ದಾವಣಗೆರೆ;  ಮಾಜಿ ಸಚಿವೆ, ದಾವಣಗೆರೆಯ ‘ಮದರ್ ಥೆರೇಸಾ’ ಎಂದೇ ಹೆಸರಾಗಿದ್ದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರು ಶನಿವಾರ ಸಂಜೆ 4.30ಕ್ಕೆ ನಿಧನ ಹೊಂದಿದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮಾಯಕೊಂಡ ಹಾಗೂ ದಾವಣಗೆರೆ ವಿಧಾನಸಭಾ ಕ್ಷೇತ್ರಗಳಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಕಯಾಗಿದ್ದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರು ಎರಡು ಬಾರಿ ಮಂತ್ರಿಯಾಗಿ ಒಮ್ಮೆ ಡೆಪ್ಯೂಟಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. 

ಗುಂಡೂರಾವ್ ಹಾಗೂ ವೀರಪ್ಪ ಮೊಯ್ಲಿ ಅವಧಿಯಲ್ಲಿ ಶಿಕ್ಷಣ ಮಂತ್ರಿಗಳಾಗಿ, ಒಮ್ಮೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿಯಾಗಿ ಅಪ್ರತಿಮ ಸೇವೆ ಸಲ್ಲಿಸಿದ್ದರು. ಕೆಲ ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ ನಾಗಮ್ಮ ಕೇಶವಮೂರ್ತಿ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

ಪುತ್ರ ಡಾ|| ಸಿ.ಕೆ.ಜಯಂತ್, ಸೊಸೆ ಡಾ|| ಶೀಲಾ ಜಯಂತ್ ಹಾಗೂ ಮೊಮ್ಮಗಳನ್ನು ಅಗಲಿರುವ ನಾಗಮ್ಮನವರ ಅಂತ್ಯಕ್ರಿಯೆ ಭಾನುವಾರ (ಇಂದು) ಮಧ್ಯಾಹ್ನ 3 ಗಂಟೆಗೆ ದಾವಣಗೆರೆಯ ವೈಕುಂಠ ಧಾಮದಲ್ಲಿ ನೆರವೇರಲಿದೆ.

ಬೆಂಗಳೂರಿನ ಎಂ.ಎನ್.ರಾಮನ್ ಮತ್ತು ಸಾಕಮ್ಮ ದಂಪತಿಗಳ ಪುತ್ರಿಯಾಗಿದ್ದ ನಾಗಮ್ಮನವರು 1951ರಲ್ಲಿ ದಾವಣಗೆರೆಯ ಉದ್ಯಮಿ, ಚನ್ನಗಿರಿ ರಂಗಪ್ಪನವರ 2ನೇ ಪುತ್ರ ಸಿ ಕೇಶವಮೂರ್ತಿ ಅವರನ್ನು ವಿವಾಹವಾಗಿ ದಾವಣಗೆರೆಗೆ ಬಂದರು.

ತಮ್ಮ ಅತ್ತೆ ಶ್ರೀಮತಿ ರಾಧಮ್ಮ ಅವರ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿದರು. 1955ರಲ್ಲಿ ವನಿತಾ ಸಮಾಜವನ್ನು ಆರಂಭಿಸಿ ಅದರಲ್ಲಿ 52 ಅಂಗ ಸಂಸ್ಥೆಗಳನ್ನು ಸ್ಥಾಪಿಸಿದರು.ವನಿತಾ ಸಮಾಜದ ಆತ್ಮ: ‘ಸೇವೆಯೇ ಪರಮೋ ರ‍್ಮಹ’ ಎಂಬ ಧ್ಯೇಯ ವಾಕ್ಯದಡಿ ಗರ್ಭದಲ್ಲಿರುವ ಮಗುವಿನಿಂದ ಹಿಡಿದು ಸಾಯುವ ಹಂತದವರೆಗೆ ಮಹಿಳೆಗೆ ಎಲ್ಲ ರೀತಿಯ ನೆರವು, ಸೌಲಭ್ಯ, ಸ್ವಾವಲಂಬನೆಗೆ ದಾರಿ ಹುಡುಕಿ ಕೊಟ್ಟ ನಾಗಮ್ಮನವರು ದಾವಣಗೆರೆಯ ಮದರ್ ಥೆರೇಸಾ ಎಂದೇ ಖ್ಯಾತರಾಗಿದ್ದರು.ವನಿತಾ ಸಮಾಜ ಅವರ ನಿಜವಾದ ಆತ್ಮವಾಗಿತ್ತು.

ರಾಜಕೀಯ, ಶಿಕ್ಷಣ, ಸಮಾಜ ಸೇವೆ, ಮಹಿಳಾ ಜಾಗೃತಿ, ಸಂಗೀತ, ಸಾಹಿತ್ಯ, ಹಾಸ್ಯ, ಆಧ್ಯಾತ್ಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ನಾಗಮ್ಮನವರು ಜನ ಮೆಚ್ಚಿದ ನಾಯಕಿಯಾಗಿದ್ದರು.

ರಾಷ್ಟ್ರಮಟ್ಟದಲ್ಲಿ ರಾಜಕೀಯ ಪ್ರವೇಶದ ನಂತರ ರಾಷ್ಟ್ರಮಟ್ಟದಲ್ಲಿಶ್ರೀಮತಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ದೇವರಾಜ ಅರಸು, ಎಸ್.ನಿಜಲಿಂಗಪ್ಪ, ಮಾರ್ಗರೇಟ್ ಆಳ್ವ ಆಪ್ತರಾಗಿದ್ದರು.

  • ಸಾಧನೆಗಳು:
  • l 1955- ವನಿತಾ ಸಮಾಜದ ಆರಂಭ
  • l 1968-ರಾಜಕೀಯ ಪ್ರವೇಶ, ದಾವಣಗೆರೆ ನಗರಸಭೆ ಸದಸ್ಯೆಯಾಗಿ ಆಯ್ಕೆ
  • l 1972- ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆ
  • l 1981- ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವೆಯಾಗಿ ಪ್ರಮಾಣ ವಚನ
  • l 1988- ಡೆಪ್ಯುಟಿ ಸ್ಪೀಕರ್, ನಂತರ ಭಾರೀ ಕೈಗಾರಿಕಾ ಸಚಿವೆ, ನಂತರ ಶಿಕ್ಷಣ ಸಚಿವೆ
  • l ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
  • ಪ್ರಶಸ್ತಿ ಪುರಸ್ಕಾರಗಳು
  • l 1994- ಯಂಗ್ ಇಂಡಿಯಾ ಅವಾರ್ಡ್
  • l 2001-ಯಶೋಧರಾ ದಾಸಪ್ಪ ಪ್ರಶಸ್ತಿ
  • l 2003- ಕರ್ನಾಟಕ ಸರ್ಕಾರದ ಕಿತ್ತೂರು ಚನ್ನಮ್ಮ ಪ್ರಶಸ್ತಿ
  • l 2010- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • l 2010- ಸಾಯಿಬಾಬಾ ಅವರಿಂದ ‘ಈಶ್ವರಮ್ಮ ಪುರಸ್ಕಾರ’
  • l 2012- ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

ನೇರ ನೇಮಕಾತಿ ಜಾರಿಗೊಳಿಸಿದ ನಾಗಮ್ಮ

ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಲು ನೇರ ನೇಮಕಾತಿ ಪದ್ಧತಿ ಜಾರಿಗೊಳಿಸುವ ಮೂಲಕ ಅರ್ಹರಿಗೆ ಉದ್ಯೋಗ ಸಿಗುವ  ವ್ಯವಸ್ಥೆ ತಂದರು. ಈ ಮೂಲಕ ಮಕ್ಕಳಿಗೆ ಗುಣಮಟ್ಟದ ಬೋಧನೆ ಸಿಗುವ ಜೊತೆಗೆ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಿದ್ದರು’ ಎಂದು ಮಾಜಿ ಸಚಿವ ಎಚ್.ಆಂಜನೇಯ ಸ್ಮರಿಸಿದ್ದಾರೆ.ನನ್ನಂತಹ ಯುವಕರು ರಾಜಕೀಯದತ್ತ ಆಕರ್ಷಣೆ ಬೆಳೆಸಿಕೊಂಡು ಉನ್ನತ ಸ್ಥಾನಮಾನ ಪಡೆಯಲು ನಾಗಮ್ಮ ಕೇಶವಮೂರ್ತಿ ಅವರೇ ಮುಖ್ಯ ಕಾರಣಕರ್ತರು. ನಮ್ಮನ್ನು ಸ್ವಂತ ಮಕ್ಕಳಂತೆ ಕಾಣುತ್ತಿದ್ದ, ನಮ್ಮ ರಾಜಕೀಯ ಬೆಳವಣಿಗೆಗೆ ಶ್ರಮಿಸುತ್ತಿದ್ದ ಅವರು ನಮ್ಮ ಪಾಲಿಗೆ ರಾಜಕೀಯ ಗುರು ಅಷ್ಟೇ ಅಲ್ಲದೇ ಅಮ್ಮ ಆಗಿದ್ದರು’ ಎಂದು ಸ್ಮರಿಸಿದರು. 

ಸಂತಾಪ: ನಾಗಮ್ಮ ಕೇಶವಮೂರ್ತಿಯವರ ನಿಧನಕ್ಕೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌‌.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ‌.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸಂತಾಪ ವ್ಯಕ್ತಪಡಿಸಿದ್ದಾರೆ.

 

Share.
Leave A Reply

Exit mobile version