![](https://davangerevijaya.com/wp-content/uploads/2025/01/IMG-20250116-WA0145.jpg)
ಹಾಸನ : ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಬಂಡೆಯಂತೆ ನಿಲ್ಲುವುದಾಗಿ ಮೈಸೂರಿನಲ್ಲಿ ಹೇಳಿದ್ದೇನೆ. ಈಗಲೂ ಇದ್ದೇನೆ, ನಾಳೆಯೂ ಇರುತ್ತೇನೆ. ಸಾಯುವವರೆಗೂ ಇರುತ್ತೇನೆ. ಇದು ಈ ಕನಕಪುರದ ಬಂಡೆಯ ಇತಿಹಾಸ. ನಾನು ಎಲ್ಲಿ ಕೆಲಸ ಮಾಡುತ್ತೇನೋ ಅಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ನನ್ನ ಕರ್ತವ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಶಿವಕುಮಾರ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:
“ಮೊದಲು ಹಾಸನಾಂಬೆ ತಾಯಿಯ ಪಾದಗಳಿಗೆ ಸಾಷ್ಟಾಂಗ ನಮನಗಳು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. 25 ವರ್ಷಗಳ ನಂತರ ಹಾಸನದ ಮಹಾಜನತೆ ಕಾಂಗ್ರೆಸಿಗನನ್ನು ಆರಿಸಿ ಸಂಸತ್ತಿಗೆ ಕಳಿಸಿದ್ದೀರಿ. ಈ ಭಾಗದ ಧ್ವನಿಯಾಗಲು, ನೊಂದ ತಾಯಂದಿರಿಗೆ ರಕ್ಷಣೆ ನೀಡಲು ಶ್ರೇಯಸ್ ಪಟೇಲ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ನಿಮಗೆ ನಮನಗಳು.
ಸರ್ಕಾರದ ಶಕ್ತಿ ನೂರೆಂಟು, ಐದು ಗ್ಯಾರಂಟಿಗಳು ಪರ್ಮನೆಂಟು, 2028ರಲ್ಲಿ ನಾವೇ ಅಧಿಕಾರಕ್ಕೆ ಬರುವುದು ಹಂಡ್ರೆಡ್ ಪೆರ್ಸೆಂಟ್. ಇದನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಸುಳ್ಳಿನ ಸರಮಾಲೆಗಳಿಗೆ ಸಂಡೂರು, ಶಿಗ್ಗಾವಿ, ಚನ್ನಪಟ್ಟಣದಲ್ಲಿ ಜನ ಉತ್ತರ ನೀಡಿದ್ದಾರೆ.
![](https://davangerevijaya.com/wp-content/uploads/2025/01/IMG-20241225-WA0105.jpg)
![](https://davangerevijaya.com/wp-content/uploads/2025/01/IMG-20250125-WA0230.jpg)
ಕಮಲ ಕೆರೆಯಲ್ಲಿದ್ದರೆ ಚೆಂದ, ತೆಲೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದ ಕಾರಣ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಜನರಿಗೆ ಆರ್ಥಿಕ ಶಕ್ತಿ ತುಂಬಲಾಗಿದೆ.
ರಾಮನಗರದಲ್ಲಿ ನಾಲ್ಕಕ್ಕೆ ನಾಲ್ಕು, ಮಂಡ್ಯದಲ್ಲಿ ಆರು, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರಿನಲ್ಲಿ ನಾವು ಹೆಚ್ಚು ಕ್ಷೇತ್ರ ಗೆದ್ದಿದ್ದು, ಮುಂದೆ ಹಾಸನದಲ್ಲೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೀವಿ ಎಂಬ ಆತ್ಮವಿಶ್ವಾಸವಿದೆ. ಇದಕ್ಕೆ ನೀವು ಸಹಕಾರ ನೀಡಬೇಕು.
ಹಾಸನದ ಇತಿಹಾಸ ನೋಡಿದರೆ ನೋವಾಗುತ್ತದೆ. ಅನೇಕ ರಾಜಕಾರಣಿಗಳು, ಕುಟುಂಬಗಳ ಕಣ್ಣಲ್ಲಿ ನೀರು ತರಿಸಿದ್ದಾರೆ. ಹಾಸನಾಂಬೆ ತಾಯಿ ಆ ಕಣ್ಣೀರು ಒರೆಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ತಾಯಂದಿರ ಸ್ವಾಭಿಮಾನ ಕಾಪಾಡಲು ನಾವು ಈ ಸಮಾವೇಶ ಹಮ್ಮಿಕೊಂಡಿದ್ದೇವೆ. ಇದು ಹಾಸನದ ದೊಡ್ಡ ಇತಿಹಾಸ.
ಗೌಡರ ತವರಲ್ಲಿ ಈ ಸಮಾವೇಶ ಎಂದು ಮಾಧ್ಯಮಗಳು ಬರೆದಿವೆ. ನಿಜ, ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಮಾನ್ಯ ಶ್ರೀ ದೇವೇಗೌಡರು ದೇಶದ ಪ್ರಧಾನಮಂತ್ರಿಯಾದರು. ಬಿಜೆಪಿಯವರ ಬೆಂಬಲದೊಂದಿಗೆ ಕುಮಾರಸ್ವಾಮಿ 20 ತಿಂಗಳು ಸಿಎಂ ಆದರು. ಮತ್ತೆ ಕಾಂಗ್ರೆಸ್ ಬೆಂಬಲದೊಂದಿಗೆ 14 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಈ ಉಪಚುನಾವಣೆಯಲ್ಲಿ ನಾವು ಜನರ ಮುಂದೆ ನಾವು ಕೆಲವು ಪ್ರಶ್ನೆಗಳನ್ನು ಇಟ್ಟೆವು.
ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಉಳುವವನಿಗೆ ಭೂಮಿ, 20 ಅಂಶಗಳ ಕಾರ್ಯಕ್ರಮ, ಅಂಗನವಾಡಿ, ಪಿಂಚಣಿ ಯೋಜನೆ, ತಂತ್ರಜ್ಞಾನ ಕ್ರಾಂತಿ, ಅನ್ನಭಾಗ್ಯ, ಆಹಾರ ಭದ್ರತಾ ಕಾಯ್ದೆ, ಶೈಕ್ಷಣಿಕ ಹಕ್ಕು, ಉದ್ಯೋಗ ಖಾತ್ರಿ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಸ್ತ್ರೀಶಕ್ತಿ ಸಂಘ, ಬಿಸಿಯೂಟ, ಐಟಿ ಬಿಟಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಯಿತು. ಈಗ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ.
ಚುನಾವಣೆ ಸಮಯದಲ್ಲಿ ಚನ್ನಪಟ್ಟಣಕ್ಕೆ ಬಂದು ಕಣ್ಣೀರು ಹಾಕುವ ಕುಮಾರಸ್ವಾಮಿ ಅವರೇ ನಿಮ್ಮ ಸಾಕ್ಷಿ ಗುಡ್ಡೆ ಏನು? ಹಾಸನದಲ್ಲಿ ದೇವೇಗೌಡರ ಕುಟುಂಬದ ಸಾಕ್ಷಿ ಗುಡ್ಡೆ ಏನು? ನಾನು ನಿಮ್ಮ ಕುಟುಂಬದ ಮಾಜಿ ಸಂಸದರ ಸಾಕ್ಷಿ ಗುಡ್ಡೆ ಬಗ್ಗೆ ಮಾತನಾಡುವುದಿಲ್ಲ. ಅದರ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತದೆ.
ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ. ಭಾವನೆ, ಧರ್ಮಗಳ ಮೇಲೆ ರಾಜಕೀಯ ಮಾಡುವುದಿಲ್ಲ. ನಮ್ಮ ಅಧಿಕಾರ ನಶ್ವರ. ಆದರೆ ಕಾಂಗ್ರೆಸ್ ಪಕ್ಷದ ಸಾಧನೆ ಅಜರಾಮರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ. ಇದು ಜನರ ಕಲ್ಯಾಣ ಹಾಗೂ ಗ್ಯಾರಂಟಿ ಗೆಲುವಿನ ಸಮಾವೇಶ.
ನಿಮ್ಮ ಕುತಂತ್ರಗಳು ಯಶಸ್ವಿಯಾಗಲಿಲ್ಲ ಎಂದು ಬಿಜೆಪಿ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಕುತಂತ್ರಕ್ಕೆ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಂಡೂರು, ಕಿತ್ತೂರು ಕರ್ನಾಟಕದ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರನನ್ನು ಜನ ಸೋಲಿಸಿದ್ದಾರೆ. ಹಳೇ ಮೈಸೂರು ಭಾಗದ ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಮಂತ್ರಿಯ ಮೊಮ್ಮಗ, ಮಾಜಿ ಮುಖ್ಯಮಂತ್ರಿಯ ಮಗನನ್ನು ಜನ ಒಪ್ಪಿಲ್ಲ. ನಿಮ್ಮನ್ನು ಜನ ಮತ್ತೆ ಒಪ್ಪಲು ಸಾಧ್ಯವಿಲ್ಲ.
ಕುಮಾರಸ್ವಾಮಿ, ದೇವೇಗೌಡರು ಉಪಚುನಾವಣೆ ಸಮಯದಲ್ಲಿ ಈ ಸರ್ಕಾರವನ್ನು ಆರು ತಿಂಗಳಲ್ಲಿ ಕಿತ್ತೊಗೆಯುತ್ತೇವೆ ಎಂದು ಹೇಳಿದರು. ದೇವೇಗೌಡರೇ ಕಿತ್ತುಹಾಕಲು ನಮ್ಮ ಸರ್ಕಾರ ಹಾಸನದಲ್ಲಿ ಬೆಳೆಯುವ ಆಲೂಗಡ್ಡೆ ಗಿಡವಲ್ಲ. 138 ಶಾಸಕರ ಜನಬೆಂಬಲವಿರುವ ಸರ್ಕಾರ ಇದು. ಇದನ್ನು ಕಿತ್ತುಹಾಕಲು ನಿಮ್ಮ ಹಣೆಯಲ್ಲಿ ಬರೆದಿಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ.
ಇಲ್ಲಿರುವ ಜನ ರೈತರ ಮಕ್ಕಳು. ಬಿಜೆಪಿ ಅವಧಿಯಲ್ಲಿ ನಮ್ಮ ಹೆಮ್ಮೆಯ ನಂದಿನಿಯನ್ನು ಅಮುಲ್ ಜತೆ ವಿಲೀನ ಮಾಡಲು ಮುಂದಾಗಿದ್ದರು. ಈಗ ಅದೇ ನಂದಿನಿ ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪ ಪೂರೈಕೆಯಾಗುತ್ತಿದೆ. ಇದು ರಾಜ್ಯದ ಹಾಲು ಉತ್ಪಾದಕ ರೈತರಿಗೆ ಕೊಟ್ಟಿರುವ ಶಕ್ತಿ.
ನಾವು ಕೇವಲ ರಾಜಕಾರಣ ಮಾಡಲು ಮಾತ್ರ ಬಂದಿಲ್ಲ. ನಿಮ್ಮ ಬದುಕಿನಲ್ಲಿ ಪಾಲುದಾರರಾಗಲು ಬಂದಿದ್ದೇವೆ. ನಮ್ಮ ಪಕ್ಷದಲ್ಲಿದೆ ಒಗ್ಗಟ್ಟು, ಬಿಜೆಪಿಯಲ್ಲಿದೆ ಬಿಕ್ಕಟ್ಟು, ನಾವು ವಚನಪಾಲಕರು, ನೀವು ವಚನಭ್ರಷ್ಟರು. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದರೆ ಮಾತ್ರ ದೇಶವನ್ನು ರಕ್ಷಣೆ ಮಾಡಲು ಸಾಧ್ಯ. ಕಳೆದ ಉಪ ಚುನಾವಣೆಯಲ್ಲಿ ಜನ ಇಂಡಿಯಾ ಒಕ್ಕೂಟಕ್ಕೆ 243 ಕ್ಷೇತ್ರಗಳನ್ನು ನೀಡಿ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ಸೂಚನೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ಪ್ರತಿಯೊಬ್ಬರ ಜನರ ಬದುಕಿನಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ಪರಿಣಾಮ ಬೀರಿವೆ. ನಮ್ಮ ಮಾದರಿಯನ್ನು ಬಿಜೆಪಿಯು ಬೇರೆ ಬೇರೆ ರಾಜ್ಯಗಳಲ್ಲಿ ನಕಲು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವುದೇ ಕಾರ್ಯಕ್ರಮ ಕೊಟ್ಟರೂ ಅದನ್ನು ನಾವು ಉಳಿಸಿಕೊಂಡು ಬರುತ್ತಿದ್ದೇವೆ. ಇಂದಿರಾ ಗಾಂಧಿ ಅವರ ಕಾಲದಿಂದ ಮನಮೋಹನ್ ಸಿಂಗ್ ಅವರ ಕಾಲದವರೆಗೂ ನಾವು ಶಾಸನಬದ್ಧ ಕಾರ್ಯಕ್ರಮ ನೀಡುತ್ತಾ ಬಂದಿದೆ.
ಅಂಬೇಡ್ಕರ್ ಅವರು ನಮ್ಮ ದೊಡ್ಡ ಶಕ್ತಿ. ದೇಶದಲ್ಲಿ ಅತಿ ಹೆಚ್ಚು ಪ್ರತಿಮೆ ಇರುವುದು ಅಂಬೇಡ್ಕರ್ ಅವರದ್ದು ಮಾತ್ರ. ಕಾಂಗ್ರೆಸ್ ಸರ್ಕಾರದಲ್ಲಿ ಅವರು ಕೊಟ್ಟ ಸಂವಿಧಾನವನ್ನು ನಾವೆಲ್ಲರೂ ಸೇರಿ ಉಳಿಸಬೇಕು. ಈ ಜಿಲ್ಲೆಯ ಜನರ ಸ್ವಾಭಿಮಾನ ರಕ್ಷಣೆ ಮಾಡಿ, ಜನಕಲ್ಯಾಣ ಯಾತ್ರೆ ಆರಂಭಿಸಿದ್ದೇವೆ.
ನನ್ನ ಗುರುಗಳು ನನಗೆ ಒಂದು ಮಾತು ಹೇಳಿಕೊಟ್ಟಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ನೆಲೆಸಲಿ ಎಂದು ಹೇಳಿದ್ದಾರೆ. ನಾವು ಬಡವರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಅದೇ ರೀತಿ ಸಂಪುಟ ಸಚಿವರೆಲ್ಲರೂ ಸೇರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ರಾಜ್ಯದ ಸೇವೆ ಮಾಡಿ ನಿಮ್ಮ ಋಣ ತೀರಿಸುತ್ತೇವೆ.
ನೀವು ಮುಂದಿನ ಚುನಾವಣೆಯಲ್ಲಿ ಈ ಜಿಲ್ಲೆಯ ಜನ ಕೇವಲ ಸಂಸದರು ಹಾಗೂ ಶಿವಲಿಂಗೇಗೌಡರನ್ನು ಮಾತ್ರ ಗೆಲ್ಲಿಸುವುದಲ್ಲ. ಇಲ್ಲಿರುವ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು.” ಎಂದರು.
![](https://davangerevijaya.com/wp-content/uploads/2025/01/IMG-20250116-WA01462.jpg)
![](https://davangerevijaya.com/wp-content/uploads/2025/01/IMG-20250125-WA0230.jpg)