ಸಂತೇಬೆನ್ನೂರು : ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಹರಿದ ನೋಟುಗಳು ಕೊಡೋದಿಲ್ಲ ಎಂದು ಗೊತ್ತಿರುವ ವಿಚಾರ. ಆದ್ರೆ ಇಲ್ಲೊಂದು ಘಟನೆ ನಡೆದಿದ್ದು, ಕಣ್ಮುಚ್ಚಿ ತೆರೆಯುವಷ್ಟರಲ್ಲಿ 11 ಸಾವಿರ ಎಗರಿಸಿರುವ ಘಟನೆ ನಡೆದಿದೆ.ಸಂತೆಬೆನ್ನೂರಿನ ಕೆನರಾಬ್ಯಾಂಕ್ ನಲ್ಲಿ ಈ ಘಟನೆ ನಡೆದಿದ್ದು, ಭೀಮನೆರೆ ಬಸವರಾಜ್ ಹಣ ಕಳೆದುಕೊಂಡ ನತದೃಷ್ಟರು.
ಭೀಮನೆರೆ ಬಸವರಾಜ್ ಹಣ ಬಿಡಿಸಿಕೊಳ್ಳಲು ಕೆನರಾಬ್ಯಾಂಕ್ ಗೆ ಹೋಗಿ 50,000 ಹಣ ಬಿಡಿಸಿಕೊಂಡರು. ಅಲ್ಲೆ ಇದ್ದ ವ್ಯಕ್ತಿಯೊಬ್ಬ ನೋಟಿನ ಕಟ್ಟಿನಲ್ಲಿ ಹರಿದ ನೋಟುಗಳಿರಬಹುದು ಪರಿಶೀಲಿಸುವೆ ಎಂದು ನೋಟಿನ ಕಟ್ಟನ್ನು ತೆಗೆದುಕೊಂಡಿದ್ದಾನೆ. ನಂತರ ಹಣ ಎಣಿಸುವ ನಾಟಕವಾಡಿ ಕಣ್ಣು ಬಿಡೋಷ್ಟರಲ್ಲಿ ರೂ.11 ಸಾವಿರ ಹಣ ಎಗರಿಸಿದ್ದಾನೆ. ಕ್ಯಾಶ್ ಕೌಂಟರ್ನಲ್ಲಿ ಭೀಮನೆರೆ ಬಸವರಾಜ್ ರೂ.500 ಮೌಲ್ಯದ 100 ನೋಟಿನ ಕಂತೆ ಪಡೆದಿದ್ದರು. ಹೀಗಿರುವಾಗ ಅಪರಿಚಿತ ವ್ಯಕ್ತಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ನವರು ಹರಿದ ನೋಟನ್ನು ಕಟ್ಟಿನಲ್ಲಿ ಇಟ್ಟಿರುತ್ತಾರೆ. ಅಲ್ಲದೇ ನಕಲಿ ನೋಟಿನ ಹಾವಳಿ ಇದೆ ಹುಷಾರ್ ಆಗಿ ಇರಬೇಕೆಂದು ನಂಬಿಸಿ ಹಣದ ಕಟ್ಟು ಪಡೆದಿದ್ದಾನೆ. ನಂತರ ಹಣವನ್ನು ಎಣಿಸಿ ಸರಿ ಇದೆ ಎಂದು ಕಟ್ಟನ್ನು ಹಿಂತಿರುಗಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.ಬಸವರಾಜ್ ಅವರು ನೋಟಿನ ಕಟ್ಟು ಸ್ವಲ್ಪ ಹಗುರಾಗಿದ್ದನ್ನು ಮನಗಂಡು ತಕ್ಷಣ ಮರು ಎಣಿಕೆ ಮಾಡಿದ್ದಾರೆ. ಆಗ ಕೇವಲ 78 ನೋಟುಗಳಿರುವುದು ಕಂಡು ಬಂದಿದೆ. ಅಲ್ಲದೇ 22 ನೋಟುಗಳನ್ನು ಅಪರಿಚಿತ ವ್ಯಕ್ತಿ ಎಗರಿಸಿ ಕಣ್ಮರೆ ಆಗಿದ್ದಾನೆ. ತಕ್ಷಣ ಬ್ಯಾಂಕ್ನ ಅಧಿಕಾರಿಗಳಿಗೆ ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಲು ಮನವಿ ಮಾಡಿದರು. ಅಲ್ಲೇ ಇದ್ದ ಗ್ರಾಹಕರು ಘಟನೆಗೆ ಅಚ್ಚರಿ ವ್ಯಕ್ತಪಡಿಸಿದರು. ಒಟ್ಟಾರೆ ಇಂತಹ ಘಟನೆಗಳು ಆಗಾಗ ನಡೆಯುತ್ತಿದ್ದು, ನಂಬಿಕೆಯೇ ಮುಳುವಾಯಿತು.