ಶಿವಮೊಗ್ಗ,: ನಾನು ಮೇಸ್ತ್ರಿಯಲ್ಲ ಶಾಸಕ ಎಂದು ತೀರ್ಥಹಳ್ಳಿ ಶಾಸಕ ಅರಗಜ್ಞಾನೇಂದ್ರ ಹೇಳಿದರು.ಅವರು ಇಂದು ತುಂಗಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತೀರ್ಥಹಳ್ಳಿಯ ಸರ್ಕಾರಿ ಕಟ್ಟಡಗಳು ಸೋರುತ್ತಿವೆ. ಕಳಪೆಯಾಗಿದೆ ಎಂಬ ಆರೋಪವಿದೆ ಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಗುತ್ತಿಗೆದಾರನ್ನು ಅಲ್ಲ, ಮೇಸ್ತ್ರಿಯೂ ಅಲ್ಲ, ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕೆಲವು ಕಟ್ಟಡಗಳು ಲೀಕೇಜ್ ಆಗುವುದು ಸಹಜವಾಗಿದೆ. ಹಾಗಂತ ಎಲ್ಲಾ ಕಟ್ಟಡಗಳು ಸೋರುತ್ತಿಲ್ಲ. ಎಲ್ಲವೂ ಸುರಕ್ಷಿತವಾಗಿಯೇ ಇವೆ. ರಾಜಕಾರಣಕ್ಕಾಗಿ ಆರೋಪ ಮಾಡುವುದು ಸರಿಯಲ್ಲ ಎಂದರು.

ತಾಲ್ಲೂಕು ಪಂಚಾಯತ್ ಕಟ್ಟಡ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಸಣ್ಣಪುಟ್ಟ ತೊಂದರೆಗಳು ಇರಬಹುದು. ಆದರೆ ನಾನು ನಿಂತು ಕೆಲಸ ಮಾಡಿಸಲು ಸಾಧ್ಯವಿಲ್ಲ. ಹಾಗೆಯೇ ತಡೆಗೋಡೆ ಕಟ್ಟಿದ್ದು, ಮಣ್ಣು ರಸ್ತೆಗೆ ಬರಬಾರದು ಎಂದು ಆದರೆ ಗುಡ್ಡವೇ ಕುಸಿದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಚಾರದ ಕುರಿತು ಪ್ರತಿಕ್ರಿಯಿಸಿದ ಅವರು ಡೆತ್‍ನೋಟ್‍ನಲ್ಲಿ ಸಚಿವರ ಹೆಸರು ಉಲ್ಲೇಖವಾಗಿದ್ದರೂ ಕೂಡ ಎಫ್‍ಐಆರ್‍ನಲ್ಲಿ ದಾಖಲಾಗಿಲ್ಲ. ಸರ್ಕಾರ ಅವರನ್ನು ರಕ್ಷಣೆ ಮಾಡಲು ಹೊರಟಿದೆ. ಎಸ್.ಐ.ಟಿ. ಸಂಸ್ಥೆ ರಾಜ್ಯ ಸರ್ಕಾರದ್ದೇ ಆಗಿದೆ. ಸತ್ಯ ಹೇಗೆ ಹೊರಬರಲು ಸಾಧ್ಯ. ವಾಲ್ಮೀಕಿ ನಿಗಮದ ಹಣ ಬಳ್ಳಾರಿಯ ಚುನಾವಣೆಗೆ ಬಳಕೆಯಾಗಿದೆ ಎಂದು ಈಗಾಗಲೇ ಇಡಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಹಾಗೆಯೇ ಮೂಡ ಹಗರಣ ಕೂಡ ನಮ್ಮ ಮುಂದಿದೆ. ನನ್ನ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಈಗ ಮೈತುಂಬ ಕಪ್ಪುಚುಕ್ಕೆಯೇ ಆಗಿದೆ. ಎಲ್ಲವೂ ತನಿಖೆಯಾಗಬೇಕು. ಸದನದಲ್ಲಿಯೂ ಕೂಡ ನಾವು ಇದಕ್ಕೆ ಒತ್ತಡ ಹೇರಿದ್ದೇವೆ ಎಂದರು.

ಶಾಸಕ ಚನ್ನಬಸಪ್ಪ ಮಾತನಾಡಿ, ತುಂಗ ನದಿ ಜೀವನಾಡಿ , ಇಲ್ಲಿ ಹೆಚ್ಚು ನೀರು ಸಂಗ್ರಹವಾಗಬೇಕಾಗಿದೆ, ಆದರೆ ಜಲಾಶಯ ಹೂಳು ತುಂಬಿಕೊಂಡಿದೆ. ಈ ಬಗ್ಗೆ ಮೂರು ಬಾರಿ ಚರ್ಚೆ ಮಾಡಿದ್ದೇವೆ. ಹೂಳು ತೆಗೆಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಇದಕ್ಕೆ ಹಣದ ಅವಶ್ಯಕತೆ ಇದೆ. ಹೂಳು ತೆಗೆದರೆ ನೀರು ಜಾಸ್ತಿ ನಿಲ್ಲಬಹುದಾಗಿದೆ ಎಂದರು.

Share.
Leave A Reply

Exit mobile version