ಸಿದ್ದರಾಮಯ್ಯ ಅವರು ಸತ್ಯಾಸತ್ಯತೆ ಯನ್ನು ಜನರ ಮುಂದಿಡಲು ವಿಶೇಷ ತನಿಖಾ ತಂಡ ರಚಿಸಿ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯ.
ದಾವಣಗೆರೆ:
ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್ ಕಮಲ ಮಾಡುತ್ತಿರುವುದಾಗಿ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತ್ಯಾಸತ್ಯತೆ ಯನ್ನು ಜನರ ಮುಂದಿಡಲು ವಿಶೇಷ ತನಿಖಾ ತಂಡ (ಎಸ್ಐಟಿ) ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ವೊಂದನ್ನು ರಚಿಸಿ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.
‘ಕಾಂಗ್ರೆಸ್ಗೆ ರಾಜ್ಯದ ಜನರು ಜನಾದೇಶ ನೀಡಿದ್ದಾರೆ. ಇದನ್ನು ಬಿಜೆಪಿ ಗೌರವಿಸುತ್ತಿದೆ. ಆಡಳಿತ ಪಕ್ಷವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಿಲ್ಲ. ಪ್ರತಿಪಕ್ಷವಾಗಿ ನಮ್ಮ ಕರ್ತವ್ಯ ಮಾತ್ರ ಮಾಡುತ್ತಿದ್ದೇವೆ. ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡಿ’ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಎಸೆದರು.
‘ತನಿಖಾ ಸಂಸ್ಥೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇವೆ. ಆರೋಪ ಕುರಿತು ಪ್ರಕರಣ ದಾಖಲಿಸಿ, ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಿದವರನ್ನು ಬಂಧಿಸಿ. ರಾಜ್ಯ ಸರ್ಕಾರಕ್ಕೆ ಇದು ಸಾಧ್ಯವಾಗದೇ ಇದ್ದರೆ ಸಿಬಿಐ ಅಥವಾ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿ’ ಎಂದು ಆಗ್ರಹಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡವಳಿಕೆಯನ್ನು ಜನರು ಗಮನಿಸುತ್ತಿದ್ದಾರೆ. ಬುಟ್ಟಿಯಲ್ಲಿ ಹಾವಿದೆ ಎಂದು ಹೆದರಿಸುವ ಪ್ರಯತ್ನ ಮಾಡಬೇಡಿ. ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಧರ್ಮಸ್ಥಳ, ನೊಣವಿನಕೆರೆ ಅಜ್ಜಯ್ಯ ಅಥವಾ ಚಾಮುಂಡಿ ಸನ್ನಿಧಿಗೆ ಬನ್ನಿ’ ಎಂದು ಸವಾಲು ಎಸೆದರು.