ದಾವಣಗೆರೆ: ಶೀಲ ಶಂಕಿಸಿ ಲಟ್ಟಣಿಗೆ ಮತ್ತು ತರಕಾರಿ ಕತ್ತರಿಸುವ ಮರದ ತುಂಡಿನಿಂದ ಹೊಡೆದು ಹೆಂಡತಿಯನ್ನು ಕೊಲೆ ಮಾಡಿದ್ದ ನೇಪಾಳ ಮೂಲದ ರಮನ್ ಕುಮಾರ್ ಥಾಪನು ಎಂಬಾತನನ್ನು ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮದ ಕನಕ ಪೀಠದ ಹತ್ತಿರವಿರುವ ಅಕ್ಷಯ್ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಸ್ವಲ್ಪ ದೂರದಲ್ಲಿರುವ ಶಂಷೀರ್ ಅಲಿ ಬಲಿಗೇರ್ ಅವರ ಮನೆಯಲ್ಲಿ ತನ್ನ ಹೆಂಡತಿ ಶ್ರೀಮತಿ ಇಂದ್ರ ಥಾಪ ಹಾಗೂ ಇಬ್ಬರು ಮಕ್ಕಳೊಂದಿಗೆ ರಮನ್ ಕುಮಾರ ವಾಸವಾಗಿದ್ದ.
ತನ್ನ ಹೆಂಡತಿಯು ಅನೈತಿಕ ಸಂಬಂಧ ಹೊಂದಿದ್ದಾಳೆಂದು ಪದೇ ಪದೇ ಅನುಮಾನ ಪಟ್ಟು ಮಾ.21 ರಂದು ರಾತ್ರಿ ಮನೆಯಲ್ಲಿದ್ದ ಲಟ್ಟಣಿಗೆ ಮತ್ತು ತರಕಾರಿ ಕತ್ತರಿಸುವ ಮರದ ತುಂಡಿನಿಂದ ತಲೆಗೆ ಹಾಗೂ ಮೈ-ಕೈಗಳಿಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿಗಳಾದ ವಿಜಯಕುಮಾರ್.ಎಂ ಸಂತೋಷ ಮತ್ತು ಜಿ.ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಎಫ್.ಸಿದ್ದನಗೌಡರ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಸುರೇಶ ಸಗರಿ ಮತ್ತು ಸಿಬ್ಬಂದಿಗಳಾದ ರಮೇಶ್ ಜಿ.ಎನ್, ನೀಲಮೂರ್ತಿ, ಅರ್ಜುನ್, ಅನಿಲ್ನಾಯ್ಕ, ಸಿದ್ದಪ್ಪ, ರವರುಗಳು ಪ್ರಕರಣ ವರದಿಯಾಗಿ ಒಂದೇ ದಿನದಲ್ಲಿ ಆರೋಪಿತ ರಮನ್ ಕುಮಾರ್ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.