
ನಂದೀಶ್ ಭದ್ರಾವತಿ, ದಾವಣಗೆರೆ
ಇಷ್ಟು ದಿನ ಬೆಂಗಳೂರು ಸೇರಿದಂತೆ ಇತರೆಡೆ ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡರು ಈಗ ಹಳ್ಳಿಗಳತ್ತಲೂ ಮುಖ ಮಾಡುತ್ತಿದ್ದಾರೆ.
ಇವ್ರಿಗೆ ಪೊಲೀಸರ, ಮನೆಯವರ ಭಯ ಸೇರಿದಂತೆ ಯಾರ ಭಯವೂ ಇಲ್ಲ..ಕೇವಲ ಕ್ರೇಜಿಗಾಗಿ ವೀಲ್ಹಿಂಗ್ ಮಾಡುತ್ತಾ ದಾರಿಹೋಕರ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾರೆ. ಇಂತಹವರನ್ನು ಎಸ್ಪಿ ಉಮಾಪ್ರಶಾಂತ್ ನೇತೃತ್ವದಲ್ಲಿ ಎಡೆಮುರಿ ಕಟ್ಟಲಾಗುತ್ತಿದೆ.

ಹೌದು..ಬಸವಾಪಟ್ಟಣ ಪೊಲೀಸರು ದಾವಣಗೆರೆ ರಸ್ತೆಯ ಶಾಂತಿಸಾಗರ ಬಳಿ ಇರುವ ಸಿದ್ದಪ್ಪ ದೇವಾಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಚನ್ನಗಿರಿ ಪಟ್ಟಣದ ಜಮೀರ್ ಆಲಿಯಾಸ್ ಪಾಪ ವೀಲಿಂಗ್ ಮಾಡುತ್ತಿದ್ದ ಆರೋಪಿ. ಈತ ಸಾರ್ವಜನಿಕ ರಸ್ತೆಯಲ್ಲಿ ತನ್ನ ಬೈಕಿನ ಹಿಂಬದಿಯಲ್ಲಿ ಇನ್ನೊಬ್ಬನನ್ನು ಕೂರಿಸಿಕೊಂಡು ಹೆಲ್ಮೆಟ್ ಧರಿಸದೇ, ಅತೀ ವೇಗವಾಗಿ & ನಿರ್ಲಕ್ಷತನದಿಂದ ಚಾಲನೆ ಮಾಡುತ್ತಾ ಬೈಕ್ ನ ಮುಂದಿನ ಗಾಲಿಯನ್ನು ಹಾರಿಸಿಕೊಂಡು ಹಿಂಬದಿಯ ಒಂದೇ ಗಾಲಿಯಲ್ಲಿ ಚಾಲನೆ (ಬೈಕ್ ವ್ಹಿಲಿಂಗ್) ಮಾಡುತ್ತಾ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ. ಅಲ್ಲದೇ
ಸಾರ್ವಜನಿಕರಿಗೆ ತೊಂದರೆಯುಂಟಾಗುವ ರೀತಿಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದ.
ವಿಡಿಯೋ ಅಪ್ಲೋಡ್ ಮಾಡುತ್ತಿದ್ದ
ವೀಲಿಂಗ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಈ ಪೋಟೋ ವಿಡಿಯೋವನ್ನು ಪರಿಶೀಲನೆ ಮಾಡಿದಾಗ ಬೈಕ್ ಸವಾರ ಜಮೀರ್ @ ಪಾಪಾ, ಚನ್ನಗಿರಿ ಟೌನ್, ಎಂದು ತಿಳಿದು ಬಂದಿದೆ.ಸಂಚಾರ ನಿಯಮಗಳನ್ನು ಉಲ್ಲಂಘನೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುವಂತೆ ಬೈಕ್ ಸವಾರಿ ಮಾಡುತ್ತಿದ್ದ ಜಮೀರ್ @ ಪಾಪಾನ ವಿರುದ್ಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ 22/2025 ರಲ್ಲಿ ಪ್ರಕರಣ ದಾಖಲಿಸಲಾಗಿದೆ
ಯುವಕರಿಗೆ ಎಚ್ಚರಿಕೆ ನೀಡಿದ ಎಸ್ಪಿ
ದಾವಣಗೆರೆ ಜಿಲ್ಲೆಯಲ್ಲಿ ಕೆಲವು ಕಡೆ ಹುಚ್ಚು ಕ್ರೇಜ್ ಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಾಕಲು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಉಮಾಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.
ವೀಲಿಂಗ್ ಮಾಡುವರ ಸ್ಥಿತಿ ಹೇಗಿರುತ್ತದೆ?
ಪೊಲೀಸರ ಕೈಯಲ್ಲಿ ಲಾಠಿ ಏಟು ತಿನ್ನುವಾಗ ಸಾಕಪ್ಪ ಸಾಕು ಬೈಕ್ ವೀಲಿಂಗ್ ಸಹವಾಸ ಎಂದೆನಿಸುತ್ತದೆ. ಆದರೆ, ಏಟಿನ ರುಚಿ ಮಾಯವಾಗುತ್ತಿದ್ದಂತೆ ಬೈಕ್ ಮೇಲೆ ಕೂತ ತಕ್ಷಣ ಮುಂದಿನ ಚಕ್ರವನ್ನು ಗಾಳಿಯಲ್ಲಿ ಹಾರಿಸೋಣವೆಂದು ಮನಸು ಹಾತೊರೆಯುತ್ತಿರುತ್ತದೆ ಸರ್…!’ಇದು ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡನೊಬ್ಬನ ಅನುಭವ. ಸಾಮಾನ್ಯವಾಗಿ ಬಾಲ್ಯದಲ್ಲೇ ಗ್ಯಾರೆಜ್ ಸೇರಿಕೊಂಡು ಬೈಕ್ ರಿಪೇರಿ ಮಾಡುವುದರಲ್ಲಿ ಪಳಗಿದವರು ಈ ವೀಲಿಂಗ್ ಮಾಡುತ್ತಾರೆ. ‘ಬೈಕ್ ವೀಲಿಂಗ್ ಮಾಡುವ ಸ್ನೇಹಿತರು ಸಿಗುತ್ತಾರೆ. ಬಲವಂತವಾಗಿ ಕರೆದುಕೊಂಡು ಹೋಗುತ್ತಾರೆ. ಅವರಿಂದ ಬಿಡಿಸಿಕೊಂಡು ಬರಲು ಸಾಧ್ಯವಾಗುವುದಿಲ್ಲ ಎನ್ನುತ್ತಾನೆ
ಬೈಕ್ ವೀಲಿಂಗ್ ಕಲಿಕೆ ಹೇಗೆ?
ಗ್ಯಾರೆಜ್ನಲ್ಲಿ ಕೆಲಸ ಮಾಡುವವರು, ಅವರ ಸ್ನೇಹಿತರು ಹಾಗೂ ಇತ್ತೀಚಿಗೆ ಕಾಲೇಜು ಹುಡುಗರು ಇದರ ಸಹವಾಸಕ್ಕೆ ಬಿದ್ದಿದ್ದಾರೆ ಎನ್ನುವ ಆತ, 20-22ನೇ ವಯಸ್ಸಿನ ಮೇಲೆ ಯಾರು ಬೈಕ್ ವೀಲಿಂಗ್ ಕಲಿಯುವುದಿಲ್ಲ. ಏನಿದ್ದರೂ 16ನೇ ವಯಸ್ಸಿನಲ್ಲೇ ಬೈಕ್ ವೀಲಿಂಗ್ ಕಲಿಯಲು ಪ್ರಾರಂಭಿಸುತ್ತಾರೆ. ಈ ವಯಸ್ಸಿನ ಹುಡುಗರು ಮುಖ್ಯವಾಗಿ ಗ್ಯಾರೆಜ್ಗಳಲ್ಲಿ ಬೈಕ್ಗಳನ್ನು ತಮಗೆ ಹೇಗೆ ಬೇಕೊ ಹಾಗೆ ವಿನ್ಯಾಸ ಮಾಡಿಕೊಂಡು ರೋಡಿಗೆ ಇಳಿಯುತ್ತಾರೆ.
ಕಲಿಯುವಾಗ ಹೆಲ್ಮೆಟ್ ಹಾಕಿಕೊಳ್ಳುತ್ತಾರೆ. ವೀಲಿಂಗ್ ಮಾಡುವಾಗ ಪ್ರಾರಂಭದಲ್ಲಿ ಬಿದ್ದು ಕೈ-ಕಲಿಗೆ ಗಾಯ ಆಗುವುದು, ಮೂಳೆ ಮುರಿಯುವುದು ಸಾಮಾನ್ಯವಾಗಿರುತ್ತದೆ. ತಲೆಗೆ ಹೆಲ್ಮೆಟ್ ಹಾಕುವುದರಿಂದ ಪ್ರಾಣಕ್ಕೆ ಆಪಾಯ ಇರುವುದಿಲ್ಲ. ಆದರೆ, ಒಮ್ಮೆ ಬೈಕ್ ವೀಲಿಂಗ್ನಲ್ಲಿ ಹಿಡಿತ ಸಿಕ್ಕ ತಕ್ಷಣ ಹೆಲ್ಮೆಟ್ನ್ನು ಬಿಸಾಕಿ ವೀಲಿಂಗ್ ಮಾಡಲು ಪ್ರಾರಂಭಿಸುತ್ತಾರೆ’ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾನೆ.
ಅತಿಯಾದ ಆತ್ಮವಿಶ್ವಾಸ
ಬೈಕ್ ವೀಲಿಂಗ್ ಕಲಿಯಲು ಎಷ್ಟೆಲ್ಲ ಕಷ್ಟ ಪಟ್ಟಿದ್ದೇನೆ, ಏಟು ಮಾಡಿಕೊಂಡಿದ್ದೇನೆ. ಈಗ ನಾನು ಕಲಿತದ್ದನ್ನು ಎಲ್ಲರಿಗೂ ತೋರಿಸಬೇಕು. ಎಲ್ಲರ ಮುಂದೆ ಗ್ರೇಟ್ ಅನ್ನಿಸಿಕೊಳ್ಳಬೇಕೆಂಬ ಮನೋಭಾವ ಹೊಂದಿರುತ್ತಾರೆ.
ಬೈಕ್ ವೀಲಿಂಗ್ ಕಲಿತವರು ತಮ್ಮ ಬೈಕ್ ವೀಲಿಂಗ್ ಬಗ್ಗೆ ಎಷ್ಟು ಆತ್ಮವಿಶ್ವಾಸ ಇಟ್ಟಿರುತ್ತಾರೆಯೆಂದರೆ ಬೈಕ್ ವೀಲಿಂಗ್ ಮಾಡುವ ಸಂದರ್ಭದಲ್ಲಿ ತಲೆಗೆ ಹೆಲ್ಮೆಟ್ ಹಾಕುವುದು ಅವಮಾನವೆಂದು ಭಾವಿಸುತ್ತಾರೆ. ಅಂತವರು ಒಂದು ಬೈಕ್ ವೀಲಿಂಗ್ನಲ್ಲಿ ಯಶಸ್ವಿಯಾಗುತ್ತಾರೆ. ಇಲ್ಲವೆ ಸ್ಥಳದಲ್ಲೇ ಮೃತಪಡುತ್ತಾರೆ. ಇಂತಹ ಮನಸ್ಥಿತಿಯಿಂದಾಗಿಯೇ ನನ್ನ ಸ್ನೇಹಿತರೇ ಹಲವು ಮಂದಿ ಸಾವನ್ನಪ್ಪಿದ್ದಾರೆ ಎನ್ನುತ್ತಾರೆ.
ವೀಲಿಂಗ್ ಮಾಡೋರು ದುಶ್ಚಟದ ದಾಸರಾಗುತ್ತಾರೆ.
ಸಾಮಾನ್ಯವಾಗಿ ವೀಲಿಂಗ್ ಮಾಡೋರು ದುಶ್ಚಟದ ದಾಸರಾಗುತ್ತಾರೆ. ಖಾಲಿ ರೋಡ್ ಗಳೇ ಇವರ ಅಡ್ಡವಾಗಿರುತ್ತದೆ..ಏನಾದರೂ ಆಗಲಿ, ಬೇರೆಯವರ ಜೀವದ ಜತೆ ಆಟವಾಡದೇ ಹೋದರೆ ಸಾಕು ಅಷ್ಟೆ.