ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ನಲ್ಲಿ ಪ್ರಾಥಮಿಕ ಸ್ಥಾನ ಪಡೆದಿಲ್ಲ, ಪಕ್ಷ ವಿರೋಧಿ ಚಟುವಟಿಕೆ ನಿಲ್ಲಿಸದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತೇವೆಂಬ ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪರಿಗೆ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಕರ್ನಾಟಕ ರಾಜ್ಯ ಔಟ್ರೀಚ್ ಘಟಕದ ಉಪಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿರುಗೇಟು ನೀಡಿದ್ದಾರೆ.

ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ವಿಚಾರ ಸಂಬಂಧ ದೆಹಲಿಯ ಎಐಸಿಸಿ ಮಟ್ಟದಲ್ಲಿ ನನ್ನ ಹೆಸರು ಚರ್ಚೆಯಾಗಿದೆ. ಸುಮಾರು 25 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ನನ್ನ ಹೆಸರು ಪ್ರಸ್ತಾಪ ಮಾಡಿದ್ದರು. ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇನೆ. ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಕರ್ನಾಟಕ ರಾಜ್ಯ ಔಟ್ರೀಚ್ ಘಟಕದ ಉಪಾಧ್ಯಕ್ಷರನ್ನಾಗಿ ಘಟಕದ ರಾಷ್ಟ್ರಾಧ್ಯಕ್ಷ ಚಾಂಡಿ ಊಮನ್ ಅವರು ನೇಮಕ ಮಾಡಿದ್ದಾರೆ. ಹಾಗಿದ್ದರೆ ಚಾಂಡಿ ಊಮನ್ ಅವರು ಕಾಂಗ್ರೆಸ್ ಪಕ್ಷದವರಲ್ವಾ ಎಂದು ಪ್ರಶ್ನಿಸಿದ್ದಾರೆ. 

ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆಯದಿದ್ದರೆ ದೆಹಲಿ ಮಟ್ಟದಲ್ಲಿ ನನ್ನ ಹೆಸರು ಏಕೆ ಪ್ರಸ್ತಾಪ ಆಗುತಿತ್ತು? ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಹೆಸರು ಯಾಕೆ ಹೇಳುತ್ತಿದ್ದರು? ಜಿಲ್ಲೆಯಾದ್ಯಂತ ಓಡಾಡಿದ್ದೇನೆ, ಜನರು ಪ್ರೀತಿ, ವಿಶ್ವಾಸ ತೋರಿದ್ದಾರೆ. ಈಗ ಇಲ್ಲಸಲ್ಲದ ಮಾತು ಆಡುತ್ತಿರುವುದನ್ನು ನೋಡಿದರೆ ಹೆಚ್. ಬಿ. ಮಂಜಪ್ಪರಿಗೆ ಕಾಮನ್ ಸೆನ್ಸ್ ಇಲ್ಲ ಎಂದೆನಿಸುತ್ತಿದೆ. ಹಿಂದುಳಿದ ವರ್ಗಗಳ ನಾಯಕರು ಬೆಳೆಯಬಾರದು ಎಂಬ ಕುತಂತ್ರ ಇದರ ಹಿಂದೆ ಅಡಗಿದೆ. ಮಂಜಪ್ಪ ಅವರು ಮಾತನಾಡಿರುವ ರೀತಿ ನೋಡಿದರೆ ಅವರನ್ನು ಅಸ್ತ್ರವನ್ನಾಗಿಸಿಕೊಳ್ಳಲಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ. 

ಅಹಿಂದ ನಾಯಕನಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ಮಂಜಪ್ಪ ಅವರಿಂದ ಈ ರೀತಿ ಹೇಳಿಕೆ ಕೊಡಿಸಲಾಗಿದೆ. ಇದು ಸರಿಯಲ್ಲ. ಪಕ್ಷದಲ್ಲಿ ಹುದ್ದೆ ನೀಡಿದ್ದರೂ ಸಹ ನನಗೆ ಗೊತ್ತಿಲ್ಲ ಎಂಬ ಹೇಳಿಕೆ ನೀಡುತ್ತಿರುವ ಮಂಜಪ್ಪ ಅವರು ಮಾಹಿತಿ ಪಡೆದು ಮಾತನಾಡಲಿ. ಅದನ್ನು ಬಿಟ್ಟು ಅಹಿಂದ ಸಮುದಾಯದಲ್ಲಿ ಗೊಂದಲ ಮೂಡಿಸುವಂತೆ ಮಾತನಾಡಬಾರದು ಎಂದು ವಿನಯ್ ಕುಮಾರ್ ಹೇಳಿದ್ದಾರೆ. 

ಅಹಿಂದ ವರ್ಗಕ್ಕೆ ಮೊದಲಿನಿಂದಲೂ ಮೋಸ ಮಾಡಿಕೊಂಡೇ ಬರಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಿದ್ದೇನೆ. ಮಂಜಪ್ಪರೂ ಧ್ವನಿ ಎತ್ತಬೇಕಿತ್ತು. ಆದ್ರೆ ವಿಪರ್ಯಾಸ ಅಂದರೆ ನನ್ನ ವಿರುದ್ಧವೇ ಮಾತನಾಡಿದ್ದಾರೆ. ಕಾಂಗ್ರೆಸ್ ಪರವಾಗಿ ಓಡಾಡಿದ್ದೇನೆ. ಎಲ್ಲಾ ಕಡೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಹಿರಂಗವಾಗಿ ಹೇಳದಿದ್ದರೂ ನನಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಮಂಜಪ್ಪರು ಸಂಪೂರ್ಣ ಮಾಹಿತಿ ಪಡೆದು ಮಾತನಾಡಲಿ, ಅದಕ್ಕೆ ಅಭ್ಯಂತರ ಇಲ್ಲ. ಜನರಲ್ಲಿ ಗೊಂದಲ ಹುಟ್ಟುಹಾಕುವಂತೆ ಮಾತನಾಡಬಾರದು ಎಂದು ತಿಳಿಸಿದ್ದಾರೆ

Share.
Leave A Reply

Exit mobile version