ದಾವಣಗೆರೆ : ನಿನ್ನೆ ಹೊಳೆನರಸೀಪುರದ JDS ಶಾಸಕ ಹೆಚ್ಡಿ ರೇವಣ್ಣ ಅರೆಸ್ಟ್ ಆಗಿದ್ದೇ ತಡ, ಇವರ ಪುತ್ರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಕಾಲ್ಕಿತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ಹಾಗಾದ್ರೆ ತಪ್ಪು ಮಾಡದಿದ್ರೆ ಪ್ರಜ್ವಲ್ ರೇವಣ್ಣ ಹೆದರೋದ್ಯಾಕೆ.? ಈಗ ಅದ್ಯಾವ ದೇಶದಲ್ಲಿ ಅಡಗಿ ಕೂತಿದ್ದಾರೆ.? SIT ಅಧಿಕಾರಿಗಳಿಗೆ ಸಿಕ್ಕ ಸ್ಫೋಟಕ ಮಾಹಿತಿ ಏನ್ ಗೊತ್ತಾ.?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಎಚ್ಡಿ ರೇವಣ್ಣ ಅವರನ್ನು ಎಸ್ಐಟಿ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಜರ್ಮನಿಯಲ್ಲಿದ್ದ ಪ್ರಜ್ವಲ್ ರೇವಣ್ಣ ಇದೀಗ ಬೇರೆ ದೇಶಕ್ಕೆ ಹಾರಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಹಾಗಾದರೆ, ಪ್ರಜ್ವಲ್ ರೇವಣ್ಣ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗ್ತಾಯಿರೋದ್ಯಾಕೆ.? ಪ್ರಜ್ವಲ್ ಯಾವುದೇ ದೇಶದರ್ಲಿ, ಯಾವ ಮೂಲೆಯಲ್ಲೇ ಇರ್ಲಿ, ಅವರನ್ನ ಹುಡುಕಿ ಅರೆಸ್ಟ್ ಮಾಡ್ತೀವಿ ಅಂತೇಳಿ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳ್ತಿದ್ದಾರೆ. ನಿಮಗೆ ಗೊತ್ತಿರ್ಲಿ, ಏಪ್ರಿಲ್ 18ರಂದು ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿ ಅಶ್ಲೀಲ ವಿಡಿಯೋಗಳಿರುವ ಪೆನ್ಡ್ರೈವ್ ವಿಚಾರ ಬೆಳಕಿಗೆ ಬಂದಿತ್ತು. ಆನಂತರ ಏಪ್ರಿಲ್ 26ರಂದು ಹಾಸನ ಕ್ಷೇತ್ರಕ್ಕೆ ಲೋಕಸಭಾ ಚುನಾವಣೆ ನಡೆದಿತ್ತು. ಮತದಾನ ನಡೆದ ನಂತರ ಅವತ್ತು ರಾತ್ರಿಯೇ ಅಂದ್ರೆ ಏಪ್ರಿಲ್ 27ರ ನಸುಕಿನ ಜಾವವೇ ಪ್ರಜ್ವಲ್ ಜರ್ಮನಿಗೆ ಹಾರಿದ್ರು. ಈ ನಡುವೆ ಪ್ರಜ್ವಲ್ ವಿರುದ್ಧದ ಪೆನ್ಡ್ರೈವ್ ಪ್ರಕರಣ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದ್ರಿಂದ ಕರ್ನಾಟಕ ಸರ್ಕಾರ ರಾಜ್ಯ ಮಹಿಳಾ ಆಯೋಗ ಒತ್ತಾಯದ ಮೇರೆಗೆ ಪೆನ್ಡ್ರೈವ್ ಪ್ರಕರಣವನ್ನು ಎಸ್ಐಟಿಗೆ ವಹಿಸಿತ್ತು.
ತನಿಖೆ ಕೈಗೆತ್ತಿಕೊಂಡಿರೋ SIT ಅಧಿಕಾರಿಗಳು ಇದೀಗ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದಾರೆ. ಅದರಂತೆ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ದುಬೈಗೆ ಹಾರಿ ಅಲ್ಲಿಂದ ಇನ್ನೊಂದು ದೇಶಕ್ಕೆ ಹಾರಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಅಷ್ಟಕ್ಕೂ ಏನಿದು ಬ್ಲೂ ಕಾರ್ನರ್ ನೋಟಿಸ್ ಅಂದ್ರಾ.? ವಿದೇಶಗಳಲ್ಲಿರುವ ಆರೋಪಿಗಳ ಬಂಧನಕ್ಕಾಗಿ ಸಾಮಾನ್ಯವಾಗಿ ಸಿಬಿಐ ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೋಟಿಸ್ಗಳನ್ನು ಹೊರಡಿಸುತ್ತವೆ. ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತಿದೆ. ರೆಡ್ ಕಾರ್ನರ್ ನೋಟಿಸ್ ಅಂದರೆ, ಪ್ರಪಂಚದ ಯಾವುದೇ ಕಡೆಯಲ್ಲಿರುವ ಆರೋಪಿ ಅಥವಾ ಅಪರಾಧಿಯನ್ನು ಹಸ್ತಾಂತರಿಸಲು ಅಥವಾ ಅಂತಹುದೇ ಕಾನೂನು ಕ್ರಮ ಕೈಗೊಳ್ಳಲು ಮಾಡುವ ವಿನಂತಿಯಾಗಿದೆ. ಮತ್ತೊಂದೆಡೆಯಲ್ಲಿ, ಬ್ಲೂ ಕಾರ್ನರ್ ಮೂಲಕ ಇಂಟರ್ಪೋಲ್ ವಿದೇಶಿ ಸಂಸ್ಥೆಗಳ ಸಹಯೋಗದೊಂದಿಗೆ ಅಪರಾಧಿ / ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತದೆ. ಅಂದರೆ, ಇಂಟರ್ಪೋಲ್ ತನ್ನ ಯಾವುದೇ ಸದಸ್ಯ ರಾಷ್ಟ್ರದಿಂದ ಬ್ಲೂ ಕಾರ್ನರ್ ನೋಟಿಸ್ ಅನ್ನು ಜಾರಿಗೊಳಿಸಿ ಅಪರಾಧಿಯ ಗುರುತು, ಸ್ಥಳ ಅಥವಾ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿ ಕೆಲವು ದಿನಗಳ ಹಿಂದಷ್ಟೇ ಲುಕ್ಔಟ್ ನೋಟಿಸ್ ಜಾರಿಗೊಳಿಸಿತ್ತು. ಯಾವುದೇ ಒಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅಥವಾ ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ ತನಿಖಾ ಸಂಸ್ಥೆಗಳು ಅನುಸರಿಸುವ ಕ್ರಮ ಇದಾಗಿದೆ. ಇದನ್ನು ದೇಶದ ವಲಸೆ ಬ್ಯೂರೋ ಹಾಗೂ ಗೃಹ ಸಚಿವಾಲಯ ಮಾತ್ರ ನೀಡಬಹುದು. ಹೀಗಾಗಿ ರಾಜ್ಯದ SIT ತಂಡ ಗೃಹ ಸಚಿವಾಲಯದ ಬೆಂಬಲ ಪಡೆದಿದೆ ಎನ್ನಲಾಗುತ್ತಿದೆ. SITಗೆ ಸಿಕ್ಕಿರೋ ಮಾಹಿತಿ ಪ್ರಕಾರ ಏಪ್ರಿಲ್ 27ರಂದು ಬೆಂಗಳೂರಿನಿಂದ ಜರ್ಮನಿಗೆ ಹಾರಿದ್ದ ಪ್ರಜ್ವಲ್ ರೇವಣ್ಣ, ಆನಂತರ ದುಬೈಗೆ ತೆರಳಿದ್ರು. ಆದ್ರೀಗ ಆ ದೇಶದಲ್ಲಿ ಇರದೇ ಹಂಗೇರಿಯ ಬಡಾಪೆಸ್ಟ್ನಲ್ಲಿ ತಂಗಿದ್ದಾರೆ ಎನ್ನಲಾಗುತ್ತಿದೆ. ಅಂದ್ರೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕಾಲ್ಕಿತ್ತಿದ್ದಾರೆ. ತಮ್ಮ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಜಾರಿಯಾಗುತ್ತೆ ಅನ್ನೋ ಭಯದಿಂದ ಜರ್ಮನಿಯಿಂದ ತೆರಳಿದ್ದಾರೆ ಅನ್ನೋ ಮಾತುಗಳು ಹರಿದಾಡ್ತಾಯಿವೆ. ಸದ್ಯಕ್ಕೆ ಎಸ್ಐಟಿ ನೋಟಿಸ್ ನೀಡಿತ್ತು. ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಲು ಏಳು ದಿನ ಕಾಲಾವಕಾಶ ಕೋರಿದ್ದಾರೆ. ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ಎಂಟ್ರಿಯ ಮಾಹಿತಿ ಬಗ್ಗೆ ಸುಳಿವು ಪತ್ತೆ ಮಾಡಿದ್ದಾರೆ. ಪಾಸ್ಪೋರ್ಟ್ ಎಲ್ಲಿ ಎಂಟ್ರಿ ಆಗಿದೆ ಎಂಬುದರ ಮಾಹಿತಿ ಮೇರೆಗೆ ಪ್ರಜ್ವಲ್ ಇದೀಗ ಹಂಗೇರಿಯಲ್ಲಿದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಹಾಗಾದ್ರೆ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ಕೊಂಡೇ ತಮ್ಮ ಮೇಲಿನ ಪ್ರಕರಣಗಳ ಇತ್ಯರ್ಥಕ್ಕೆ ಲಾಯರ್ಗಳ ಮೊರೆ ಹೋದ್ರಾ..? ನಿನ್ನ ಪ್ರಜ್ವಲ್ ತಂದೆ ಹೆಚ್ಡಿ ರೇವಣ್ಣ ಅರೆಸ್ಟ್ ಆಗಿರೋದು ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ ಮತ್ತಷ್ಟು ಕಾಂಪ್ಲಿಕೇಟೆಡ್ ಆಗಿ ಮಾರ್ಪಡುವಂತೆ ಮಾಡ್ತಾ?