ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಯ ಮಹತ್ವಕಾಂಕ್ಷೆಗೆ ಅಭಿನಂದಿಸಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ
ಭಾರತವು ಮೂರನೇ ಪ್ರಬಲ ಆರ್ಥಿಕತೆಯ ಶಕ್ತಿಯಾಗಲು ಉತ್ಪಾದನಾ, ಆರ್ಥಿಕ ಚಟುವಟಿಕೆಗಳು ಪ್ರಚಂಡವಾಗಿ ಆಗಬೇಕು
ದಾವಣಗೆರೆ :
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಡುತ್ತಿರುವ ಶಿಕ್ಷಣ ಸಂಸ್ಥೆಯಾಗಿರುವ ಜಿಎಂಐಟಿ ಪ್ರಸ್ತುತ ಜಿಎಂ ವಿಶ್ವವಿದ್ಯಾಲಯವಾಗಿ ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆ ಜಿ. ಮಲ್ಲಿಕಾರ್ಜುನಪ್ಪನವರ ದೂರದರ್ಶತ್ವದ ಕೊಡುಗೆ ಅಪಾರವಾಗಿದೆ ಎಂದು ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ಹೊಸ, ನವೀಕರಿಸಬಹುದಾದ ಶಕ್ತಿ ಮೂಲಗಳ ಇಲಾಖೆ ಸಚಿವರಾದ ಪ್ರಹ್ಲಾದ್ ಜೋಶಿ ಸ್ಮರಿಸಿದರು.
ಭೀಮಸಮುದ್ರದ ಶ್ರೀಶೈಲ ಎಜುಕೇಷನ್ ಟ್ರಸ್ಟ್ ನಡಿಯ ಜಿಎಂ ವಿಶ್ವವಿದ್ಯಾಲಯದಲ್ಲಿ ನವೆಂಬರ್ 12ರ ಮಂಗಳವಾರ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ನೆರವೇರಿಸಿ, ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಡಬೇಕೆಂಬ ಜಿ. ಮಲ್ಲಿಕಾರ್ಜುನಪ್ಪನವರ ದೂರ ದೃಷ್ಟಿಯನ್ನು ಅನುಸರಿಸಿ ಕೇಂದ್ರದ ಮಾಜಿ ಸಚಿವರಾದ ಜಿ. ಎಂ. ಸಿದ್ದೇಶ್ವರ ಮತ್ತು ಗಾಯತ್ರಿ ಸಿದ್ದೇಶ್ವರ ಅವರ ಮಾರ್ಗದರ್ಶನದಲ್ಲಿ ಜಿ.ಎಂ. ಪ್ರಸನ್ನ ಕುಮಾರ್, ಜಿ. ಎಂ. ಲಿಂಗರಾಜು, ಜಿ.ಎಸ್. ಅತೀತ್ ಕುಮಾರ್ ಮತ್ತಿತರರು ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವುದಕ್ಕೆ ನಾನು ಹೃದಯವಂತರಾಳದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಬಸವಣ್ಣನವರ ಅನುಭವ ಮಂಟಪದಲ್ಲೂ ಸಹ ಹೆಣ್ಣು ಮಕ್ಕಳಿಗೆ ಗೌರವ ಮತ್ತು ಮೊದಲ ಸ್ಥಾನ ನೀಡಲಾಗಿತ್ತು. ಮಹಿಳಾ ಮೀಸಲಾತಿಯಲ್ಲೂ ಮೊದಲ ಆದ್ಯತೆ ನೀಡಲಾಗಿದೆ. ವಿದ್ಯಾಭ್ಯಾಸದಲ್ಲಿ ಹೆಣ್ಣು ಮಕ್ಕಳು ಮೇಲುಗೈ ಸಾಧಿಸಬಲ್ಲರು ಎಂಬ ಹಿತದೃಷ್ಟಿಯಿಂದ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದಿರುವ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯದ ಪ್ರಾಮುಖ್ಯತೆ ಹೆಚ್ಚಾಗಿ ನೀಡಿರುವುದು ಖುಷಿ ವಿಚಾರ ಎಂದು ಸಂತಸಪಟ್ಟರು.
ಮಾನವ ಸಂಪನ್ಮೂಲಗಳನ್ನು ನಾವು ಎಷ್ಟು ಚೆನ್ನಾಗಿ ಬೆಳೆಸುತ್ತೇವೆಯೋ ಜಾಗತೀಕರಣ ಮಟ್ಟದಲ್ಲೂ ಕೂಡ ಅಷ್ಟೇ ಬೆಳವಣಿಗೆ ಮತ್ತು ಅವಕಾಶಗಳನ್ನು ಕಾಣಲು ಸಾಧ್ಯ. ಜಗತ್ತಿನ ಉತ್ಪಾದನಾ ಕೇಂದ್ರವು ಚೈನಾ ಎಂದು ಕೋವಿಡ್ ಗೂ ಮುನ್ನ ಹೇಳಲಾಗುತ್ತಿತ್ತು. ಪ್ರಸ್ತುತ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತ ಬದಲಾಗುತ್ತಿದೆ. ಜಗತ್ತಿನಾದ್ಯಂತ ಭಾರತಕ್ಕೆ ಮನ್ನಣೆ ನೀಡಲಾಗುತ್ತಿದೆ. ಅತ್ಯಧಿಕ ವಿದೇಶಿ ವಿನಿಮಯ ಮೀಸಲು ಹಣ ಕಂಡ ನಾಲ್ಕು ದೇಶಗಳಲ್ಲಿ ಭಾರತವು ಕೂಡ ಒಂದಾಗಿದೆ. ಹಿಂದೆ ವಿದೇಶಿ ವಿನಿಮಯ ಮೀಸಲು ಕಾಣದೆ ದುರ್ಬಲ ಆರ್ಥಿಕತೆಯ ದೇಶ ಎಂಬುದಾಗಿ ಭಾರತ ಎನಿಸಿಕೊಂಡಿತ್ತು. ಆದರೆ ಈಗ ಅತ್ಯಧಿಕ ವಿದೇಶಿ ವಿನಿಮಯ ಕಂಡು ಜಗತ್ತಿನ 5ನೇ ಆರ್ಥಿಕತೆಯ ಶಕ್ತಿಯಾಗಿ ಕಂಡುಕೊಳ್ಳಲಾಗಿದೆ ಎಂದರು.
ಜಗತ್ತಿನಲ್ಲಿ ಮಾನವ ಸಂಪನ್ಮೂಲ ಕಡಿಮೆಯಾಗಿದ್ದು, ಭಾರತ ಬೆಳವಣಿಗೆಯನ್ನ ಕಾಣಲಾಗುತ್ತಿದೆ. ಭಾರತವು ಮೂರನೇ ಪ್ರಬಲ ಆರ್ಥಿಕತೆಯ ಶಕ್ತಿಯಾಗಲು ಉತ್ಪಾದನಾ ಮತ್ತು ಆರ್ಥಿಕ ಚಟುವಟಿಕೆಗಳು ನಮ್ಮ ದೇಶದಲ್ಲಿ ಪ್ರಚಂಡವಾಗಿ ಆಗಬೇಕಿದೆ. ಜಗತ್ತಿನ ಅತ್ಯಂತ ಯುವರಾಷ್ಟ್ರ ಭಾರತವಾಗಿದ್ದು, ಯುವಕರ ಶಕ್ತಿ ಮತ್ತು ಪ್ರತಿಮೆಯನ್ನು ಗುರುತಿಸಿ ಅವರಲ್ಲಿ ಕೌಶಲ್ಯವನ್ನು ಅಭಿವೃದ್ಧಿಪಡಿಸಿದಾಗ ಜಗತ್ತು ಭಾರತದ ಸೇವೆ ಮತ್ತು ಉತ್ಪನ್ನಗಳನ್ನು ಒಪ್ಪಿಕೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟರು.
ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಆರ್. ಅಶೋಕ್ ಅವರು, ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪ್ರಸ್ತುತ ಉದ್ಯೋಗ ಮತ್ತು ಶಿಕ್ಷಣಕ್ಕೆ ಬಹಳ ಮಹತ್ವ ನೀಡಲಾಗಿದ್ದು, ಅಕ್ಷರ ಜ್ಞಾನವು ಪ್ರತಿ ಒಂದು ಕ್ಷೇತ್ರಕ್ಕೂ ಬೇಕೇ ಬೇಕಾಗಿದೆ. ವಿದ್ಯೆಯಲ್ಲಿ ಯಾವುದೇ ಬಡತನ, ಶ್ರೀಮಂತಿಕೆಯ ತಾರತಮ್ಯ ಇಲ್ಲ. ಪ್ರತಿಭೆ, ಕೌಶಲ್ಯ ಶಕ್ತಿ ಬಹುಮುಖ್ಯ. ಹೀಗೆ ಅಕ್ಷರ ಜ್ಞಾನದ ಜೊತೆಗೆ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿ. ಮಲ್ಲಿಕಾರ್ಜುನಪ್ಪನವರು ಸ್ಥಾಪಿಸಿದ ಈ ಶಿಕ್ಷಣ ಸಂಸ್ಥೆಯನ್ನು ಅವರ ಪುತ್ರರಾದ ಜಿಎಂ ಸಿದ್ದೇಶ್ವರ್ ಮತ್ತು ಅವರ ಕುಟುಂಬದವರು ಮುಂದೆಯೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ. ಇಂಜಿನಿಯರಿಂಗ್, ಮೆಡಿಕಲ್, ತಾಂತ್ರಿಕ ಕಾಲೇಜುಗಳು ಸ್ಥಾಪನೆಯಾಗಿ ಜ್ಞಾನ ಮತ್ತು ಕೌಶಲ್ಯ ಕಂಡಾಗ ಯಾವುದೇ ಜಿಲ್ಲೆಯು ಅಭಿವೃದ್ಧಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಜಿಎಂ ವಿಶ್ವವಿದ್ಯಾನಿಲಯ ವಿಶಾಲಾವಾಗಿ ಬೆಳೆದು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖೇನ ಅಕ್ಷರ ಜ್ಞಾನ ನೀಡುವ ಜೊತೆಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟು ಬದುಕು ಹಸನು ಮಾಡಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ಮಕ್ಕಳಿಗೆ ಮೀನು ಹಿಡಿದು ತಂದು ತಿನ್ನಿಸುವುದಲ್ಲ. ಮೀನು ಹಿಡಿಯುವುದನ್ನು ಕಲಿಸಬೇಕು ಎಂಬುದಾಗಿ ಉದಾಹರಣೆ ನೀಡುತ್ತಾ, ಕೇವಲ ಶಾಲಾ, ಕಾಲೇಜುಗಳಿಗೆ ಕಳಿಸಿ ವಿದ್ಯಾಭ್ಯಾಸ ಕೊಡಿಸಿದರೆ ಸಾಲದು ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳುವ ಸಲುವಾಗಿ ಉದ್ಯೋಗವನ್ನು ಕೂಡ ಪಡೆಯುವಂತಹ ಶಕ್ತಿಯನ್ನು ನೀಡಬೇಕಾಗಿದೆ. ಉದ್ಯೋಗ ಪಡೆಯದೇ ಇದ್ದರೆ ದೊಡ್ಡ ಸಮಸ್ಯೆಯಾಗಿ ಮಾರ್ಪಾಡಲಿದೆ. ಯಾವುದೇ ಸರಕಾರಗಳು ಸಹ ಉದ್ಯೋಗ ಸೃಷ್ಟಿಸುವ ಕೆಲಸವನ್ನೂ ಮಾಡಬೇಕಿದೆ. ನಮ್ಮ ದೇಶದಲ್ಲೇ ಗುಣಮಟ್ಟದ ಶಿಕ್ಷಣ ಕೊಟ್ಟಾಗ ಆ ಶಿಕ್ಷಣಕ್ಕಾಗಿ ಬೇರೆ ದೇಶಗಳಿಗೆ ನಮ್ಮ ದೇಶದಿಂದ ಹೋಗುವುದು ಕಡಿಮೆ ಆಗುವುದರ ಜೊತೆಗೆ ನಮ್ಮ ದೇಶಕ್ಕೇ ಬರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಆಶಿಸಿದರು.
ಹರಿಹರ ಶಾಸಕರಾದ ಬಿ.ಪಿ. ಹರೀಶ್, ವಿಧಾನ ಪರಿಷತ್ ಸದಸ್ಯರುಗಳಾದ ಎನ್. ರವಿಕುಮಾರ್ ಮಾತನಾಡುತ್ತಾ, ಜಾಗತಿಕ ವಿಶ್ವವಿದ್ಯಾಲಯವಾಗಿ, ಉತ್ತಮ ಶಿಕ್ಷಣ ಕೇಂದ್ರವಾಗಿ ಹೆಸರು ಪಡೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವರಾದ ಡಾ. ಜಿ.ಎಂ. ಸಿದ್ದೇಶ್ವರ, 2001ರಲ್ಲಿ ನಮ್ಮ ತಂದೆಯವರಾದ ಜಿ. ಮಲ್ಲಿಕಾರ್ಜುನಪ್ಪ ಅವರ ಹಂಬಲದಂತೆ ಈ ಸಂಸ್ಥೆ ಹುಟ್ಟಿತು. ಇದಕ್ಕೆ ತುಮಕೂರು ಮಾಜಿ ಸಂಸದರಾದ ಬಸವರಾಜಪ್ಪ ಅವರ ಸಹಕಾರವೂ ಇತ್ತು. ಹಾಗಾಗಿ ಈ ಇಬ್ಬರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುಮತಿ ಪಡೆದು ಪ್ರಾರಂಭವಾಯಿತು. ಅಂದು 181 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಇದೀಗ 8 ಸಾವಿರ ವಿದ್ಯಾರ್ಥಿಗಳು ವಿದ್ಯೆ ಪಡೆಯುತ್ತಿದ್ದಾರೆ. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮಶನ್ ಟೆಕ್ನಾಲಜಿ ಈ ಮೂರು ಕೋರ್ಸ್ ಗಳಿದ್ದ ಈ ಸಂಸ್ಥೆಯಲ್ಲಿ ಈಗ ಜಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಿಎಂ ಪಾಲಿಟೆಕ್ನಿಕ್ ಕಾಲೇಜ್, ಜಿಎಂ ಪಿಯು ಕಾಲೇಜ್, ಜಿಎಂಎಸ್ ಅಕಾಡೆಮಿ ಫಸ್ಟ್ ಗ್ರೇಡ್ ಕಾಲೇಜ್, ಜಿಎಂ ಫಾರ್ಮಸಿ ಕಾಲೇಜ್, ಜಿಎಂ ಯುನಿವರ್ಸಿಟಿ ಆಗಿ ಬೆಳೆದು ವಿವಿಧ ಕೋರ್ಸ್ ಗಳ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಪ್ರಸ್ತುತ ದುಡ್ಡೇ ದೊಡ್ಡಪ್ಪ ಅಲ್ಲ ವಿದ್ಯೆ ಅದರಪ್ಪ ಆಗಿದೆ. ಹಾಗಾಗಿ ಬಡ, ನಿರ್ಗತಿಕ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕೆಂಬ ಹಂಬಲವಿಟ್ಟು ಸ್ಥಾಪಿಸಿದ ಈ ಸಂಸ್ಥೆಯಲ್ಲಿ ಜ್ಞಾನದ ಜೊತೆಗೆ ಉದ್ಯೋಗವನ್ನು ಸಹ ಕಲ್ಪಿಸಿಕೊಡಲಾಗುತ್ತಿದೆ. ಈ ಸಂಸ್ಥೆಯಲ್ಲಿ ಓದಿದರೆ ಉದ್ಯೋಗವು ಖಾಯಂ ಆಗಲಿದೆ ಎಂಬುದಕ್ಕೆ ಇಲ್ಲಿ ವಿಧ್ಯೆ ಪಡೆದ ಮಕ್ಕಳು ಉದ್ಯೋಗ ಪಡೆಯುತ್ತಿರುವುದೇ ಸಾಕ್ಷಿ ಎಂದರು.
ಇದೇ ವೇಳೆ ಕೇಂದ್ರದ ಮಾಜಿ ಸಚಿವರಾದ ಅನಂತ್ ಕುಮಾರ್ ಅವರ 6ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಒಂದು ನಿಮಿಷ ಮೌನಾಚರಿಸಿ ಅನಂತ ಸ್ಮರಣೆ ಮುಖೇನ ನೆನಪಿಸಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಬಿಜೆಪಿ ಮುಖಂಡರಾದ ಶ್ರೀಮತಿ ಜಿ.ಎಸ್. ಗಾಯತ್ರಿ ಸಿದ್ದೇಶ್ವರ, ಕೆ.ಎಸ್. ನವೀನ್, ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು, ಟ್ರಸ್ಟಿಗಳಾದ ಜಿ.ಎಂ. ಪ್ರಸನ್ನಕುಮಾರ್, ಜಿ.ಎಸ್. ಅನಿತ್ ಕುಮಾರ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಹೆಚ್.ಪಿ. ರಾಜೇಶ್, ವಿರೇಶ್ ಹನಗವಾಡಿ, ರಾಜೀವ್, ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್, ಜಿ.ಪಿ. ಮಲ್ಲಿಕಾರ್ಜುನ್, ಶೀಲಾ ಪ್ರಸನ್ನಕುಮಾರ್, ವೀಣಾ ಲಿಂಗರಾಜು, ಸವಿತಾ ಅನಿತ್ ಕುಮಾರ್, ಜಿ.ಎಲ್. ರಾಜೀವ್ ಹಾಗೂ ಕುಲಸಚಿವರಾದ ಡಾ. ಬಿ.ಎಸ್. ಸುನೀಲ್ ಕುಮಾರ್, ಯುವ ವಾಣಿಜ್ಯೋದ್ಯಮಿ ಜಿ.ಎಲ್. ರಾಜೀವ್ ಸೇರಿದಂತೆ ಇನ್ನಿತರರು ಭಾಗವಹಿಸಿ ಸಮಾರಂಭದ ಯಶಸ್ವಿಗೆ ಕಾರಣಿಭೂತರಾದರು.
ಜಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ ಸ್ವಾಗತಿಸಿದರು. ಸಹ ಕುಲಪತಿಗಳಾದ ಡಾ. ಹೆಚ್.ಡಿ. ಮಹೇಶಪ್ಪ ವಂದಿಸಿದರು