ದಾವಣಗೆರೆ : 2018ರಲ್ಲಿ ಹೆಚ್ಡಿಕೆ ರಾಮನಗರ ಮತ್ತು ಚನ್ನಪಟ್ಟಣ ಎರಡು ಕಡೆ ನಿಂತ್ಕೊಂಡು ಎರಡೂ ಕಡೆ ಗೆದ್ದಿದ್ರು. ಆದ್ರೆ ಯಾವಾಗ್ಲೂ ಹೀಗೆ ಗೆಲ್ಲೋದಕ್ಕಾಗುತ್ತಾ.? ಅದು ರಾಮನಗರ ಮತ್ತು ಚನ್ನಪಟ್ಟಣ ಬಿಟ್ಟು ಬಂದು ಈಗ ಮಂಡ್ಯದಲ್ಲಿ, ಅದು ಲೋಕಸಭಾ ಚುನಾವಣೆಗೆ ಕುಮಾರಸ್ವಾಮಿ ನಿಂತಿದ್ದಾರೆ. ಹಾಗಾದ್ರೆ ಕುಮಾರಸ್ವಾಮಿ ಮಂಡ್ಯದಿಂದ ಗೆದ್ದು ಕೇಂದ್ರದ ಮಂತ್ರಿಯಾಗೋ ಕನಸು ಕಟ್ಟಿದ್ದಾರಾ..? ಒಳ್ಳೆ ಹುಡುಗಿ ಸಿಕ್ಕಳು ಅಂತೇಳಿ HDK ಬೇರೆಯವರಿಗೆ ನೋಡಿರೋ ಹುಡುಗಿನ ಮದುವೆ ಯಾದ್ರಾ.? ಏನಿದು ಸಚಿವ ಚಲುವಣ್ಣ ಕೊಟ್ಟಿರೋ ಹಿಗ್ಗಾಮುಗ್ಗಾ ತಿರುಗೇಟು ಅಂದ್ರಾ?
ವಿರೋಧದ ನಡುವೆ ಮಂಡ್ಯದಿಂದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ಬಗ್ಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸ್ಪರ್ಧಿಸುವ ಬಗ್ಗೆ ಸಾಕಷ್ಟು ವಿರೋಧ ಹಾಗೂ ಒತ್ತಾಯಗಳು ಕೇಳಿ ಬಂದಿದ್ದವು. ಮಾತ್ರವಲ್ಲದೆ ಮೈತ್ರಿ ಪಕ್ಷ ಬಿಜೆಪಿ ಕೂಡ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಹೀಗಾಗಿ ಈ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸಿಎಸ್ ಪುಟ್ಟರಾಜು ಕಣಕ್ಕಿಳಿಯಲಿದ್ದಾರೆ ಅಂತೇಳಿ ಕುಮರಸ್ವಾಮಿ ಅವರೇ ಹೇಳಿದ್ದರು. ಆದರೀಗ ಅದು ಬದಲಾಗಿದೆ. ಮಂಡ್ಯದಿಂದ ಪುಟ್ಟರಾಜು ಬದಲು ಸ್ವತ: ಎಚ್ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುವುದು ಖಚಿತವಾಗಿದೆ.
ಈ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, ‘ಸಿಎಸ್ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿ ತಾವೇ ಅಭ್ಯರ್ಥಿ ಆಗುತ್ತಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತಾಗಿದೆ. ಒಳ್ಲೆ ಹುಡುಗಿ ಇದ್ದಾಳೆ. ಈ ಬಾರಿ ನಾನೇ ಮದುವೆ ಆಗುತ್ತೇನೆ. ಪುಟ್ಟರಾಜು ನಿನಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಎಂದಿದ್ದಾರೆ’ ಅಂತೇಳಿ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ. ‘ಪಾಪ ಆ ಪುಟ್ಟರಾಜ ಕೈಯಲ್ಲಿ ಸಭೆ ಮಾಡಿಸಿದರು. ಆತ ಎಲ್ಲಾ ದೇವಸ್ಥಾನಗಳನ್ನು ಸುತ್ತಿ ಬಂದ.
ಆದರೆ ಈಗ ಕುಮಾರಸ್ವಾಮಿ ಅವರು ಹುಡುಗಿ ಚೆನ್ನಾಗಿದ್ದಾಳೆ ನಾನೇ ಮದ್ವೆ ಆಗುತ್ತೇನೆ ಅಂತಿದ್ದಾರೆ. ಬುಟ್ಟಿಯೊಳಗೆ ನಾಗರಹಾವು ಇದೆ, ಬಿಡುತ್ತೇವೆ ಅಂತ ಹೇಳುತ್ತಿರುವ ಕುಮಾರಸ್ವಾಮಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಹೋದ ಕಡೆಯೆಲ್ಲಾ ನನ್ನ ಕರ್ಮ ಭೂಮಿ ಅಂತಾರೆ. ಮಂಡ್ಯ, ಹಾಸನ, ಕೋಲಾರ ಮೂರು ಆದರೆ ಪರವಾಗಿಲ್ಲ. ಚಿಕ್ಕಬಳ್ಳಾಪುರಕ್ಕೂ ತುಮಕೂರಿಗೂ ಹೋಗಿ ಬಂದಿದ್ದಾರೆ’ ಅಂತೇಳಿ ಕುಟುಕಿದ್ದಾರೆ.
ಇನ್ನೂ ಕಳೆದ ಚುನಾವಣೆಯಲ್ಲಿ ಸುಮಲತಾ ವಿರುದ್ಧ ನಿಂತಿದ್ದ ಕುಮಾರಸ್ವಾಮಿ ಈಗ ಅಕ್ಕ, ಅಮ್ಮ ಅಂತಿದ್ದಾರೆ. ಈ ಮಾತನ್ನು ಕಳೆದ ಚುನಾವಣೆಯಲ್ಲಿ ಅಂದಿದ್ದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು ಅಂತೇಳಿ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ನಿಮಗೆ ಗೊತ್ತಿರ್ಲಿ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಆದರೆ ಮದ್ದೂರು, ಮಳವಳ್ಳಿ ಭಾಗದ ಒಕ್ಕಲಿಗರು ಕುಮಾರಸ್ವಾಮಿ ಅವರ ಸ್ವರ್ಧೆಗೆ ಸಹಮತ ವ್ಯಕ್ತಪಡಿಸುತ್ತಿಲ್ಲ ಎನ್ನಲಾಗುತ್ತಿದೆ. ಆಪ್ತ ಬಳಗದವರು ಮಾತ್ರ ಕುಮಾರಸ್ವಾಮಿ ಅಭ್ಯರ್ಥಿ ಆಗಲೆಂದು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.
ಈಗ ಚನ್ನಪಟ್ಟಣ ಕಾರ್ಯಕರ್ತರ ಮಾತು ಧಿಕ್ಕರಿಸಿ ಮಂಡ್ಯ ಅಖಾಡಕ್ಕೆ ಕುಮಾರಸ್ವಾಮಿ ಧುಮುಕಿದ್ದಾರೆ. ಮುಂದಾಗುವ ಪರಿಣಾಮಗಳ ಕುರಿತು ತೀವ್ರ ಚಿಂತಿತರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತರೆ ಚನ್ನಪಟ್ಟಣ ಜನತೆ ಮುಂದೆ ಹೋಗುವುದು ಹೇಗೆ.? ಗೆದ್ದರೂ ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತೆ ಗೆಲುವು ಸಾಧಿಸುವುದು ಸುಲಭವೂ ಇಲ್ಲ ಅನ್ನೋ ಮಾತುಗಳೂ ಹರಿದಾಡ್ತಾಯಿವೆ. ಅಷ್ಟೇ ಅಲ್ಲ, ಮಂಡ್ಯದಲ್ಲಿ ಒಂದೊಮ್ಮೆ ಕುಮಾರಸ್ವಾಮಿ ಸೋತ್ರೆ ಚನ್ನಪಟ್ಟಣ ಬೈ ಎಲೆಕ್ಷನ್ನಲ್ಲಿ ಮತ್ತೆ ಕುಮಾರಸ್ವಾಮಿ ಅಥವಾ ಅವರ ಪುತ್ರ ನಿಖಿಲ್ ನಿಂತ್ರೂ ಸೋಲು ಕಟ್ಟಿಟ್ಟ ಬುತ್ತಿ ಅನ್ನೋ ಮಾತುಗಳು ಇವೆ.
ಅದೇನೇ ಇರ್ಲಿ, ಪದೇ ಪದೇ ಕ್ಷೇತ್ರ ಬದಲಿಸಿ ಕಾರ್ಯಕರ್ತರನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗಿದ್ದಾರೆ ಎಂಬ ಅಸಹನೆಯಿಂದ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷದತ್ತ ಮುಖಮಾಡಿದರೆ JDS ಭದ್ರಕೋಟೆಯಾದ ಚನ್ನಪಟ್ಟಣ ಅನ್ಯಪಕ್ಷದ ಪಾಲಾಗಬಹುದು ಅನ್ನೋ ಆತಂಕ ಕುಮಾರಸ್ವಾಮಿಗೆ ಕಾಡುತ್ತಿದೆ.