ದಾವಣಗೆರೆ: ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಸ್ಥಳದಲ್ಲಿಯೇ ದಂಡ ವಸೂಲು ಮಾಡುವ ಅಧಿಕಾರ ಪೊಲೀಸ್ ರಿಗೆ ಇಲ್ಲ ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆಯೆ ಹೊರತು, ಎಲ್ಲ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸಿಪಿಐ ಅರ್ಜುನ್ ಲಿಂಗಾರೆಡ್ಡಿ ಹೇಳಿದ್ದಾರೆ.
ಈ ಕುರಿತು ದಾವಣಗೆರೆ ವಿಜಯದೊಂದಿಗೆ ಮಾತನಾಡಿದ ಅವರು, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ದಂಡದ ಮೊತ್ತವನ್ನು ಸಂಗ್ರಹಿಸುವ ಅಧಿಕಾರ ಪೊಲೀಸರಿಗೆ ಇದೆಯಾ? ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.
ರಾಜ್ಯ ಮಟ್ಟದ ದಿನಪತ್ರಿಕೆಯೊಂದರಲ್ಲಿ ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ: ಹೈಕೋರ್ಟ್” ಎಂಬ ತಲೆಬರಹದಡಿಯಲ್ಲಿ ಪ್ರಕಟಗೊಂಡ ಸುದ್ದಿಯ ಕುರಿತು ಸ್ಪಷ್ಟನೆ ನೀಡಿರುವ ಲಿಂಗಾರೆಡ್ಡಿ, ನಾನು ಕೂಡಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ ಆಗಿ ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ಅವರಿಂದ ಸ್ಥಳದಲ್ಲಿಯೇ ದಂಡದ ಮೊತ್ತವನ್ನು ವಸೂಲಿ ಕೂಡಾ ಮಾಡುತ್ತಿದ್ದೆವು. ಹಾಗಾದರೆ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪೊಲೀಸರಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಂದ ದಂಡದ ಮೊತ್ತವನ್ನು ವಸೂಲು ಮಾಡುವ ಅಧಿಕಾರವಿಲ್ಲ ಎಂದು ಹೇಳಿದೆಯಾ? ಹಾಗೂ ಪೊಲೀಸರಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಪ್ರಕರಣ ದಾಖಲಿಸಿ ಸ್ಥಳದಲ್ಲಿ ದಂಡದ ಮೊತ್ತವನ್ನು ವಸೂಲಿ ಮಾಡುವ ಅಧಿಕಾರ ಇದೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ನನ್ನ ತಲೆಯಲ್ಲಿ ಈ ತರಹದ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡವು.
ಕೂಡಲೇ ನಾನು ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡಕಲು ಪ್ರಾರಂಭಿಸಿದೆ ಹಾಗೂ ಕೊನೆಗೆ ಆ ಪ್ರಶ್ನೆಗೆ ಉತ್ತರವನ್ನು ಕೂಡಾ ಕಂಡು ಕೊಂಡೆ. ಆ ಉತ್ತರ ತಮ್ಮೆಲ್ಲರ ಜೊತೆ ಹಂಚಿಕೊಳ್ಳತ್ತಿದ್ದೇನೆ ಅಷ್ಟೆ.
ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ : ಹೈಕೋರ್ಟ್” ಎನ್ನುವ ಸುದ್ದಿಯನ್ನು ರಾಜ್ಯ ಮಟ್ಟದ ದಿನಪತ್ರಿಕೆಯೊಂದು ಕರ್ನಾಟಕದ ಉಚ್ಚ ನ್ಯಾಯಾಲಯವು “ಕೆ.ಟಿ.ನಟರಾಜು ವಿರುದ್ಧ ಕರ್ನಾಟಕ ರಾಜ್ಯ” ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿ ಆ ಸುದ್ದಿಯನ್ನು ಪ್ರಕಟಿಸಿತ್ತು.
ನಾನು ಕೂಡಲೇ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಸದರಿ ತೀರ್ಪಿನ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಓದಲು ಪ್ರಾರಂಭಿಸಿದೆ. ಸದರಿ ತೀರ್ಪಿನ ಪ್ಯಾರಾ 3 ರಲ್ಲಿ ಈ ಕೆಳಕಂಡಂತೆ ಹೇಳಲಾಗಿತ್ತು.
ಏನಿದು ಘಟನೆ
ಈ ಪ್ರಕರಣವು ಬೆಂಗಳೂರು ನಗರದ ದೊಡ್ಡನೆಕ್ಕುಂಡಿಯ ಹತ್ತಿರದ ಬಿಗ್ ಬಜಾರ ಬಳಿ ನಿಲ್ಲಿಸಿದ್ದ ಕಾರಿಗೆ ಹಾನಿ ಮಾಡಿ ಓಡಿಹೋಗಿದ್ದ ವ್ಯಕ್ತಿಗಳಿಗಾಗಿ HAL ಪೊಲೀಸ್ ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿರುವಾಗ ರಾತ್ರಿ 3 ಗಂಟೆ ಸಮಯದಲ್ಲಿ ಸಂಶಯಾಸ್ಪದವಾಗಿ ಮದ್ಯ ಸೇವನೆ ಮಾಡಿ ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ಮತ್ತು ಆತನ ಸ್ನೇಹಿತನನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ HAL ಪೊಲೀಸ್ ಠಾಣೆಯ ಇನ್ಸ್ ಪೆಕ್ಟರರವರ ಮೇಲೆ ಹಲ್ಲೆ ಮಾಡಿದರು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ HAL ಪೊಲೀಸರು ತಮ್ಮ ಠಾಣೆಯಲ್ಲಿ ಬೈಕ್ ಸವಾರ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣ ದಾಖಲಿಸಿ, ಅವರೇ ದಂಡ ವಿಧಿಸಿದ್ದಾರೆ (ಅರ್ಜಿದಾರರ ವಕೀಲರ ವಾದ) ನಂತರ HAL ಪೊಲೀಸ್ ಠಾಣೆಯ ಇನ್ಸ್ಪೆಕ್ಟರವರು ಅವರಿಬ್ಬರು ವಿರುದ್ಧ ಬೆಂಗಳೂರು ನಗರದ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 239 ಅಡಿಯಲ್ಲಿ ಆಪಾದಿತರು ತಮ್ಮನ್ನು ಪ್ರಕರಣದಿಂದ ಬಿಡುಗಡೆಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆರೋಪ ವಿಚಾರಣಾ ನ್ಯಾಯಾಲಯವು ವಜಾಗೊಳಿಸಿ ಆದೇಶ ಹೊರಡಿಸಿದ್ದರಿಂದ, ಅಪಾದಿತರು ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಪರಿಷ್ಕರಣಾ ಅರ್ಜಿಯನ್ನು ಹೈಕೋರ್ಟ್ನಲ್ಲಿ ಸಲ್ಲಿಸಿಕೊಳ್ಳುತ್ತಾರೆ
.ಈ ಪ್ರಕರಣದ ತೀರ್ಪಿನ ಪ್ಯಾರಾ-6 ರಲ್ಲಿ ಅರ್ಜಿದಾರರ ಪರ ವಕೀಲರು ಈ ಕೆಳಕಂಡ ರೀತಿಯಲ್ಲಿ ವಾದ ಮಂಡಿಸುತ್ತಾರೆ.ಅಂದರೆ, ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು (ಸಂಚಾರ) ರವರು ಕುಡಿದು ವಾಹನ ಚಾಲನೆ ಪ್ರಕರಣಗಳನ್ನು ದಾಖಲಿಸುವಾಗ ಅನುಸರಿಸಬೇಕಾದ ಪ್ರಮಾಣಿತ (SOP-Standard Operating Procedure) ಸುತ್ತೋಲೆ ಹೊರಡಿಸಿದ್ದು,ಅದರಲ್ಲಿ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣಗಳನ್ನು ನ್ಯಾಯಾಲಯವು ಇತ್ಯರ್ಥಗೊಳ್ಳಬೇಕಾಗಿರುವುದರಿಂದ ವಾಹನದ ಚಾಲಕನಿಗೆ ವಿಧಿಸುವ ದಂಡವನ್ನು ಘನ ನ್ಯಾಯಾಲಯವೇ ನಿರ್ಧರಿಸುತ್ತದೆ.
ಆದ್ದರಿಂದ ಯಾವುದೇ ಸಂದರ್ಭದಲ್ಲಿಯೂ ಸಹ ಸಂಚಾರ ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣಗಳಲ್ಲಿ ದಂಡವನ್ನು ಸ್ವೀಕರಿಸುವಂತಿಲ್ಲ ಮತ್ತು ಕುಡಿದು ವಾಹನ ಚಾಲನೆ ಮಾಡುವ ಪ್ರಕರಣಗಳನ್ನು ದಾಖಲಿಸಲು ಹಮ್ಮಿಕೊಳ್ಳುವ ಕಾರ್ಯಾಚರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಕ್ಯಾಮೆರಾ ಮೂಲಕ ಚಿತ್ರಿಸಿಕೊಳ್ಳಬೇಕು… ಎಂದು ತಿಳಿಸಲಾಗಿರುತ್ತದೆ.
ಈ ರೀತಿಯ ಪ್ರಕರಣಗಳಲ್ಲಿ ದಂಡವನ್ನು ಸ್ವೀಕರಿಸುವಂತಿಲ್ಲ ಮತ್ತು ಕುಡಿದು ವಾಹನ ಚಾಲನೆ ಮಾಡುವ ಪ್ರಕರಣಗಳನ್ನು ದಾಖಲಿಸಲು ಹಮ್ಮಿಕೊಳ್ಳುವ ಕಾರ್ಯಾಚರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಕ್ಯಾಮೆರಾ ಮೂಲಕ ಚಿತ್ರಿಸಿಕೊಳ್ಳಬೇಕು… ಎಂದು ತಿಳಿಸಲಾಗಿರುತ್ತದೆ ಎಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್ನಲ್ಲಿ ತಮ್ಮ ವಾದವನ್ನು ಮಂಡಿಸುತ್ತಾರೆ.ಇದೇ ಪ್ರಕರಣದ ತೀರ್ಪಿನ ಪ್ಯಾರಾ-12 ರಲ್ಲಿ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು (ಸಂಚಾರ) ರವರ ಕಚೇರಿಯಿಂದ ಹೊರಡಿಸಲಾದ ಇದೇ ಸುತ್ತೋಲೆ(ಡಿಡಿ ಕೇಸ್ ಗಳನ್ನುದಾಖಲಿಸುವಾಗ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ) ಯ XII, XIV #2 XIX ಗಳಲ್ಲಿ ಹೇಳಿರುವ ಅಂಶಗಳ ಬಗ್ಗೆ ಮತ್ತೊಮ್ಮೆ ಚರ್ಚಿಸಲಾಗಿದೆ. ಇದೇ ಪ್ರಕರಣದ ತೀರ್ಪಿನ ಪ್ಯಾರಾ-15 ರಲ್ಲಿ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು(ಸಂಚಾರ) ರವರ ಕಚೇರಿಯಿಂದ ಹೊರಡಿಸಲಾದ ಇದೇ ಸುತ್ತೋಲೆಯ (ಡಿಡಿ ಕೇಸ್ ಗಳನ್ನು ದಾಖಲಿಸುವಾಗ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ) ಬಗ್ಗೆ ಮತ್ತೊಮ್ಮೆ ಚರ್ಚಿಸಲಾಗಿದೆ.ಅಂದರೆ,ಇಲ್ಲಿಗೆ ಒಂದು ವಿಷಯವಂತು ಅರ್ಥವಾಯಿತು ಈ Cr.R.P 298/2019 ಪ್ರಕರಣದ ಪ್ಯಾರಾ-15 ರಲ್ಲಿ ಉಲ್ಲೇಖಿಸಿದ ಸುತ್ತೋಲೆಯು ಕುಡಿದು ವಾಹನ ಚಾಲನೆ ಮಾಡುವ ಪ್ರಕರಣಗಳನ್ನು (ಡಿಡಿ ಕೇಸಗಳನ್ನು) ದಾಖಲಿಸುವಾಗ ಅನುಸರಿಸಬೇಕಾದ (SOP-Standard Operating Procedure) ಸಂಬಂಧಿಸಿದ್ದು ಎಂದು. ಅಂದರೆ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲು ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲಾ, ಆದರೆ ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಮಾತ್ರ ದಂಡವನ್ನು ವಿಧಿಸುವ ಅಧಿಕಾರ ಇದೆ ಎಂದು ಇದರ ಅರ್ಥ.
ಭಾರತೀಯ ಮೋಟಾರ ವಾಹನ ಕಾಯ್ದೆ-1988 ರ ಕಲಂ 200 ಮತ್ತು ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯವು “ಕೆ.ಟಿ.ನಟರಾಜು ವಿರುದ್ಧ ಕರ್ನಾಟಕ ರಾಜ್ಯ” ಪ್ರಕರಣದ ತೀರ್ಪಿನ ಪ್ಯಾರಾ-3 ರಲ್ಲಿ ಮತ್ತು “ಪ್ರಿಯಾಂಶು ಕುಮಾರ ಮತ್ತು ಇತರರು ವಿರುದ್ಧ ಕರ್ನಾಟಕ ರಾಜ್ಯ” ಪ್ರಕರಣದ ತೀರ್ಪಿನ ಪ್ಯಾರಾ-15 ರಲ್ಲಿ ಉಲ್ಲೇಖಿಸಿಲಾದ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು (ಸಂಚಾರ) ರವರು ಹೊರಡಿಸಿರುವ ಸುತ್ತೋಲೆಯನ್ನು ಜೊತೆಯಲ್ಲಿ ಓದಿಕೊಂಡಾಗ, ಕುಡಿದು ವಾಹನ ಚಾಲನೆ ಪ್ರಕರಣಗಳಲ್ಲಿ ವಾಹನದ ಸವಾರ/ಚಾಲಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಅಧಿಕಾರವಿದೆ ಆದರೆ ಸ್ಥಳದಲ್ಲಿಯೇ ದಂಡದ ಮೊತ್ತವನ್ನು ವಾಹನ ಸವಾರ/ಚಾಲಕರರಿಂದ ವಸೂಲು ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲಾ, ಆದರೆ ಭಾರತೀಯ ಮೋಟಾರ ವಾಹನ ಕಾಯ್ದೆ -1988 ರ ಕಲಂ 200 ರಲ್ಲಿ ತಿಳಿಸಲಾದ ಇತರ ಸಂಚಾರ ನಿಯಮ ಉಲ್ಲಂಘನೆ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ವಾಹನದ ಸವಾರ/ಚಾಲಕರ ವಿರುದ್ದ ಪ್ರಕರಣ ದಾಖಲಿಸಿ, ಸ್ಥಳದಲ್ಲಿಯೇ ದಂಡದ ಮೊತ್ತವನ್ನು ವಾಹನ ಸವಾರ/ಚಾಲಕರರಿಂದ ವಸೂಲು ಮಾಡುವ ಅಧಿಕಾರವಿದೆ ಎಂದು ತಿಳಿದುಬರುತ್ತದೆ ಎಂದು ಲಿಂಗಾರೆಡ್ಡಿ ತಿಳಿಸಿದ್ದಾರೆ.