವರಮನಿ ಶಿವಕುಮಾರ್‌ ಅವರೇ ಚುನಾವಣೆಯ ಹಿಂದಿನ ರಾತ್ರಿ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿಬಿಟ್ಟಿದ್ದರು. ಇದರಿಂದ ಕಾಂಗ್ರೆಸ್‌ ಕಂಗಾಲಾಗಿತ್ತು. ನಂತರ  ಬಿಜೆಪಿ ಅಧಿಕಾರಕ್ಕೆ ಎರಡನೇ ವರ್ಷವೂ ಬಂದಿತ್ತು. ಯಶೋದಾ ಮತ್ತು ದೇವರಮನಿ ಶಿವಕುಮಾರ್‌ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಂದು ಬಿಜೆಪಿ, ಒಂದು ಕಾಂಗ್ರೆಸ್ ಪಾಲಾಗಿತ್ತು.

ಮೂರನೇ ವರ್ಷದ ಮೇಯರ್ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್‌ ಪೈಪೋಟಿ ನೀಡುವ ಪ್ರಯತ್ನ ಮಾಡಿದರೂ ಸ್ಥಾನಬಲ ಕಡಿಮೆಯಾಗಿತ್ತು.ವಿಧಾನ ಪರಿಷತ್‌ ಸದಸ್ಯರಲ್ಲಿ ಕೆಲವರ ಅವಧಿಯೂ ಮುಗಿದಿತ್ತು. ಹಾಗಾಗಿ ದೊಡ್ಡ ರಾಜಕೀಯ ಸ್ಥಿತ್ಯಂತರವಾಗಿರಲಿಲ್ಲ. ನಂತರ ಶ್ರೀನಿವಾಸ್‌ ಮತ್ತು ಶ್ವೇತಾ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವ ಮೂಲಕ ಮತ್ತೆ ರಾಜಕೀಯ ಜಿದ್ದು ಏರ್ಪಡಲು ಕಾರಣರಾಗಿದ್ದರು.

ಪಾಲಿಕೆ ಸದಸ್ಯ, ಕಾಂಗ್ರೆಸ್ ನಾಯಕ ಗಡಿಗುಡಾಳ್ ಆಗ ಹೇಳಿದ್ದೇನು?

ಜೆ.ಎನ್ .ಶ್ರೀನಿವಾಸ್ ಹಾಗೂ ಶ್ವೇತಾ ಶ್ರೀನಿವಾಸ್ ಮೊದಲ ಮೇಯರ್‌ ಚುನಾವಣೆಯ ಸಂದರ್ಭದಲ್ಲಿ ಹಣ ತೆಗೆದುಕೊಂಡು ಗೈರಾಗಿ ಮೋಸ ಮಾಡಿದ್ದರು. ನಂತರ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಸಮಾಧಾನವಿದೆ ಎಂದು ಆಗಿನ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಹೇಳಿದ್ದರು

ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌ ಹಿಂದೆ ಹೇಳಿದ್ದೇನು

ಈ ಎರಡು ವಾರ್ಡ್‌ಗಳಲ್ಲಿ ಎರಡು ರಾಜಕಾಲುವೆಗಳು ಹರಿದು ಹೋಗಿವೆ. ಸಣ್ಣ ಮಳೆ ಬಂದರೂ ತುಂಬಿಕೊಳ್ಳುತ್ತವೆ. ಅವುಗಳನ್ನು ಸರಿಪಡಿಸಬೇಕು ಎಂದು ಅನೇಕ ವರ್ಷಗಳ ಬೇಡಿಕೆ ಇಲ್ಲಿಯ ಜನರದ್ದಾಗಿತ್ತು. ಅದೀಗ ನೆರವೇರುತ್ತಿದೆ. ಜತೆಗೆ ಶ್ರೀನಿವಾಸ್‌ ಅಲ್ಲಿನ ಜನರ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಹಿಂದೆ ಬರಗಾಲ ಬಂದಾಗ ವೈಯಕ್ತಿಕ ಖರ್ಚಿನಲ್ಲಿ ಸುಮಾರು 30 ಬೋರ್‌ವೆಲ್ ಕೊರೆಸಿ ನೀರು ನೀಡಿದ್ದರು. ಇದೆಲ್ಲ ಕಾರಣದಿಂದ ಬಿಜೆಪಿ ಗೆದ್ದಿದೆ ಎಂದು ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌ ಹೇಳಿದ್ದರು.

  ‘ಕಾಂಗ್ರೆಸ್‌ ಬಿಡಲು ಕೆಲವು ಪಾಲಿಕೆ ಸದಸ್ಯರು ಕಾರಣ ಎಂದು‌ ಹೇಳಿದ್ದ ಜೆ.ಎನ್.ಶ್ರೀನಿವಾಸ್

 ಪಾಲಿಕೆಯಲ್ಲಿ ಮೊದಲ ಮೇಯರ್‌ ಚುನಾವಣೆಯಲ್ಲಿ ನನಗೆ ಮಾನ್ಯತೆ ನೀಡಲಿಲ್ಲ. ಹಾಗಾಗಿ ಅಸಮಾಧಾನದಿಂದ ಗೈರಾಗಬೇಕಾಯಿತು. ಆ ಬಳಿಕ ಕಾಂಗ್ರೆಸ್‌ನ ಕೆಲವು ಸದಸ್ಯರು ನನ್ನ ವಿರುದ್ಧ ಪಿತೂರಿ ಮಾಡಿದರು. ಆಕಡೆಯೂ ಅಲ್ಲ, ಈ ಕಡೆಯೂ ಅಲ್ಲ ಎಂಬಂತೆ ಇಟ್ಟರು. ರಾಜಕಾಲುವೆ ಕಾಮಗಾರಿಗೆ ನಾನೇ ಓಡಾಡಿ ಅನುದಾನ ತಂದರೂ ಅದಕ್ಕೆ ಕೆಲವರು ಅಡ್ಡಗಾಲು ಹಾಕಲು ನೋಡಿದರು. ಕೆಲವೇ ಕೆಲವರ ಮೋಸದಿಂದಾಗಿ ನಾನು ಪಕ್ಷ ಬಿಡುವುದು ಅನಿವಾರ್ಯವಾಯಿತು’ ಎಂದು ಜೆ.ಎನ್‌. ಶ್ರೀನಿವಾಸ್‌ ಪ್ರತಿಕ್ರಿಯಿಸಿದ್ದರು.

‘ನಾನು ಮನುಷ್ಯತ್ವಕ್ಕೆ ಬೆಲೆ ನೀಡುವವನು. ನನ್ನ ವಾರ್ಡ್‌ನ ಜನರ ಸಂಕಷ್ಟಗಳಿಗೆ ನಿರಂತರ ಸ್ಪಂದಿಸುತ್ತಾ ಬಂದಿದ್ದೇನೆ. ನನಗೆ ಪಾಲಿಕೆ ಸದಸ್ಯ ಸ್ಥಾನಕ್ಕಿಂತ ನನ್ನ ಜನರು ಮುಖ್ಯ. ಅವರು ನನ್ನ ಕೈ ಬಿಡುವುದಿಲ್ಲ’ ಎಂದು ಹೇಳಿದ್ದರು‌

ಬಿಜೆಪಿಯಿಂದ ಎಂಎಲ್ ಎ ಚುನಾವಣೆಗೆ ಟಿಕೆಟ್ ಕೇಳಿದ್ದ ಜೆ‌.ಎನ್.ಶ್ರೀನಿವಾಸ್

ತನಗೆ ಉತ್ತರ ವಿಧಾನಸಭಾ ಚುನಾವಣೆಯ ಟಿಕೆಟ್  ಬೇಕೆಂದು ಆಗಿನ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗನಗೌಡರಿಗೆ ಜೆ.ಎನ್.ಶ್ರೀನಿವಾಸ್ ಮನವಿ ಸಲ್ಲಿಸಿದ್ದರು. ಜೆ‌.ಎನ್. ಶ್ರೀನಿವಾಸ್ ಮೂರು ಬಾರಿ ಪಾಲಿಕೆ ಸದಸ್ಯರಾಗಿದ್ದರು. ಬಾಡಿ ಬೀಲ್ಡಿಂಗ್ ನಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಆಗಿರುವ ಶ್ರೀನಿವಾಸ್, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರುಮ ನಾನು ಸಮಾಜ ಸೇವೆ ಮಾಡಿದ್ದೇನೆ ನನಗೆ ಟಿಕೆಟ್ ನೀಡಿ ಎಂದು  ಶ್ರೀನಿವಾಸ್ ವರಿಷ್ಠರನ್ನು  ಕೇಳಿದ್ದರು.

ಒಟ್ಟು 14 ಕೇಸ್​ಗಳು ದಾಖಲು

ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಆ್ಯಕ್ಟಿವ್ ರೌಡಿಗಳ ಪರೇಡ್ ನಡೆಸಲಾಗಿತ್ತು. ಈ ವೇಳೆ ರೌಡಿ ಪರೇಡ್ ನಲ್ಲಿ ಜೆಎನ್ ಶ್ರೀನಿವಾಸ್ ಭಾಗಿಯಾಗಿದ್ದರು. ಈತನ ಮೇಲೆ ಬೆದರಿಕೆ, ಕೊಲೆ, ಸೇರಿ ಇತರೆ 14 ಕೇಸ್ ಗಳು ದಾಖಲಾಗಿವೆ.

ಎದುರಾಳಿ ಹುಲ್ಮನಿ ನೇತೃತ್ವದಲ್ಲಿ ಕಾಂಗ್ರೆಸ್ ಗೆ

ಪಾಲಿಕೆ ಚುನಾವಣೆಯಲ್ಲಿ ಜೆ.ಎನ್.ಶ್ರೀನಿವಾಸ್ ಎದುರಾಳಿಯಾಗಿದ್ದ  ಗಣೇಶ್ ಹುಲ್ಮನಿ ನೇತೃತ್ವದಲ್ಲಿ ಜೆ.ಎನ್.ಶ್ರೀನಿವಾಸ್ ಕಾಂಗ್ರೆಸ್ ಗೆ ಸೇರಿದ್ದಾರೆ. ಒಟ್ಟಾರೆ ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಎಂಬ ಗಾದೆಯಂತೆ ಜೆ.ಎನ್‌‌.ಶ್ರೀನಿವಾಸ್ ಪುನಃ ಕಾಂಗ್ರೆಸ್ ಗೆ ಸೇರಿದ್ದು, ಕಾಂಗ್ರೆಸ್ ಗೆ ಸೇರಿರುವುದಕ್ಕೆ ಕಾರಣ ನೀಡಿಲ್ಲ‌

 

Share.
Leave A Reply

Exit mobile version