ಯಾವುದೇ ತಿಂಗಳಿನ 9, 18 ಹಾಗೂ 27ನೇ ತಾರೀಕಿನಂದು ಹುಟ್ಟಿದ್ದಲ್ಲಿ ಅಂಥವರ ಜನ್ಮಸಂಖ್ಯೆ 9 ಆಗುತ್ತದೆ. ಕುಜ ಗ್ರಹ ಈ ಸಂಖ್ಯೆಯ ಅಧಿಪತ್ಯ ಹೊಂದಿರುತ್ತದೆ
*9ನೇ ತಾರೀಕಿನಂದು* ಹುಟ್ಟಿದವರ ಮೇಲೆ ಕುಜ ಗ್ರಹದ ಪ್ರಭಾವ ಮಾತ್ರ ಇರುತ್ತದೆ.
*18ನೇ ತಾರೀಕಿನಂದು* ಹುಟ್ಟಿದವರ ಮೇಲೆ ರವಿ, ಶನಿ ಹಾಗೂ ಕುಜ ಈ ಗ್ರಹಗಳ ಪ್ರಭಾವ ಇರುತ್ತದೆ
*27ನೇ ತಾರೀಕಿನಂದು* ಹುಟ್ಟಿದವರ ಮೇಲೆ ಚಂದ್ರ, ಕೇತು ಹಾಗೂ ಕುಜ ಗ್ರಹದ ಪ್ರಭಾವ ಇರುತ್ತದೆ. ಈ ಸಂಖ್ಯೆಯನ್ನು ಪರಿಪೂರ್ಣತೆಯ ಸಂಕೇತ ಎಂದು ಕರೆಯಲಾಗುತ್ತದೆ.
9ರ ಸಂಖ್ಯೆಯವರು ಒಂದು ಕೆಲಸ ಮುಗಿಯುತ್ತಿದ್ದಂತೆ ಮತ್ತೊಂದಕ್ಕೆ ಸಿದ್ಧತೆ ಮಾಡತೊಡಗುತ್ತಾರೆ. ಆ ಕೆಲಸವೇ ಇವರ ಪಾಲಿನ ಬಿಡುವು. ಒಂದು ವೇಳೆ ಬಿಡುವು ಸಿಕ್ಕರೆ ಅದು ಶಿಕ್ಷೆಯಂತೆ ಕಾಣುತ್ತದೆ. ಧಾರ್ಮಿಕ ಸಂಗತಿಗಳಲ್ಲೂ ಆಸಕ್ತಿ ಇರುವ ಇವರು ವಿವಿಧ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಲೇ ಇರುತ್ತಾರೆ. ಹಾಗೆ ತಮಗೆ ಸಿಕ್ಕ ಉತ್ತರವನ್ನು ಇಡೀ ಜಗತ್ತಿನೊಂದಿಗೆ ಹಂಚಿಕೊಳ್ಳುತ್ತಾರೆ.
9ರ ಸಂಖ್ಯೆಯಲ್ಲಿ ಹುಟ್ಟಿದವರ ಹೃದಯದಲ್ಲಿ ಮಾನವೀಯತೆ ಇರುತ್ತದೆ. ಇತರರ ಬಗ್ಗೆ ಅನುಕಂಪ, ಔದಾರ್ಯ ಮತ್ತು ತಮ್ಮೆಲ್ಲ ಶ್ರಮವನ್ನೂ ಹಾಕಿ ಒಳ್ಳೆಯದನ್ನು ಮಾಡಬೇಕು ಎಂಬ ಉದ್ದೇಶ ಸಹ ಇರುತ್ತದೆ. ಬಹಳ ಬುದ್ಧಿವಂತ, ಬಲಶಾಲಿ ಹೀಗೆ ಎರಡೂ ಬಗೆಯ ಕಾಂಬಿನೇಷನ್ನಲ್ಲಿ ಸಿಗುವಂಥ ಸಂಖ್ಯೆ ಇದು. ಹಾಗಂತ ಈ ಗುಣಗಳು ಇವರಿಗೆ ಹಾಗೇ ಸುಮ್ಮನೆ ಬರುವುದಿಲ್ಲ. ಇವರು ರೂಢಿಸಿಕೊಳ್ಳುತ್ತಾರೆ.
ಅದೆಂಥದ್ದೇ ಸಂಕಷ್ಟವೇ ಆದರೂ ತಾವೇ ಎದುರಿಸುತ್ತಾರೆ. ಬೇರೆಯವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಜಾಯಮಾನ ಇವರದಲ್ಲ.
ಇವರ ಜೀವನ ಅನುಭವದ ಮೂಲಕ ಜ್ಞಾನದ ಮೌಲ್ಯವನ್ನು ತುಂಬ ಚೆನ್ನಾಗಿ ಅರಿತಿರುತ್ತಾರೆ. ಇತರರಿಗೆ ಉತ್ತಮ ಸ್ಥಾನಕ್ಕೆ ಏರಲು ತಮ್ಮಿಂದಾದ ಸಹಾಯವನ್ನೂ ಮಾಡುತ್ತಾರೆ.
ಇತರರಿಗೆ ಕೆಲಸ ಹೇಳುವ ಬದಲಿಗೆ ಅದನ್ನು ಮೊದಲು ತಾವೇ ಮಾಡಲು ಶುರು ಮಾಡುತ್ತಾರೆ. ಕಷ್ಟದ ಸನ್ನಿವೇಶವನ್ನು ಹೇಗೆ ಎದುರಿಸುವುದು ಎಂಬುದನ್ನು ಇವರನ್ನು ನೋಡಿ ಕಲಿಯಬೇಕು ಎಂದಿರುತ್ತದೆ
ಎಲ್ಲರನ್ನೂ ಸಮಾನವಾಗಿ ನೋಡುತ್ತಾರೆ. ಯಾರೋ ಒಬ್ಬರ ಪರವಾಗಿ ವಾಲುವ ಜಾಯಮಾನ ಇವರದಲ್ಲ. ಪ್ರತಿಯೊಬ್ಬರನ್ನೂ ಗೌರವಯುತವಾಗಿ ಕಾಣುವ ಇವರು, ವ್ಯಕ್ತಿಗತವಾದ ಸ್ನೇಹವನ್ನೂ ಕಾಪಾಡಿಕೊಳ್ಳುತ್ತಾರೆ. ಯಾರಿಗಾದರೂ ಸಹಾಯದ ಅಗತ್ಯ ಇದ್ದಲ್ಲಿ ಮೊದಲಿಗೆ ನೆನಪಾಗುವ ಹೆಸರು ಇವರದು ಎಂಬಂತೆ ಬದುಕುತ್ತಾರೆ.
ಸಮಯಕ್ಕೆ ಸರಿಯಾದ ಸಲಹೆ, ಕಷ್ಟದ ಸಮಯದಲ್ಲಿ ನೆರವು ನೀಡುವಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಆದರೆ, ಇವರನ್ನು ಇತರರು ಮೇಲಿಂದ ಮೇಲೆ ಘಾಸಿಗೆ ಒಳಪಡಿದುತ್ತಾರೆ. ಅವಮಾನಕ್ಕೆ ಗುರಿ ಮಾಡುತ್ತಾರೆ. ಆ ಕಾರಣಕ್ಕೆ ಕೆಲವು ಸಲ ಏಕಾಂಗಿಯಾಗಿ ಇರುವುದಕ್ಕೆ ಇಷ್ಟಪಡುತ್ತಾರೆ.
ತಮ್ಮ ಬಗ್ಗೆಯೇ ಕಾಳಜಿ ತೆಗೆದುಕೊಳ್ಳದೆ ಕೆಲವು ತ್ಯಾಗ ಮಾಡುತ್ತಾರೆ. ಆ ಕಾರಣಕ್ಕೆ ತಮ್ಮ ಜೀವನದಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಬಹಳ ಶ್ರಮಿಸಬೇಕಾಗುತ್ತದೆ. ಇವರ ಜೀವನದಲ್ಲಿ ಸುಖವಾಗಿ ಕಳೆಯುವುದಕ್ಕಿಂತ ಹೆಚ್ಚಾಗಿ ಸವಾಲು, ನೋವುಗಳು ಹೆಚ್ಚಾಗಿರುತ್ತದೆ.
ಸಂಬಂಧಗಳನ್ನು ಸರಿತೂಗಿಸಲು ಶ್ರಮ ಹಾಕುತ್ತಾರೆ. ಪದೇಪದೇ ಬರುವ ಕಷ್ಟಗಳಿಗೆ ಇವರು ಒಗ್ಗಿಹೋಗಿ, ಸ್ವಲ್ಪ ಮಟ್ಟಿಗಿನ ನಕಾರಾತ್ಮಕ ಚಿಂತನೆಯಾದರೂ ಇದ್ದೇ ಇರುತ್ತದೆ.