ದಾವಣಗೆರೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಲು ಸೂಚಿಸಬೇಕು ಇಲ್ಲದಿದ್ದರೆ ಅಮಿತ್ ಶಾ ಅವರನ್ನು ಈ ಕೂಡಲೇ ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಆಗ್ರಹಿಸಿದರು.
ನಗರದ ಗೃಹ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯ ನೇತೃತ್ವ ವಹಿಸಿ ಮಾತನಾಡಿದ ಅವರು ಸಂವಿದಾನ ರಚನೆ ಮಾಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ಅವಹೇಳನ ಮಾಡಲಾಗಿದೆ ಎಂದು ದೂರಿದರು.
ಅಮಿತ್ ಶಾ ರವರಿಗೆ ಪೂಜ್ಯ ಡಾ.ಬಾಬಾಸಾಹೇಬರ ಮೇಲೆ ದ್ವೇಷ ಇದೆ. ಇದು ಸದನದಲ್ಲಿ ಅವರು ಮಾತನಾಡಿದ ಬಗೆಯಲ್ಲಿಯೇ ತಿಳಿದು ಬಂದಿದೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಇಲ್ಲವಾ ಅವರು ರಾಜೀನಾಮೆ ಪಡೆಯಬೇಕು ಎಂದರು.
ಭಾರತದ ಸಂವಿಧಾನದ ಶಿಲ್ಪಿಯಾದ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ನಿಜವಾದ ಗೌರವ ಇದ್ದರೆ ಅಮಿತ್ ಷಾ ಅವರನ್ನು ಪ್ರಧಾನಮಂತ್ರಿಗಳು ತಮ್ಮ ಸಚಿವ ಸಂಪುಟದಿಂದ ತಕ್ಷಣವೇ ವಜಾಗೊಳಿಸಲಿ ಎಂದು ಆಗ್ರಹಿಸಿದ ಸಂಸದರು,
ಬಾಬಾಸಾಹೇಬ್ ಬಗ್ಗೆ ಅಮಿತ್ ಶಾ ಅವರ ಹೇಳಿಕೆಯು ಅಗೌರವ ಮಾತ್ರವಲ್ಲದೆ ಸಂವಿಧಾನದ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಬಹಿರಂಗಪಡಿಸಿದೆ “ಬಾಬಾಸಾಹೇಬ್ ಬಗ್ಗೆ ಸಂಸತ್ತಿನಲ್ಲಿ ಅಮಿತ್ ಶಾ ನೀಡಿದ ಹೇಳಿಕೆ ಇಡೀ ದೇಶವನ್ನು ದಂಗುಬಡಿಸುವಂತೆ ಮಾಡಿದೆ. “ಅಂಬೇಡ್ಕರ್-ಅಂಬೇಡ್ಕರ್ ಎಂದು ಜಪ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ’ ಎಂಬ ಅವರ ಹೇಳಿಕೆ ಅಗೌರವ ಮಾತ್ರವಲ್ಲ, ಬಾಬಾಸಾಹೇಬ್ ಮತ್ತು ನಮ್ಮ ಸಂವಿಧಾನದ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಬಹಿರಂಗಪಡಿಸುತ್ತದೆ ಎಂದು ಕಿಡಿಕಾರಿದರು.
“ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿರುದ್ಧ ಇಂತಹ ಹೇಳಿಕೆ ನೀಡಲು ಬಿಜೆಪಿಗೆ ಹೇಗೆ ಧೈರ್ಯ ಬಂತು? ಇದು ದೇಶಾದ್ಯಂತ ಕೋಟ್ಯಾಂತರ ಜನರ ಭಾವನೆಗಳನ್ನು ಘಾಸಿಗೊಳಿಸಿದೆ” ಡಾ|| ಬಿ.ಆರ್ ಅಂಬೇಡ್ಕರ್ರವರನ್ನು ಹಾಗೂ ಸಂವಿಧಾನವನ್ನು ನಾವುಗಳು ಪ್ರತಿಪಾದನೆ ಮಾಡದೆ ಮತ್ತಿನ್ಯಾರು ಮಾಡಲು ಸಾಧ್ಯ. ಅಂಬೇಡ್ಕರ್ ಅವರು ನಮಗೆ ಸಂವಿಧಾನ ಕೊಟ್ಟವರು. ಅವರಿಗೆ ನಾವೆಲ್ಲ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದು ಪ್ರತಿಪಾದಿಸುತ್ತೇವೆ. ಇದನ್ನು ಪ್ರಶ್ನಿಸುವವರು ಅಧಿಕಾರದಲ್ಲಿ ಇರಬಾರದು ಅವರನ್ನು ಈ ಕೂಡಲೇ ಪದಚ್ಯುತಿಗೊಳಿಸಬೇಕು ಹಾಗೂ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಸಂಸದರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಸವಂತಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪ, ಎಸ್ಸಿ ಮೋರ್ಚಾದ ಅಧ್ಯಕ್ಷ ವೀರಭದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮೇಯರ್ ಚಮನ್ ಸಾಬ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಹರಿಹರದ ನಂದಿಗಾವಿ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಮಹಿಳಾ ಮುಖಂಡರುಗಳು, ಇತರರು ಇದ್ದರು