
ದಾವಣಗೆರೆ: ಖೋಟಾ ನೋಟು ಜಾಲದ 6 ಜನರನ್ನು ಬಂಧಿಸಿ 40 ಲಕ್ಷಕ್ಕೂ ಅಧಿಕ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ಉಮಾಪ್ರಶಾಂತ್ ತಿಳಿಸಿದರು.
ಬುಧವಾರ ಸಂಜೆ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ತಾಲ್ಲೂಕಿನ ಕುಕ್ಕವಾಡ ಗ್ರಾಮದ ತಳವಾರ ಕುಬೇರಪ್ಪ(58), ಲಿಂಗಾಪುರ ಐಗೂರು ಗ್ರಾಮದ ಹರೀಶ್ ಅಲಿಯಾಸ್ ಹರೀಶ್ ಗೌಡ(29), ಭದ್ರಾವತಿ ತಾಲೂಕಿನ ದೊಡ್ಡಗೊಪ್ಪನಹಳ್ಳಿಯ ಜೆ.ರುದ್ರೇಶ್ (39), ಮೈಸೂರು ಜಿಲ್ಲೆ ಟಿ.ನರಸೀಪುರ ಹೋಬಳಿ ಮಾಕನಹಳ್ಳಿಯ ಮನೋಜ್ ಗೌಡ(21) ಮತ್ತು ಕೆ.ಆರ್.ನಗರ ತಾಲ್ಲೂಕಿನ ಬೋರೆ ಕಲ್ಲಹಳ್ಳಿ ಗ್ರಾಮದ ಸಂದೀಪ್(30), ಹೊಳಲ್ಕೆರೆ ತಾಲ್ಲೂಕು ಲಂಬಾಣಿಹಟ್ಟಿ ಕೃಷ್ಣನಾಯ್ಕ (28) ಬಂಧಿತ ಆರೋಪಿಗಳು ಎಂದು ಹೇಳಿದರು.

ಹರಿಹರ ತಾಲ್ಲೂಕಿನ ಹನಗವಾಡಿ ಬಳಿಯ ಸೇವಾ ರಸ್ತೆಯಲ್ಲಿ ಜ.17 ರಂದು ಅಪರಿಚಿತ ಇಬ್ಬರು ವ್ಯಕ್ತಿಗಳು ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದ ಮಾಹಿತಿ ಮೇರೆಗೆ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತಳವಾರ ಕುಬೇರಪ್ಪ ಮತ್ತು ಹರೀಶ್ ಗೌಡ ಅವರನ್ನು ಬಂಧಿಸಿ 500 ರೂ ಮುಖ ಬೆಲೆಯ 37 ಸಾವಿರ ರೂ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು.ಈ ಇಬ್ಬರು ನೀಡಿದ ಮಾಹಿತಿ ಆಧರಿಸಿ ಜ.18 ರಂದು ಬಾಡಾ ಕ್ರಾಸ್ ಬಳಿ ಜೆ.ರುದ್ರೇಶ್, ಮನೋಜ್ ಗೌಡ, ಸಂದೀಪ ಮತ್ತು ಕೃಷ್ಣನಾಯ್ಕ ಅವರನ್ನು ಬಂಧಿಸಿ 500 ರೂ ಮುಖ ಬೆಲೆಯ 9 ಸಾವಿರ ರೂ ಬೆಲೆಯ ಖೋಟಾ ನೋಟು, ಕೃತ್ಯಕ್ಕೆ ಉಪಯೋಗಿಸಿದ 1 ಲಕ್ಷ ಮೌಲ್ಯದ ಕಾರು, ನೋಟು ತಯಾರಿಕೆಗೆ ಬಳಸುತ್ತಿದ್ದ ಅನೇಕ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಎಂಬಿಎ ಪದವೀಧರ
ಕೋಳಿಫಾರಂ ವ್ಯವಹಾರ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಕೂರಗಳ್ಳಿ ಗ್ರಾಮದ ಜೆ.ರುದ್ರೇಶ್ ಎಂಬಿಎ ಪದವೀಧರ. ಕೋವಿಡ್ ನಂತರ ಕೋಳಿಫಾರಂ ವ್ಯವಹಾರ ನಷ್ಟವಾದ ಹಿನ್ನೆಲೆಯಲ್ಲಿ ಈ ದಂಧೆಗೆ ಇಳಿದಿದ್ದ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಈತ ಕೊರಗಳ್ಳಿ ಮೇಗಲ ಕೊಪ್ಪಲುವಿನಲ್ಲಿ ಬಾಡಿಗೆ ಮನೆ ಪಡೆದು ಈ ದಂಧೆ ಮಾಡುತ್ತಿದ್ದರು. ಈ ಮನೆಯ ಮೇಲೆ ದಾಳಿ ನಡೆಸಿದಾಗ 500 ಮತ್ತು 200 ಮುಖ ಬೆಲೆಯ 50 ಸಾವಿರಕ್ಕೂ ಅಧಿಕ ನೋಟು ವಶಪಡಿಸಿಕೊಳ್ಳಲಾಗಿದೆ ಎಂದರು.

40 ಲಕ್ಷಕ್ಕೂ ಅಧಿಕ ನೋಟುಗಳ ಮುದ್ರಣ
ಬಂಧಿತರು ಕಳೆದ ಮೂರು ತಿಂಗಳಿನಿಂದ ಈ ದಂಧೆ ಮಾಡುತ್ತಿದ್ದು, ಇದುವರೆಗೂ 40 ಲಕ್ಷಕ್ಕೂ ಅಧಿಕ ನೋಟುಗಳನ್ನು ಮುದ್ರಣ ಮಾಡಿದ್ದಾರೆ. ಈ ಪೈಕಿ 13 ಲಕ್ಷಕ್ಕೂ ಹೆಚ್ಚು ಹಣವನ್ನು ಸಂತೆಗಳು, ಸಮಾರಂಭಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಈಗಾಗಲೇ ಚಲಾವಣೆ ಮಾಡಿರುವುದಾಗಿ ವಿಚಾರಣೆವೇಳೆ ಒಪ್ಪಿಕೊಂಡಿದ್ದಾರೆ. ಲ್ಯಾಪ್ ಟಾಪ್ಗಳು, ಕಲರ್ ಪ್ರಿಂಟರ್ಗಳು, ಪೇಪರ್ ಕಟ್ಟರ್, ಬಣ್ಣದ ಬಾಟಲಿಗಳು ಸೇರಿದಂತೆ 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದರು.
ರಾತ್ರಿ ವೇಳೆ ಚಲಾವಣೆ
ಖೋಟಾ ನೋಟು ಪ್ರಿಂಟ್ ಮಾಡಿದ ,ನಂತರ ರಾತ್ರಿ ವೇಳೆ ಬಾರ್, ಹೋಟೆಲ್ ಸೇರಿದಂತೆ ಹೆಚ್ಚು ಜನ ಇರುವ ಪ್ರದೇಶದಲ್ಲಿ ಚಲಾವಣೆ ಮಾಡುತ್ತಿದ್ದರು. ಇದಕ್ಕಾಗಿಯೇ ಒಬ್ಬ ವ್ಯಕ್ತಿ ನೇಮಿಸಿದ್ದು, ಅವನು ಈ ಕೆಲಸ ಮಾಡುತ್ತಿದ್ದ ಎಂದು ಎಸ್ಪಿ ಹೇಳಿದರು.
ಖೋಟಾ ನೋಟು ಕೊಟ್ಟು ಚಿಲ್ಲರೇ ತೆಗೆದುಕೊಳ್ಳುತ್ತಿದ್ದರು.
ಎರಡು ಸಾವಿರ ಮುಖ ಬೆಲೆಯ ನೋಟು ಪ್ರಿಂಟ್ ಹಾಕಿದರೆ ಗೊತ್ತಾಗುತ್ತದೆ ಎಂದು ಐದನೂರು ರೂ. ಹಾಗೂ 200 ರೂ .ಮುಖಬೆಲೆಯ ಪ್ರಿಂಟ್ ಹಾಕುತ್ತಿದ್ದರು. ಈ ಹಣವನ್ನು ಜನನಿಬಿಡ ಪ್ರದೇಶದಲ್ಲಿ ನೀಡಿ ಚಿಲ್ಲರೇ ಹಣವನ್ನು ತೆಗೆದುಕೊಳ್ಳುತ್ತಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.
ಹಳೆ ದಂಧೆಕೋರರು
ಖೋಟಾನೋಟುಗಳ ಮೂಲವನ್ನು ಹುಡುಕಿಕೊಂಡು ಹೋದಾಗ ತಳವಾರ ಕುಬೇರಪ್ಪ ಹಾಗೂ ರುದ್ರೇಶ್, ಮುಖ್ಯ ಆರೋಪಿಗಳು ಎಂಬುದು ಗೊತ್ತಾಗಿದೆ. ಇವರಿಬ್ಬರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಖೋಟಾ ನೋಟು ಮುದ್ರಿಸಿ ಅಸಲಿ ನೋಟುಗಳ ಜೊತೆ ಸೇರಿಸಿ ಸಂತೆ, ಜಾತ್ರೆ, ಜನಸಂದಣಿ ಇರುವ ಅಂಗಡಿಗಳು ಹಾಗೂ ರಾತ್ರಿ ವೇಳೆ ಚಲಾವಣೆ ಮಾಡಿ ಬರುತ್ತಿದ್ದರು. ನಕಲಿ ನೋಟು ನೀಡಿ ಚಿಲ್ಲರೆ ಪಡೆಯುತ್ತಿದ್ದರು ಎಂದು ಎಸ್ಪಿ ವಿವರಣೆ ನೀಡಿದರು.
ಭದ್ರಾವತಿಯ ರುದ್ರೇಶ್ ನೇ ಕಿಂಗ್ ಪಿನ್
ಭದ್ರಾವತಿಯ‘ರುದ್ರೇಶ್ ತಾಂತ್ರಿಕ ಕೌಶಲಗಳನ್ನು ರೂಢಿಸಿಕೊಂಡಿದ್ದ. ಈತ ನೋಟುಗಳನ್ನು ಸ್ಕ್ಯಾನ್ ಮಾಡಿ ಮುಖಬೆಲೆಯನ್ನು ಬರೆಯುವ ಕೌಶಲ ಹೊಂದಿದ್ದ.
ರುದ್ರೇಶ್ ಆರಂಭದಲ್ಲಿ ಕೋಳಿಫಾರಂ ಇಟ್ಟುಕೊಂಡಿದ್ದು, ಜಮೀನಿನ ಪಕ್ಕದಲ್ಲೇ ಇದ್ದ ತಳವಾರ್ ಕುಬೇರಪ್ಪ ಅವನ ಪರಿಚಯವಾಗಿ ಈ ದಂಧೆಗೆ ಇಳಿದಿದ್ದಾರೆ. ರುದ್ರೇಶ್ ತಾಂತ್ರಿಕ ಕೆಲಸಗಳನ್ನು ಮಾಡಿದರೆ ಮನೋಜ್ ಹಾಗೂ ಸಂದೀಪ್ ನಕಲಿ ನೋಟು ಮುದ್ರಣಕ್ಕೆ ಸಹಾಯ ಮಾಡುತ್ತಿದ್ದರು. ತಳವಾರ್ ಕುಬೇರಪ್ಪ ಹಾಗೂ ಹರೀಶ್, ಕೃಷ್ಣನಾಯಕ್ ಹಣ ಚಲಾವಣೆ ಕಾರ್ಯದಲ್ಲಿ ನಿರತರಾಗಿದ್ದರು ಎಂದು ಎಸ್ಪಿ ಹೇಳಿದರು.
ಯೂಟ್ಯೂಬ್ ನೋಡಿ ಪ್ರಿಂಟ್
‘ಕೆಲಸ ಇಲ್ಲದೇ ಇದ್ದಾಗ ಕಂಪ್ಯೂಟರ್ನಲ್ಲಿ ಪಾಪ್ ಆಫ್ ನೋಟಿಫಿಕೇಷನ್, ಯೂಟ್ಯೂಬ್ನಲ್ಲಿ ನೋಡಿ ಈತ ನೋಟು ಮುದ್ರಣ ಕಲೆಯನ್ನು ಕಲಿತಿದ್ದ. ಮುದ್ರಣಕ್ಕೆ ಬೇಕಾಗುವ ಪರಿಕರಗಳನ್ನು ಬೆಂಗಳೂರಿನಲ್ಲಿ ಖರೀದಿಸಿದ್ದಾರೆ. ಆರೋಪಿಗಳ ಜೊತೆ ಬೇರೆಯವರೂ ಶಾಮೀಲಾಗಿದ್ದಾರಾ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆಂದು ಎಸ್ಪಿ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಹರಿಹರ ಸಿ.ಪಿ.ಐ ಸುರೇಶ ಸಗರಿ, ಹರಿಹರ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಬಿ.ಎಸ್ ಅರವಿಂದ್, ಅಬ್ದುಲ್ ಖಾದರ್ ಜಿಲಾನಿ, ದಾವಣಗೆರೆ ಡಿ.ಸಿ.ಆರ್.ಬಿ ವಿಭಾಗದ ಸಿಬ್ಬಂದಿಗಳಾದ ಮಜೀದ್, ಅಂಜನೇಯ, ರಾಘವೇಂದ್ರ, ರಮೇಶ್ ನಾಯ್ಕ, ಬಾಲರಾಜ್. ಹರಿಹರ ವೃತ್ತ ಕಛೇರಿಯ ಮಹ್ಮದ್ ಇಲಿಯಾಜ್, ನಾಗರಾಜ, ಮುರುಳಿಧರ, ಹರಿಹರ ಗ್ರಾಮಾಂತರ ಠಾಣೆಯ ಸಿಬ್ಬಂದಿಯವರಾದ ರಮೇಶ್, ನೀಲಮೂರ್ತಿ, ಬಣಕಾರ ಶ್ರೀಧರ, ಗಂಗಾಧರ, ಸಿದ್ದಪ್ಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಜಾಧವ್, ರಾಘವೇಂದ್ರ, ಶಾಂತ್ಕುಮಾರ ಭಾಗವಹಿಸಿದ್ದರು ಎಂದು ಅವರು ಹೇಳಿದರು.